Aditi Prabhudeva: ಯುಗಾದಿಗೆ ಮಗುವಿನ ಫೋಟೋ ಹಂಚಿಕೊಂಡ ನಟಿ ಅದಿತಿ ಪ್ರಭುದೇವ
ಹೊಸ ವರ್ಷದ ದಿನವೇ ತಾಯಾಗುತ್ತಿರುವ ಖುಷಿ ಹಂಚಿಕೊಂಡಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ ಯುಗಾದಿ ಹಬ್ಬದ ದಿನ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದಿತಿ ಪ್ರಭುದೇವ ಹೆಣ್ಣು ಮಗುವಿನ ತಾಯಾಗಿದ್ದು, ಈ ವಿಚಾರವನ್ನು ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಯುಗಾದಿ ಶುಭ ದಿನದಂದು ಈ ಖುಷಿ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಮ್ಮನೆ ಮಹಾಲಕ್ಷ್ಮಿ ಎಂದು ಮಗುವಿನ ಮುದ್ದಾದ ಕೈ ಫೋಟೋವನ್ನು ಶೇರ್ ಮಾಡಿರುವ ಅದಿತಿ ಪ್ರಭುದೇವ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

ಹೆಣ್ಣು ಮಗುವಿನ ಕೈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಅದಿತಿ ಮಗುವಿನ ಮುಖ ತೋರಿಸಿಲ್ಲ. ಸದಾ ಲವಲವಿಕೆಯಿಂದ ಇರುವ ಅದಿತಿ ಪ್ರಭುದೇವ ಅವರು ಮಗಳು ಜನನಿಸಿರುವ ಖುಷಿ ಹಂಚಿಕೊಳ್ಳುತ್ತಿದ್ದಂತೆ ಯಶಸ್ ಪಾಟ್ಲಾ ಹಾಗೂ ಅದಿತಿ ಪ್ರಭುದೇವ ದಂಪತಿಗೆ ಅಭಿಮಾನಿಗಳು ಹಾಗೂ ಆಪ್ತರು ಶುಭಾಶಯ ಕೋರುತ್ತಿದ್ದಾರೆ.
ಅದಿತಿ ಪ್ರಭುದೇವ ಅವರ ಫೋಟೋಗೆ ಪತಿ ಯಶಸ್ ಪಾಟ್ಲಾ ಕೂಡ ಕಮೆಂಟ್ ಮಾಡಿದ್ದು, ನನ್ನ ಜೀವದ ಗೆಳತಿ ಅದಿತಿ. ನಿನ್ನ ಹಾಗೆಯೇ ನಮ್ಮ ಮಗಳು ಎಂದಿದ್ದಾರೆ. ದಾವಣಗೆರೆ ಮೂಲದ ನಟಿ ಅದಿತಿ ಪ್ರಭುದೇವ ಅವರು 2022ರಲ್ಲಿ ಉದ್ಯಮಿ ಹಾಗೂ ಯುವ ರೈತ ಯಶಸ್ ಚಂದ್ರಕಾಂತ್ ಪಟ್ಲಾ ಅವರನ್ನು ವಿವಾಹವಾಗಿದ್ದರು.
ಅದಿತಿ ಪ್ರಭುದೇವ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿದ್ದು ಸ್ಯಾಂಡಲ್‌ವುಡ್‌ನ ಶ್ಯಾನೆ ಟಾಪ್ ಹುಡುಗಿ ಅಂತಾನೇ ಫೇಮಸ್ ಆಗಿದ್ದರು. 2017ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಕೆಲವು ದಿನಗಳ ಈಚೆಗೆ ಬ್ರೇಕ್ ತೆಗೆದುಕೊಂಡಿದ್ದರು. ಅದಿತಿ ಪ್ರಭುದೇವ ಸಿನಿಮಾದ ಜೊತೆಗೆ ತಮ್ಮ ಯೂಟ್ಯೂಬ್ ಚಾನಲ್ ಕೂಡ ತೆರೆದಿದ್ದು, ನೋಡುಗರಿಗೆ ಉಪಯುಕ್ತ ಮಾಹಿತಿ ಜೊತೆಗೆ ತಮ್ಮ ದಿನ ನಿತ್ಯದ ಜೀವನದ ಘಟನೆಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ. ಸದ್ಯ ಮುದ್ದು ಮಗಳ ಆರೈಕೆಯಲ್ಲಿರುವ ಅದಿತಿ ಪ್ರಭುದೇವ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.












Click it and Unblock the Notifications