Shakhahaari OTT: ಒಟಿಟಿಯಲ್ಲಿ ಪ್ರೇಕ್ಷಕರನ್ನು ಆವರಿಸಿದ 'ಶಾಖಾಹಾರಿ', ಮಿಸ್ ಮಾಡದೇ ಚಿತ್ರ ನೋಡಿ!
ಒಟಿಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡುವುದಿಲ್ಲ ಆರೋಪಗಳ ಬೆನ್ನಲ್ಲೇ, ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಅನೇಕ ಸಿನಿಮಾಗಳು ಅಪಾರ ಮೆಚ್ಚುಗೆ ಪಡೆಯುತ್ತಿವೆ. ಕಳೆದ ವಾರ ಬಿಡುಗಡೆಯಾಗಿರುವ 'ಬ್ಲಿಂಕ್' ಮತ್ತು 'ಶಾಖಾಹಾರಿ' ಸಿನಿಮಾಗಳಿಗೆ ಪ್ರೇಕ್ಷಕ ಪ್ರಭು ಜೈ ಎಂದಿದ್ದು, ಛೇ ಇಂಥ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡೆವಲ್ಲಾ ಎನ್ನುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸಬರ ಜೊತೆಗೆ ಅನುಭವಿ ತಾರಾಬಳಗ ಕೈ ಜೋಡಿಸಿದಾಗ ಅದ್ಭುತ ಸಿನಿಮಾಗಳು ತಯಾರಾಗುತ್ತವೆ ಎನ್ನುವುದಕ್ಕೆ 'ಬ್ಲಿಂಕ್' ಮತ್ತು 'ಶಾಖಾಹಾರಿ' ಉತ್ತಮ ಉದಾಹರಣೆ. ಗಟ್ಟಿ ಕಥೆ, ಚಿತ್ರಕಥೆಯಿಂದ ಶಾಖಾಹಾರಿ ಜನರನ್ನು ತನ್ನತ್ತ ಸೆಳೆಯುತ್ತಿದ್ದು, 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿದೆ.

4 ದಿನದಲ್ಲಿ 10 ಮಿಲಿಯನ್ ಸ್ಟ್ರೀಮಿಂಗ್ ಕಂಡ ಶಾಖಾಹಾರಿ!
ಫೆಬ್ರವರಿ 16 ರಂದು ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಎಂದಿದ್ದಾರೆ. ಮಲಯಾಳಂ ಚಿತ್ರರಂಗ ಮಾತ್ರವಲ್ಲ ನಮ್ಮ ಸಿನಿಮಾಗಳು ಕೂಡ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುತ್ತಿವೆ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿದೆ ಶಾಖಾಹಾರಿ.
ನಟ ನೀನಾಸಂ ಸತೀಶ್ ಶಾಖಾಹಾರಿ ಸಿನಿಮಾವನ್ನು ಹೊಗಳಿದ್ದಾರೆ. "ಯಾವ ನೀರಿಕ್ಷೆಯು ಇಲ್ಲದೆ ಸುಮ್ಮನೆ ಸಿನಿಮಾ ನೋಡುತ್ತಾ ಹೋದಾಗ, ಸಿನಿಮಾ ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ. ಪ್ರಾಮಾಣಿಕವಾಗಿ, ಯಾರನ್ನೂ ಮೆಚ್ಚಿಸಲು ಅಲ್ಲದೆ ತಮ್ಮಷ್ಟಕ್ಕೆ ತಂಡ ಧ್ಯಾನಿಸಿದೆ. ಸಿನಿಮಾ ಬರೀ ನಿರ್ದೇಶಕ ಅಥವಾ ನಟರಲ್ಲದೆ ಸಮೂಹದ ಕೆಲಸ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಇದು ನೋಡಲೇಬೇಕಾದ ನಮ್ಮ ಚಿತ್ರ" ಎಂದು ಹೇಳಿದ್ದಾರೆ.

ಸಂದೀಪ್ ಸುಂಕದ್ ನಿರ್ದೇಶನದ 'ಶಾಖಾಹಾರಿ' ಸಿನಿಮಾದ ಸೂತ್ರಧಾರಿ.ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ, ಉಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಪ್ರತಿಭಾ ನಾಯಕ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್ ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ ಬಂಡವಾಳ ಹೂಡಿದ್ದಾರೆ.












Click it and Unblock the Notifications