ಶಿವಣ್ಣ-ಡಾಲಿ ಸಿನಿಮಾಗಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‌ಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಗಾಗಿ ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಸೆಟ್ ರೆಡಿಯಾಗಿದೆ. ಶಿವಣ್ಣ-ಡಾಲಿ ಒಟ್ಟಿಗೆ ನಟಿಸುತ್ತಿರುವ ಬಹು ನಿರೀಕ್ಷಿತ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾವನ್ನು ಹೇಮಂತ್ ನಿರ್ದೇಶಿಸುತ್ತಿದ್ದಾರೆ. ಸದ್ಯ ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತಕ್ಕೆ ಸಜ್ಜಾಗುತ್ತಿದೆ.
ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಶಿವಣ್ಣ-ಧನಂಜಯ್ ಮತ್ತೆ ಒಂದಾಗಿರುವುದು ಹಾಗೂ ಹೇಮಂತ್ ಡೈರೆಕ್ಷನ್ ಆಗಿರುವುದರಿಂದ ಕಥೆ ಹೇಗಿರಬಹುದು ಎಂಬ ಕುತೂಹಲವಿದೆ. ಟಗರು ಬಳಿಕ ಈ ಜೋಡಿ ಮತ್ತೆ ಒಂದಾಗಿದ್ದು, 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಪೋಸ್ಟರ್ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ರೆಟ್ರೋ ಲುಕ್‌ನಲ್ಲಿ ಶಿವಣ್ಣ ಹಾಗೂ ಧನಂಜಯ್ ಕಾಣಿಸಿಕೊಂಡಿದ್ದು, ಈ ಗೆಟಪ್ ನೋಡುತ್ತಿದ್ದರೆ ಡಾ.ರಾಜ್‌ಕುಮಾರ್ ಅವರ ಸ್ಪೈ ಸಿನಿಮಾಗಳನ್ನು ನೆನಪಿಸುವಂತಿದೆ.

ಈಗಾಗಲೇ ಮೊದಲ ಹಂತದ ಶೂಟಿಂಗ್‌ನಲ್ಲಿ ಶಿವಣ್ಣ ಹಾಗೂ ಧನಂಜಯ್ ಭಾಗಿಯಾಗಿದ್ದರು. ಇದೀಗ ಇದೇ ತಿಂಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಬೃಹತ್ ಆಕಾರದ ಸೆಟ್‌ನಲ್ಲಿ ಬರೋಬ್ಬರಿ 100 ದಿನಗಳ ಕಾಲ ಶೂಟಿಂಗ್ ನಡೆಯಲಿದೆಯಂತೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಬಗ್ಗೆ ಎಲ್ಲವನ್ನೂ ಹೇಮಂತ್ ರಾವ್ ಮತ್ತು ಅವರ ತಂಡ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದೆ. ನಾವು ಇಂದಿನ ಪೀಳಿಗೆಯನ್ನು ಬೆರಗುಗೊಳಿಸುವ ಮತ್ತು ಹಿಂದಿನ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯುವ ಜಗತ್ತನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಚಿತ್ರದ ನಿರ್ಮಾಪಕ ಡಾ.ವೈಶಾಕ್ ಜೆ.ಗೌಡ ಮಾಹಿತಿ ನೀಡಿದ್ದಾರೆ. ಆದರೆ ಯಾವ ರೀತಿಯ ಸೆಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಪ್ರೇಕ್ಷಕರಿಗಾಗಿ ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈ ಬಗ್ಗೆ ಅಪ್‌ಡೇಟ್ ಶೀಘ್ರದಲ್ಲೇ ನೀಡುತ್ತೇನೆ ಎಂದಿದ್ದಾರೆ.

ರೆಟ್ರೋ ಶೈಲಿಯಲ್ಲಿ ಮೂಡಿಬರುತ್ತಿರುವ, ಧನಂಜಯ್ ಹಾಗೂ ಶಿವಣ್ಣ ಅವರು '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೈಶಾಕ್ ಜೆ. ಗೌಡ ಅವರ ವೈಶಾಕ್ ಜೆ.ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಲಾಗುತ್ತಿದ್ದು, ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅದ್ಧೂರಿ ಸೆಟ್‌ನಲ್ಲಿ ಈ ಸಿನಿಮಾ ಶೂಟಿಂಗ್ ನಡೆಯಲಿದೆ. ಈಗಾಗಲೇ ಶಿವಣ್ಣ ಹಾಗೂ ಡಾಲಿ ರೆಟ್ರೋ ಲುಕ್ ರಿವೀಲ್ ಆಗಿದ್ದು, ಸಖತ್ ವೈರಲ್ ಆಗಿದೆ.












Click it and Unblock the Notifications