ಸಿನಿಮಾ ಟು ಪಾಲಿಟಿಕ್ಸ್: ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ ಕನ್ನಡ ಚಿತ್ರರಂಗದ ನಟ-ನಟಿಯರು
ಕರ್ನಾಟಕದ ರಾಜಕೀಯ ಮತ್ತು ಚಿತ್ರರಂಗದ ನಡುವಿನ ಸಂಬಂಧಕ್ಕೆ ದಶಕಗಳ ಇತಿಹಾಸವಿದೆ. ಬೆಳ್ಳಿತೆರೆಯ ಮೇಲೆ ಜನಪ್ರಿಯತೆ ಗಳಿಸಿದ ನಟ-ನಟಿಯರು ಸಾರ್ವಜನಿಕ ಸೇವೆಯ ಆಸಕ್ತಿಯಿಂದ ರಾಜಕೀಯ ಅಖಾಡಕ್ಕೆ ಇಳಿಯುವುದು ಸ್ಯಾಂಡಲ್‌ವುಡ್‌ನಲ್ಲಿಯೂ ಸಾಮಾನ್ಯ. ನೆರೆಯ ರಾಜ್ಯಗಳಾದ ತಮಿಳುನಾಡು ಅಥವಾ ಆಂಧ್ರಪ್ರದೇಶದಂತೆ ಇಲ್ಲಿ ನೇರವಾಗಿ ನಟರೇ ಮುಖ್ಯಮಂತ್ರಿಯಾದ ಉದಾಹರಣೆಗಳು ಇಲ್ಲದಿದ್ದರೂ, ಅನೇಕ ತಾರೆಗಳು ಶಾಸಕರಾಗಿ, ಸಂಸದರಾಗಿ ಮತ್ತು ಸಚಿವರಾಗಿ ನಾಡಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿನಿಮಾದ ಗ್ಲಾಮರ್ ಮತ್ತು ರಾಜಕೀಯದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕರ್ನಾಟಕದ ಪ್ರಮುಖ ಚಿತ್ರತಾರೆಗಳ ರಾಜಕೀಯ ಪಯಣದ ಚಿತ್ರಣ ಇಲ್ಲಿದೆ.
ಅಂಬರೀಶ್ (ರೆಬೆಲ್ ಸ್ಟಾರ್)
ಕನ್ನಡ ಚಿತ್ರರಂಗದ 'ರೆಬೆಲ್ ಸ್ಟಾರ್' ಅಂಬರೀಶ್ ಅವರು ಸಿನಿಮಾದಲ್ಲಿ ಎಷ್ಟು ದೊಡ್ಡ ಸ್ಟಾರ್ ಆಗಿದ್ದರೋ, ರಾಜಕೀಯದಲ್ಲೂ ಅಷ್ಟೇ ಪ್ರಭಾವಶಾಲಿಯಾಗಿದ್ದರು. ಅವರು 1994ರಲ್ಲಿ ಜನತಾದಳದ ಮೂಲಕ ರಾಜಕೀಯಕ್ಕೆ ಬಂದರು. ಆದರೆ, ಅವರ ನಿಜವಾದ ರಾಜಕೀಯ ಅಲೆ ಶುರುವಾಗಿದ್ದು 1998ರಲ್ಲಿ. ಅಂದು ಮಂಡ್ಯದಿಂದ ಸಂಸದರಾಗಿ (MP) ಆಯ್ಕೆಯಾಗುವ ಮೂಲಕ ದೆಹಲಿಗೆ ಹೋದರು. ನಂತರ ಕಾಂಗ್ರೆಸ್ ಪಕ್ಷ ಸೇರಿದ ಅವರು 1999 ಮತ್ತು 2004ರಲ್ಲೂ ಸತತವಾಗಿ ಗೆದ್ದು ಮಂಡ್ಯದ ಮೇಲೆ ತಮ್ಮ ಹಿಡಿತ ಸಾಧಿಸಿದರು. ಅಂಬರೀಶ್ ಅವರು ಕೇವಲ ಸಂಸದರಾಗಿ ಸೀಮಿತವಾಗದೆ, ದೆಹಲಿಯಲ್ಲಿ ಕೇಂದ್ರ ಸಚಿವರಾಗಿ ಮತ್ತು ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ವಸತಿ ಸಚಿವರಾಗಿಯೂ ಕೆಲಸ ಮಾಡಿದರು. ಅಂಬರೀಶ್ ಅವರ ರಾಜಕೀಯ ಜೀವನದಲ್ಲಿ ಕಾವೇರಿ ನೀರಿನ ವಿವಾದ ಬಂದಾಗ ಅವರು ರೈತರ ಪರವಾಗಿ ತಮ್ಮ ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆ ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ.

ಅನಂತ್ ನಾಗ್
ಸಿನಿಮಾದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಗುರುತಿಸಿಕೊಂಡಿದ್ದ ಅನಂತ್ ನಾಗ್, ರಾಜಕೀಯದಲ್ಲೂ ಗಂಭೀರ ವ್ಯಕ್ತಿತ್ವದ ನಾಯಕರಾಗಿದ್ದರು. ಅವರು 1970ರ ದಶಕದಲ್ಲೇ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಇವರು ಮೊದಲು 1988ರಿಂದ 1994ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ (MLC) ಕೆಲಸ ಮಾಡಿದರು. ನಂತರ 1994ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಶಾಸಕರಾಗಿ (MLA) ಆಯ್ಕೆಯಾದರು.
ಅನಂತ್ ನಾಗ್ ಅವರು ಕೇವಲ ಶಾಸಕರಾಗಿ ಉಳಿಯದೆ ಸಚಿವರೂ ಆಗಿದ್ದರು. ಜೆ.ಎಚ್. ಪಟೇಲ್ ಅವರ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನಗರದ ಏಳಿಗೆಗಾಗಿ ಕೆಲಸ ಮಾಡಿದರು. ಅಂದು ಅವರು ಮುಖ್ಯಮಂತ್ರಿಗಳಿಗೆ ಅತ್ಯಂತ ಆಪ್ತ ಸಚಿವರಾಗಿದ್ದರು. 2004 ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ವಿರುದ್ಧ ಚುನಾವಣೆಗೆ ನಿಂತು ಸೋಲನ್ನು ಅನುಭವಿಸಿದರು. ಈ ಸೋಲಿನ ನಂತರ ಅವರು ಸಕ್ರಿಯ ರಾಜಕೀಯದಿಂದ ದೂರ ಉಳಿದು ಮತ್ತೆ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.
ಉಮಾಶ್ರೀ
ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ ಅವರು ರಾಜಕೀಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಬಂದ ಇವರು, ಮೊದಲು 2001 ರಿಂದ 2006 ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿ (MLC) ಕೆಲಸ ಮಾಡಿದರು. ನಂತರ 2013ರ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆಯ ತೇರದಾಳ ಕ್ಷೇತ್ರದಿಂದ ಗೆದ್ದು ಶಾಸಕಿಯಾದರು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ ಉತ್ತಮ ಕೆಲಸ ಮಾಡಿದರು. 2018ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ, ಇಂದಿಗೂ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ನಟಿ ರಮ್ಯಾ
ನಟಿ ರಮ್ಯಾ (ದಿವ್ಯ ಸ್ಪಂದನ) ಅವರು 2012ರಲ್ಲಿ ಯುವ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದರು. 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದು, ದೇಶದ ಅತ್ಯಂತ ಕಿರಿಯ ಸಂಸದೆಯರಲ್ಲಿ ಒಬ್ಬರಾಗಿ ದೆಹಲಿ ಪ್ರವೇಶಿಸಿದರು. 2014ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ, ಕಾಂಗ್ರೆಸ್ ಪಕ್ಷ ಅವರಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಜವಾಬ್ದಾರಿ ನೀಡಿತು. 2017ರಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ನೇಮಕಗೊಂಡ ಅವರು, ಪಕ್ಷದ ಡಿಜಿಟಲ್ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದರು. 2018ರಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಅವರು ಕ್ರಮೇಣ ರಾಜಕೀಯ ಚಟುವಟಿಕೆಗಳಿಂದ ದೂರ ಸರಿದರು. ಪ್ರಸ್ತುತ ಅವರು ಚಿತ್ರರಂಗದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ರಾಜಕೀಯಕ್ಕೆ ಮರಳುವ ಬಗ್ಗೆ ಯಾವುದೇ ಆಸಕ್ತಿ ತೋರಿಸಿಲ್ಲ.
ಸುಮಲತಾ ಅಂಬರೀಶ್
ಖ್ಯಾತ ನಟಿ ಸುಮಲತಾ ಅವರು ತಮ್ಮ ಪತಿ ಅಂಬರೀಶ್ ಅವರ ನಿಧನದ ನಂತರ 2019ರಲ್ಲಿ ರಾಜಕೀಯಕ್ಕೆ ಬಂದರು. ಅಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ದೊಡ್ಡ ಅಲೆ ಎಬ್ಬಿಸಿದರು. ಪ್ರಬಲ ವಿರೋಧದ ನಡುವೆಯೂ ಭರ್ಜರಿ ಜಯ ಸಾಧಿಸುವ ಮೂಲಕ, ಕರ್ನಾಟಕದ ಇತಿಹಾಸದಲ್ಲೇ ಪಕ್ಷೇತರವಾಗಿ ಗೆದ್ದ ಮೊದಲ ಮಹಿಳಾ ಸಂಸದೆಯಾಗಿ ದಾಖಲೆ ಬರೆದರು. ಐದು ವರ್ಷಗಳ ಕಾಲ ಮಂಡ್ಯದ ಸಂಸದೆಯಾಗಿ ಕೆಲಸ ಮಾಡಿದ ಅವರು, 2024ರಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾದರು. ಸದ್ಯಕ್ಕೆ ಅವರು ದೆಹಲಿ ರಾಜಕಾರಣಕ್ಕಿಂತ ಹೆಚ್ಚಾಗಿ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಲು ಆಸಕ್ತಿ ತೋರಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಇವರು, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ನಾಯಕಿಯಾಗಿ ಮುಂದುವರಿಯುವ ಗುರಿ ಹೊಂದಿದ್ದಾರೆ.
ನವರಸ ನಾಯಕ ಜಗ್ಗೇಶ್
ಕನ್ನಡದ 'ನವರಸ ನಾಯಕ' ಜಗ್ಗೇಶ್ ಅವರು ಸಿನಿಮಾದಷ್ಟೇ ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ. ಇವರು 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ತುರುವೇಕೆರೆ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು. ನಂತರ ಬಿಜೆಪಿ ಸೇರಿದ ಇವರು ವಿಧಾನ ಪರಿಷತ್ ಸದಸ್ಯರಾಗಿ (MLC) ಮತ್ತು ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು. 2018ರ ಚುನಾವಣೆಯಲ್ಲಿ ಸೋತರೂ, ಇವರ ಪಕ್ಷ ನಿಷ್ಠೆಯನ್ನು ಮೆಚ್ಚಿದ ಬಿಜೆಪಿ 2022ರಲ್ಲಿ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿತು. ಪ್ರಸ್ತುತ ಇವರು ದೆಹಲಿಯಲ್ಲಿ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವಿಶಿಷ್ಟ ಶೈಲಿಯ ಭಾಷಣಗಳ ಮೂಲಕ ಜಗ್ಗೇಶ್ ರಾಜಕೀಯದಲ್ಲೂ ಎಲ್ಲರ ಗಮನ ಸೆಳೆಯುತ್ತಾರೆ.
ಬಿ.ಸಿ. ಪಾಟೀಲ್
ಸಿನಿಮಾ ರಂಗದಲ್ಲಿ 'ಕೌರವ' ಎಂದೇ ಖ್ಯಾತರಾದ ಬಿ.ಸಿ. ಪಾಟೀಲ್ ಅವರು ಮೊದಲು ಪೊಲೀಸ್ ಅಧಿಕಾರಿಯಾಗಿದ್ದರು. ನಂತರ ರಾಜಕೀಯಕ್ಕೆ ಬಂದು ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು. ಇವರು 2004ರಲ್ಲಿ ಜೆಡಿಎಸ್ ಮೂಲಕ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ನಂತರ ಕಾಂಗ್ರೆಸ್ ಸೇರಿ 2008 ಮತ್ತು 2018ರ ಚುನಾವಣೆಗಳಲ್ಲಿ ಶಾಸಕರಾಗಿ ಗೆದ್ದರು. 2019ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಆನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದು ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದರು. ರೈತರ ಹಿತಕ್ಕಾಗಿ 'ರೈತ ವಿದ್ಯಾನಿಧಿ'ಯಂತಹ ಯೋಜನೆಗಳನ್ನು ಜಾರಿಗೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ಉಪೇಂದ್ರ
ಖ್ಯಾತ ನಟ ಉಪೇಂದ್ರ ಅವರು ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ತರಲು 'ಉತ್ತಮ ಪ್ರಜಾಕೀಯ ಪಕ್ಷ' (UPP) ಎಂಬ ಹೊಸ ಪಕ್ಷವನ್ನು ಕಟ್ಟಿದ್ದಾರೆ. ಇವರ ರಾಜಕೀಯ ಉಳಿದವರಿಗಿಂತ ಭಿನ್ನವಾಗಿದೆ. ಇಲ್ಲಿ 'ರಾಜ' ಮುಖ್ಯವಲ್ಲ, 'ಪ್ರಜೆ'ಗಳೇ ಮುಖ್ಯ. ಹಣ ಚೆಲ್ಲಿ ಮತ ಕೇಳುವ ಪದ್ಧತಿಯನ್ನು ಉಪೇಂದ್ರ ವಿರೋಧಿಸುತ್ತಾರೆ. ಜನರೇ ತಮ್ಮ ಕೆಲಸದ ಬಗ್ಗೆ ನಿರ್ಧರಿಸುವ ಮತ್ತು ಕೆಲಸ ಮಾಡುವವರ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಇವರು ಬಯಸುತ್ತಾರೆ.ಉಪೇಂದ್ರ ಅವರು ಈವರೆಗೆ ಸ್ವತಃ ಚುನಾವಣೆಗೆ ನಿಂತಿಲ್ಲ. ಆದರೆ, ಅವರ ಪಕ್ಷದ ಮೂಲಕ ರೈತರು, ಆಟೋ ಚಾಲಕರು ಮತ್ತು ಸಾಮಾನ್ಯ ಜನರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುತ್ತಾರೆ.
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ' ಎಂಬ ಜನಪ್ರಿಯ ನಾಟಕದಲ್ಲಿ ನಟಿಸಿ, ಅದೇ ಹೆಸರಿನಿಂದಲೇ ಖ್ಯಾತರಾದ ಎಚ್.ಎನ್. ಚಂದ್ರಶೇಖರ್ ಅವರು ಕನ್ನಡದ ಹಿರಿಯ ನಟ ಮತ್ತು ಪ್ರಭಾವಿ ರಾಜಕಾರಣಿ. ಇವರು ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಬಂದು ಮೊದಲ ಬಾರಿಗೆ ಶಾಸಕರಾಗಿ (MLA) ಆಯ್ಕೆಯಾದರು. ಇವರು ಸಿನಿಮಾದಷ್ಟೇ ರಾಜಕೀಯದಲ್ಲೂ ತಮ್ಮ ನೇರ ನುಡಿಗಳಿಗೆ ಹೆಸರಾದವರು. ನಂತರ ಬಿಜೆಪಿ ಸೇರಿದ ಇವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ (MLC) ಕೆಲಸ ಮಾಡಿದರು. ಆನಂತರ ಕಾಂಗ್ರೆಸ್ ಪಕ್ಷದಲ್ಲೂ ಕೆಲಕಾಲ ಗುರುತಿಸಿಕೊಂಡಿದ್ದರು. ಪ್ರಸ್ತುತ ಇವರು ಆಮ್ ಆದ್ಮಿ ಪಕ್ಷ (AAP) ಸೇರಿದ್ದು, ಅದರ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.
ಸಿ.ಪಿ.ಯೋಗೇಶ್ವರ್
ಸಿನಿಮಾದಲ್ಲಿ 'ಸೈನಿಕ' ಎಂದೇ ಗುರುತಿಸಿಕೊಂಡಿರುವ ಸಿ.ಪಿ. ಯೋಗೇಶ್ವರ್ ಅವರು ಕರ್ನಾಟಕ ರಾಜಕಾರಣದ ಅತ್ಯಂತ ಚತುರ ನಾಯಕರಲ್ಲಿ ಒಬ್ಬರು. ಇವರು ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯೋಗೇಶ್ವರ್ ಅವರು 1999ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಅಂದಿನಿಂದ ಚನ್ನಪಟ್ಟಣ ಇವರ ಭದ್ರಕೋಟೆಯಾಯಿತು. ಇವರು 2004 ಮತ್ತು 2008ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ನಂತರ ಬಿಜೆಪಿ ಸೇರಿ ಅರಣ್ಯ ಸಚಿವರಾಗಿ ಕೆಲಸ ಮಾಡಿದರು. 2013ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ದೊಡ್ಡ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದರೆ, 2024ರ ಚನ್ನಪಟ್ಟಣ ಉಪಚುನಾವಣೆಯ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಜಯ ಸಾಧಿಸಿದರು.

ಶಶಿಕುಮಾರ್
ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ ಶಶಿಕುಮಾರ್ ಅವರು ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ಯಶಸ್ಸು ಕಂಡವರು. ಇವರು ಜೆಡಿಎಸ್ ಪಕ್ಷದ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ದೆಹಲಿಯಲ್ಲಿ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಿದ ಇವರು, ಇಂದಿಗೂ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ.
ಕುಮಾರ್ ಬಂಗಾರಪ್ಪ
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರರಾದ ಇವರು, ಸಿನಿಮಾ ಮತ್ತು ರಾಜಕೀಯ ಎರಡನ್ನೂ ಸಮಬಲವಾಗಿ ನಿಭಾಯಿಸಿದವರು. ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಇವರು, ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಬಿಜೆಪಿಯ ಪ್ರಮುಖ ನಾಯಕರಾಗಿದ್ದಾರೆ.
ಶ್ರುತಿ
ಜನಪ್ರಿಯ ನಟಿ ಶ್ರುತಿ ಅವರು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಚುನಾವಣೆಗಳ ಸಮಯದಲ್ಲಿ ಬಿಜೆಪಿಯ 'ಸ್ಟಾರ್ ಪ್ರಚಾರಕಿ'ಯಾಗಿ ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ತಾರಾ ಅನುರಾಧ
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅವರು ಬಿಜೆಪಿಯ ಮೂಲಕ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಇವರ ಪಕ್ಷ ನಿಷ್ಠೆ ಮತ್ತು ಸೇವೆಯನ್ನು ಪರಿಗಣಿಸಿ ಸರ್ಕಾರ ಇವರನ್ನು ವಿಧಾನ ಪರಿಷತ್ ಸದಸ್ಯೆಯಾಗಿ (MLC) ನೇಮಕ ಮಾಡಿತ್ತು. ಅಲ್ಲದೆ, ಇವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದಾರೆ.













Click it and Unblock the Notifications