ಶೈಲಶ್ರೀ ಸುದರ್ಶನ್ ಹೇಳಿದ್ದೆಲ್ಲವೂ ಸುಳ್ಳಾ? ನಟಿ ಬಳಿಯಿದ್ದ ಮನೆ & ಕಾರು ಏನಾಯ್ತು?
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಸೊಸೆ, ಹಿರಿಯ ನಟ ಸುದರ್ಶನ್ ಅವರ ಪತ್ನಿ ನಟಿ ಶೈಲಶ್ರೀ ಸುದರ್ಶನ್ ಅವರು ಸದ್ಯ ವೃದ್ಧಾಶ್ರಮ ಸೇರಿದ್ದಾರೆ. ಈ ಸುದ್ದಿ ಬಹಿರಂಗಗೊಳ್ಳುವುದರ ಜೊತೆಗೆ ಶೈಲಶ್ರೀ ಸುದರ್ಶನ್ ಅವರಿಗೆ ನಟ ದರ್ಶನ್ ಹಾಗೂ ಗಿರಿಜಾ ಲೋಕೇಶ್ ಸಹಾಯ ಮಾಡಿದರು ಎನ್ನುವ ವಿಚಾರ ಕೂಡ ಹೊರಬಿದ್ದಿತ್ತು.
ಹಾಗಾದರೆ ಗಿರಿಜಾ ಲೋಕೇಶ್, ನಟ ದರ್ಶನ್ ಹೊರತುಪಡಿಸಿ ಚಿತ್ರರಂಗದ ಒಂದು ಹಿರಿಯ ಕುಟುಂಬದ ಸದಸ್ಯೆ, ಹಿರಿಯ ನಟಿಯ ಸಹಾಯಕ್ಕೆ ಬೇರೆ ಯಾರೂ ಬರಲಿಲ್ಲವೇ ಎನ್ನುವ ಪ್ರಶ್ನೆ ಮೂಡಿತ್ತು. ಇದೀಗ ಈ ಪ್ರಶ್ನೆಗೆ ಈ ಹಿಂದೆ ಶೈಲಶ್ರೀ ಸುದರ್ಶನ್ ಅವರ ಆರೈಕೆ ಮಾಡಿದ್ದ ಪರಮ್ ಗುಬ್ಬಿ ಉತ್ತರ ನೀಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೈಲಶ್ರೀ ಸುದರ್ಶನ್ ಅವರಿಗೆ ಕ್ಯಾನ್ಸರ್ ಚಿಕಿತ್ಸೆ ವೇಳೆ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಅವರು, ಆ ಸಮಯದಲ್ಲಿ ನಟಿಯ ಸಹಾಯಕ್ಕೆ ನಿಂತವರ ಹೆಸರಿನ ಜೊತೆಗೆ ಅವರು ಕೊಟ್ಟ ಹಣದ ಮೊತ್ತವನ್ನು ಕೂಡ ಹಂಚಿಕೊಂಡಿದ್ದಾರೆ. 'ಸತ್ಯ ಒಂದು ಕಡೆ ನಿಂತರೆ. ಸುಳ್ಳು ಊರೆಲ್ಲ ಸುತ್ತುತ್ತಿದೆ. ಹಿರಿಯ ಚಲನಚಿತ್ರ ಕಲಾವಿದೆ ಶೈಲಶ್ರೀ ಅವರಿಗೆ ಉಪಕರಿಸಿದ್ದು ಗಿರಿಜಾ ಲೋಕೇಶ್ 1,30,000 ರೂಪಾಯಿ ವಿನೋದ್ ರಾಜ್ (ಎರಡು ವರ್ಷಗಳಿಂದ ಪ್ರತಿ ತಿಂಗಳು ಐದು ಸಾವಿರ ರೂಪಾಯಿ), ಡಾಲಿ ಧನಂಜಯ 50,000 ರೂಪಾಯಿ,
ಹಿರಿಯ ನಟ ದೊಡ್ಡಣ್ಣ 5,000 ರೂಪಾಯಿ, ಎ.ಆರ್.ಮಣಿಕಾಂತ್ 3,000 ರೂಪಾಯಿ, ಚಾಮರಾಜಪೇಟೆ ರಾಜು 5,000 ರೂಪಾಯಿ, ದೇವನಹಳ್ಳಿಯ ಮೋಹನ್ ಬಾಬು 5,000 ರೂಪಾಯಿ, ನಿಡಸಾಲೆ ಪುಟ್ಟಸ್ವಾಮಯ್ಯ 5,000 ರೂಪಾಯಿ, ದೀಪಕ್ ಶಶಿಕುಮಾರ್, ಅಕಾಡಮಿ ಅಧ್ಯಕ್ಷರಾದ ಅಶೋಕ್ ಕಶ್ಯಪ್ 75,000 ರೂಪಾಯಿ, ಅಭಯ ಶೀಲಾ 5,000 ರೂಪಾಯಿ, ಶಿಕ್ಷಕಿ ಶ್ರೀಮತಿ ಸ್ಮಿತಾ 5,000 ರೂಪಾಯಿ
ಧೀನಬಂಧು ಪತ್ರಿಕೆಯ ನರಸಿಂಹರಾಜು 10,000 ರೂಪಾಯಿ' ಎಂದು ಸುದೀರ್ಘ ವಿವರಣೆ ನೀಡಿದ್ದಾರೆ.
ಪರಮ್ ಗುಬ್ಬಿ ಅವರು ಇಷ್ಟೊಂದು ಸವಿವರವಾದ ವಿವರಣೆ ಕೊಡಲು ಕಾರಣವಾಗಿದ್ದು ಆ ಒಂದು ಮಾತು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಯಶಸ್ ಟಾಕೀಸ್ ಯೂಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿದ ಅವರು, 'ಖಾಸಗಿ ಚಾನೆಲ್‌ನಲ್ಲಿ ಅವರು ಒಂದು ಮಾತು ಹೇಳಿದರು. ಕ್ಯಾನ್ಸರ್ ಎಂದು ಸುಳ್ಳು ಹೇಳಿ ಒಬ್ಬ ವ್ಯಕ್ತಿ ನಮಗೆ ಮೋಸ ಮಾಡಿದರು ಅಂತಾ ಹೇಳಿದನ್ನು ಕೇಳಿ ನನಗೆ ಆಘಾತವಾಯ್ತು. ನೋವಾಯ್ತು ಕೂಡ. ಹೇಗಿದ್ದರೂ ಇದರ ಸತ್ಯಾಸತ್ಯತೆ ಬಗ್ಗೆ ತಿಳಿದು ಬರಲೇಬೇಕು'.

'ನಾಳೆ ಆ ವ್ಯಕ್ತಿ ಯಾರು? ಎಷ್ಟು ದುಡ್ಡು ಮಾಡಿದ ಎಂದು ಯಾರೋ ಪ್ರಶ್ನೆ ಮಾಡುವ ಮುನ್ನ ನಾನೇ ಹೊರಗಡೆ ಬಂದು ಎಲ್ಲವನ್ನೂ ಹೇಳಿ, ಯಾರು ಎಷ್ಟು ಸಹಾಯ ಮಾಡಿದರು, ಏನಾಗಿತ್ತು ಎನ್ನುವುದನ್ನು ಹೇಳುವುದು ಒಳ್ಳೆಯದು ಅನಿಸಿತು. ಅಂದಿನ ದಿನದಲ್ಲಿ ಏನಾಯ್ತು ಎನ್ನುವುದು ವಾಣಿಜ್ಯ ಮಂಡಳಿಯವರಿಗೆ ಗೊತ್ತು. ಅಕಾಡೆಮಿ ಅವರಿಗೆ ಗೊತ್ತು. ಯಾರು, ಎಷ್ಟು ಕೊಟ್ಟಿದ್ದಾರೆ ಎಂದು ಅವರ ಹೆಸರಿನೊಂದಿಗೆ ಬರೆದು ಇಟ್ಟಿದ್ದೇವೆ' ಎಂದರು.
'ಇನ್ನು ತಮ್ಮ ಸ್ವಂತಕ್ಕೆ, ತಮ್ಮ ಹೊಗಳಿಕೆಗೆ, ಏನೋ ಹೇಳಲು ಹೋಗಿ, ಅನುಕಂಪ ಪಡೆಯಲು ಮತ್ತೇನೋ ಸುಳ್ಳುಸುದ್ದಿ ಹೇಳಿ, ಇನ್ನೂ ಜನರನ್ನು ಹಾದಿ ತಪ್ಪಿಸಿ, ಕರುಣೆ ಗಿಟ್ಟಿಸಿಕೊಳ್ಳಲು ಹೋಗಿ, ನಮಗಿಂತ ಇನ್ನೊಬ್ಬರು ಬುದ್ಧಿವಂತರು ಇಲ್ಲಾ ಎನ್ನುವುದನ್ನು ತೋರಿಸಿಕೊಳ್ಳಲು ಹೋಗಿ, ಏನೇನೋ ಮಾಡಲು ಹೋಗುತ್ತಾರೆ. ಆ ವಯಸ್ಸಿಗೆ ಅದು ಒಳ್ಳೆಯದಲ್ಲಾ. ಈ ವಯಸ್ಸಿನಲ್ಲಿ ಅವರು ಎಲ್ಲರನ್ನೂ ಸಮನಾಗಿ ಕಾಣಬೇಕು, ಪ್ರೀತಿಯಿಂದ ಕಾಣಬೇಕು, ಬೇರಯವರಿಗೆ ಮಾರ್ಗದರ್ಶಕರಾಗಿರಬೇಕು. ಅದನ್ನು ಬಿಟ್ಟು ಬೇರೆ ರೀತಿ ನಡೆದುಕೊಂಡರೆ ತಪ್ಪಾಗುತ್ತದೆ. ಅಲ್ಲದೇ ತಪ್ಪು ಮಾಹಿತಿ ನೀಡುವುದು ಕೂಡ ತಪ್ಪಾಗುತ್ತದೆ. ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವುದು ಮನುಷ್ಯನ ದೊಡ್ಡ ದುರಂತ' ಎಂದು ಪರಮ್ ಗುಬ್ಬಿ ಹೇಳಿದರು.
ಶೈಲಾಶ್ರೀ ಸುದರ್ಶನ್ ಅನಾಥಾಶ್ರಮದಲ್ಲಿರುವುದು ನಿಜಾನಾ?
'ನಾನು ಶೈಲಶ್ರೀ ಅವರನ್ನು ಭೇಟಿಯಾಗದೇ ಒಂದು ವರ್ಷ ಆಯ್ತು. ಒಂದು ವರ್ಷದಿಂದ ನಾನು ಅವರನ್ನು ಯಾವುದೇ ಕಾರಣಕ್ಕೂ ಭೇಟಿಯಾಗಿಲ್ಲ. ಆದರೆ ಅವರನ್ನು ಅನಾಥಾಶ್ರಮಕ್ಕೆ ಸೇರಿಸಿದ್ದಾರೆ ಎನ್ನುವುದೇ ಒಂದು ಅಪವಾದ. ಅದು ಅನಾಥಾಶ್ರಮ ಅಲ್ಲ, ಬದಲಿಗೆ ಎಲ್ಲಾ ಸೌಲಭ್ಯ ಇರುವ ಒಂದು ವೃದ್ಧಾಶ್ರಮ. ಅಲ್ಲಿ ಯಾವುದೇ ಕೊರತೆ ಇಲ್ಲದೇ ಎಲ್ಲರನ್ನೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೀಗಾಗಿ ಅವರು ನಿರ್ಗತಿಕರಾಗಿ ಅನಾಥಾಶ್ರಮ ಸೇರಿದ್ದಾರೆ ಎನ್ನುವುದು ತಪ್ಪಾಗುತ್ತದೆ. ಅನುಕಂಪ ಗಟ್ಟಿಸಿಕೊಳ್ಳಬಾರದು. ಒಳ್ಳೆಯ ಜಾಗಕ್ಕೆ ಗಿರಿಜಾ ಲೋಕೇಶ್ ಅವರು ಸೇರಿಸಿದ್ದಾರೆ' ಎಂದು ಹೇಳಿದರು.

ಶೈಲಾಶ್ರೀ ಸುದರ್ಶನ್ ಅವರ ಮನೆ ಮತ್ತು ಕಾರು ಏನಾಯ್ತು?
ಶೈಲಾಶ್ರೀ ಸುದರ್ಶನ್ ಅವರು ಮೊದಲಿದ್ದ ಅಪಾರ್ಟ್‌ಮೆಂಟ್ ಒಡೆದು ಹಾಕಿದರು. ಹೀಗಾಗಿ ಅವರು ಆಶ್ರಮ ಸೇರಿದರು ಎನ್ನುವ ವಿಚಾರ ಮೊದಲು ತಿಳಿದು ಬಂದಿತ್ತು. ಈ ಬಗ್ಗೆ ಪರಮ್ ಗುಬ್ಬಿ ಮಾತನಾಡಿದ್ದು, 'ಅಲ್ಲಿ ಮನೆ ಒಡೆದು ಹಾಕಿಲ್ಲ, ಅಪಾರ್ಟ್‌ಮೆಂಟ್ ಹಾಗೆಯೇ ಇದೆ. ಅವರಿಂದ ಅಲ್ಲಿ ಇರುವವರಿಗೆ ಟಾರ್ಚರ್ ಆಯ್ತು. ಅಲ್ಲಿನ ಅಕ್ಕಪಕ್ಕದವರು ದಯಮಾಡಿ ಇವರನ್ನು ಮನೆ ಖಾಲಿ ಮಾಡಿಸಿಕೊಂಡು ಕರೆದುಕೊಂಡು ಹೋಗಿ ಅಂತಾ ನಮಗೆ ಹೇಳುತ್ತಿದ್ದರು. ಐದು, ಹತ್ತು ರೂಪಾಯಿಗೆ ಜಗಳ ಮಾಡುವುದು. ಇದರಿಂದ ಎಲ್ಲರಿಗೂ ಬೇಜಾರಾಗಿತ್ತು'.
'ಸುದರ್ಶನ್ ಸರ್ ಅವರ ಕಾರೊಂದು ಮಾರಾಟ ಮಾಡಬೇಕಿತ್ತು. ಅದು ಹಳೆಯ ಕಾರು ಆಗಿದ್ದ ಕಾರಣ ಅದನ್ನು ಮಾರಿ ಎರಡು, ಮೂರು ಲಕ್ಷ ಕೊಡಿಸಿ ಅಂತಾ ಎನ್ನುತ್ತಿದ್ದರು. ಅದಕ್ಕೆ ನಾವು ಅದನ್ನು ಯಾರಿಗೋ ಮಾರುವ ಬದಲು ಧರ್ಮಸ್ಥಳಕ್ಕೆ ಕೊಟ್ಟುಬಿಡಿ. ಅಲ್ಲಿ ಚೆನ್ನಾಗಿ ಇರುತ್ತದೆ. ನಿಮ್ಮ ಹೆಸರಿನಲ್ಲೇ ಇರುತ್ತದೆ ಎಂದು ಹೇಳಿದ್ದೇವು. ಆದರೆ ಅವರು ಅದನ್ನು ಯಾರಿಗೆ ಕೊಟ್ಟರೋ ಗೊತ್ತಿಲ್ಲ. ಅವರ ಬಳಿ ಆರ್ಟಿಫಿಷಲ್ ಆಭರಣಗಳು ಇದ್ದವು. ಮನೆ ಕೂಡ ಚೆನ್ನಾಗಿತ್ತು' ಎಂದು ಪರಮ್ ಗುಬ್ಬಿ ಹಿರಿಯ ನಟಿ ಶೈಲಶ್ರೀ ಸುದರ್ಶನ್ ಅವರ ಬಗ್ಗೆ ತಮಗೆ ಗೊತ್ತಿರುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications