ಕಾಂತಾರ ಚಾಪ್ಟರ್-1 ಶೂಟಿಂಗ್ ಮುಂದುವರಿಯುತ್ತಾ? ಜಿಲ್ಲಾಧಿಕಾರಿ ಮಹತ್ವದ ಮಾಹಿತಿ
ನಟ ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್-1 (Kantara Chapter ) ಸಿನಿಮಾಗೆ ವಿಘ್ನಗಳು ಎದುರಾಗುತ್ತಲೇ ಇವೆ. ಸದ್ಯ ಶಿವಮೊಗ್ಗ ಜಿಲ್ಲೆಯ ಹೊಸನಗರದ ಸಮೀಪ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ಸ್ಥಳದಲ್ಲಿ ಇತ್ತೀಚೆಗೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿತ್ತು. ಈ ವದಂತಿಯನ್ನ ಚಿತ್ರತಂಡ ತಳ್ಳಿಹಾಕಿದೆ. ಆದರೆ ಮಾಧ್ಯಮಗಳ ವರದಿ ಆಧರಿಸಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಚಿತ್ರತಂಡದಿಂದ ಮಾಹಿತಿ ಕೇಳಿದ್ದು, ಶೂಟಿಂಗ್ ನಿಲ್ಲಿಸುವ ಎಚ್ಚರಿಕೆ ನೀಡಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಈ ಸಿನಿಮಾ ಶೂಟಿಂಗ್ ನಿಲ್ಲುತ್ತಾ? ಮುಂದುವರಿಯುತ್ತಾ? ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿ ಏನೋ ಸಮಸ್ಯೆಯಾಗಿತ್ತು ಎಂದು ವರದಿಯಾಗಿತ್ತು. ಜೂನ್ 15ರಂದು ಶೂಟಿಂಗ್ ಸ್ಥಳಕ್ಕೆ ಪೋಲಿಸರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೋರಾದ ಗಾಳಿಯಿಂದ ಶೂಟಿಂಗ್‌ಗೆ ಹಾಕಿದ್ದ ಸೆಟ್ ಬಿದ್ದಿದೆಯಷ್ಟೆ. ಅಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಯಾರಿಗೂ ಗಾಯ ಕೂಡ ಆಗಿಲ್ಲ ಎಂದಿದ್ದಾರೆ. ಅಲ್ಲದೆ ನಮ್ಮ ತಹಶೀಲ್ದಾರ್ ಅವರು ಚಿತ್ರತಂಡಕ್ಕೆ ನೋಟಿಸ್ ಕೂಡ ನೀಡಿದ್ರು. ಕಾಂತಾರ ಚಿತ್ರತಂಡ ಸ್ಥಳೀಯವಾಗಿ ಎಲ್ಲರಿಂದ ಅನುಮತಿ ಪಡೆದಿದೆ ಎಂದು ವಿವರಿಸಿದ್ದಾರೆ.

ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆಯ ಒಪ್ಪಿಗೆ ಕೂಡ ಪಡೆದಿದ್ದಾರೆ. ಚಿತ್ರತಂಡ ಇದನ್ನು ನಮಗೆ ಸಲ್ಲಿಕೆ ಮಾಡಿದ್ದಾರೆ. ಹಾಗಾಗಿ ಅವರ ಚಿತ್ರೀಕರಣ ಮುಂದುವರಿಸಲು ಅವಕಾಶ ನೀಡಿದ್ದೇವೆ. ಚಿತ್ರತಂಡ ಶೂಟಿಂಗ್ ಮುಂದುವರಿಸಲು ಯಾವುದೇ ಅಭ್ಯಂತರವಿಲ್ಲ. ಅವರು ಈ ಶೂಟಿಂಗ್ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಇದರ ಬಗ್ಗೆ ಅವರಿಗೆ ತಿಳಿಹೇಳಿದ್ದೇವೆ. ಬೇರೆ ಸ್ಥಳದಲ್ಲಿ ಶೂಟಿಂಗ್ ಮಾಡುವಾಗ ಗಮನಕ್ಕೆ ತರಬೇಕು, ಗಮನಕ್ಕೆ ತಂದರೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ.
ಚಿತ್ರತಂಡ ಮೊದಲೇ ನಮಗೆ ಮಾಹಿತಿ ನೀಡಿದರೆ ಅವರಿಗೂ ಅನುಕೂಲ. ಒಂದು ವೇಳೆ ಏನಾದರೂ ಘಟನೆ ನಡೆದರೆ ನಾವೂ ಸ್ಪಂದಿಸಬಹುದು. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಶೂಟಿಂಗ್ ಕೂಡ ಮುಂದುವರಿಸಬಹುದು ಎಂದು ಹೇಳಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇಂತಹ ಚಿತ್ರೀಕರಣಗಳು ನಡೆಯಬೇಕು. ಇದರಿಂದ ಪ್ರವಾಸೋದ್ಯಮಕ್ಕೆ ಕೂಡ ಅನುಕೂಲವಾಗುತ್ತೆ. ಜಿಲ್ಲೆಯಲ್ಲಿ ಒಳ್ಳೆಯ ಸ್ಥಳಗಳಿವೆ. ನಾವು ಕೂಡ ಚಿತ್ರೀಕರಣಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಚಿತ್ರತಂಡಕ್ಕೆ ತಹಶೀಲ್ದಾರ್ ನೋಟಿಸ್
ಶೂಟಿಂಗ್ ವೇಳೆ ದೋಣಿ ಮುಗುಚಿಬಿದ್ದಿದೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆ ಹೊಸನಗರ ತಹಶೀಲ್ದಾರ್ ಕೂಡ ಚಿತ್ರತಂಡಕ್ಕೆ ನೋಟಿಸ್ ನೀಡಿ ಘಟನೆ ಬಗ್ಗೆ ಸ್ಪಷ್ಟೀಕರಣ ಕೇಳಿದ್ದರು. ಚಿತ್ರೀಕರಣದ ಸಮಯದಲ್ಲಿ ಮಾಣಿ ಜಲಾಶಯದಲ್ಲಿ ದೋಣಿ ಮುಗುಚಿ 30 ಜನ ನೀರಿನಲ್ಲಿ ಈಜಿ ದಡ ಸೇರಿರುತ್ತಾರೆ, ಒಂದು ಅಂಬುಲೆನ್ಸ್ ಚಿತ್ರೀಕರಣದ ಸ್ಥಳದಿಂದ ತೀರ್ಥಹಳ್ಳಿ ಕಡೆ ಹೋಗಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು, ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರತಂಡ ಶೂಟಿಂಗ್‌ಗೆ ಪಡೆದಿರುವ ಅನುಮತಿ ಪತ್ರಗಳನ್ನು ಹಾಜರುಪಡಿಸಿ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಅವಶ್ಯವಿರುವುದರಿಂದ ದಾಖಲೆಗಳೊಂದಿಗೆ ಸ್ಪಷ್ಟೀಕರಣ ನೀಡಿ, ಇಲ್ಲದಿದ್ದರೆ ಅನುಮತಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದೀಗ ಚಿತ್ರತಂಡ ಎಲ್ಲ ದಾಖಲೆಗಳನ್ನು ಒದಗಿಸಿರುವ ಹಿನ್ನೆಲೆ ಶೂಟಿಂಗ್ ಮುಂದುವರಿಸಲು ಇದ್ದ ಅಡ್ಡಿಆತಂಕ ದೂರವಾಗಿದೆ.












Click it and Unblock the Notifications