Ranya Rao Case: ಖ್ಯಾತ ರಾಜಕಾರಣಿ ಜೊತೆ ನಟಿ ರನ್ಯಾ ರಾವ್ ನಂಟು
ವಿದೇಶದಿಂದ ಅಕ್ರಮ ಚಿನ್ನ ಸಾಗಾಟ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಅವರ ಬಂಧನವಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ನಟಿಯನ್ನು ಬಂಧಿಸಿದ್ದು, ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ದುಬೈಗೆ ಪದೇ ಪದೇ ಟ್ರಿಪ್ ಹೋಗುತ್ತಿದ್ದ ನಟಿ ಸದ್ಯ ಚಿನ್ನ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ವೇಳೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು, ರಾಜಕಾರಣಿಯೊಬ್ಬರ ಹೆಸರು ಕೂಡ ಈ ಕೇಸ್‌ನಲ್ಲಿ ತಳುಕು ಹಾಕಿಕೊಂಡಿದೆ. ಇಷ್ಟಕ್ಕೂ ಆ ರಾಜಕಾರಣಿ ಯಾರು ಎನ್ನುವ ಮಾಹಿತಿ ಇಲ್ಲಿದೆ.
ಅಕ್ರಮ ಚಿನ್ನ ಸಾಗಾಟ ಆರೋಪದಡಿ ಬಂಧನದಲ್ಲಿರುವ ಮಾಣಿಕ್ಯ ನಟಿ ರನ್ಯಾ ರಾವ್ ಅವರು ರಾಜಕಾರಣಿ ಜೊತೆ ನಂಟು ಹೊಂದಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ. ಈ ಪ್ರಕರಣದಲ್ಲಿ ಕರ್ನಾಟಕದ ಖ್ಯಾತ ರಾಜಕಾರಣಿಯೊಬ್ಬರು ಭಾಗಿಯಾಗಿರುವ ಶಂಕೆಯೂ ಇದೆ. ಅಷ್ಟೇ ಅಲ್ಲದೆ ಈ ರಾಜಕಾರಣಿಗಾಗಿಯೇ ನಟಿ ಚಿನ್ನ ಖರೀದಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ವೇಳೆ ಮಾಹಿತಿ ಸಂಗ್ರಹಿಸಿದ್ದು, ರಾಜಕಾರಣಿಯ ಬೆನ್ನು ಬೀಳಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಟಿ ರನ್ಯಾ ರಾವ್ ದುಬೈಗೆ ಹಲವು ಬಾರಿ ಪ್ರಯಾಣಿಸಿದ್ದು, ಈ ಕೇಸ್‌ಗೆ ಮತ್ತೊಂದು ಟ್ವಿಸ್ಟ್ ನೀಡಿದೆ. ದುಬೈ ಮಾತ್ರವಲ್ಲದೆ ಯುರೋಪ್ ಸೇರಿ ಹಲವು ದೇಶಗಳಿಗೆ ನಟಿ ಪ್ರಯಾಣಿಸಿರುವುದು ಬೆಳಕಿಗೆ ಬಂದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವರು ಸಿಕ್ಕಿಬಿದ್ದಾಗಲೂ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿತ್ತು. ಬಳಿಕ ಅವರ ಫ್ಲ್ಯಾಟ್ ಮೇಲೆ ದಾಳಿ ಮಾಡಿದಾಗಲೂ ಚಿನ್ನ ಸಿಕ್ಕಿತ್ತು.
ಈ ಹಿನ್ನೆಲೆ ನಟಿ ನಿರಂತರವಾಗಿ ಅಕ್ರಮ ಚಿನ್ನ ಸಾಗಾಟದಲ್ಲಿ ತೊಡಗಿದ್ದಾರೆ ಎಂದೂ ಆರೋಪಿಸಲಾಗಿದೆ. ಈಗ ರಾಜಕಾರಣಿಯ ಹೆಸರು ಕೇಳಿಬಂದಿರುವುದರಿಂದ ಈ ಪ್ರಕರಣದಲ್ಲಿ ಒಂದು ತಂಡವೇ ಇದ್ದು, ಭಾರಿ ಪ್ಲ್ಯಾನ್ ಮಾಡಿಕೊಂಡು ದಂಧೆ ನಡೆಸುತ್ತಿದ್ದರು ಎನ್ನುವ ಅನುಮಾನವೂ ವ್ಯಕ್ತವಾಗಿದೆ.

ನಟಿ ಮೂರು ದಿನ ಕಸ್ಟಡಿಗೆ!
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯವು ನಟಿ ರನ್ಯಾ ರಾವ್ ಅವರನ್ನು 3 ದಿನಗಳವರೆಗೆ ಡಿಆರ್‌ಐ ಕಸ್ಟಡಿಗೆ ನೀಡಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಇಂದು ಈ ಆದೇಶ ಪ್ರಕಟಿಸಿದೆ. ನಟಿಯನ್ನು ಮೂರು ದಿನಗಳ ಕಸ್ಟಡಿಗೆ ನೀಡಲು ಅನುಮೋದನೆ ನೀಡಿದೆ. 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯನ್ನು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಡಿಆರ್‌ಐ ಕೋರಿತ್ತು. ಅದರಂತೆ ಇಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ವಿಶ್ವನಾಥ್ ಸಿ ಗೌಡರ್ ಅವರು, ಮಾರ್ಚ್ 9ರಿಂದ ಮಾರ್ಚ್ 11ರವರೆಗೆ ನಟಿಯನ್ನು ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
ಮಾರ್ಚ್ 3ರಂದು ದುಬೈನಿಂದ ಪ್ರಯಾಣಿಸುತ್ತಿದ್ದಾಗ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ವಿಚಾರಣೆ ವೇಳೆ ನಟಿ ತಮ್ಮ ತಪ್ಪೊಪ್ಪಿಕೊಂಡಿದ್ದರು ಎನ್ನಲಾಗಿತ್ತು. ಆದರೂ ಈಗ ನಾನು ನಿರಪರಾಧಿ, ನನ್ನನ್ನು ಈ ಕೇಸ್‌ನಲ್ಲಿ ಸಿಲುಕಿಸಲಾಗಿದೆ ಎನ್ನುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications