Shiva Rajkumar: ವೀಕೆಂಡ್‌ನಲ್ಲಿ ಸೈಕಲ್ ಸವಾರಿ ಮಾಡಿದ ಶಿವಣ್ಣ
ಬೆಂಗಳೂರು ಏಪ್ರಿಲ್ 19: ಅಮೆರಿಕಾದಲ್ಲಿ ಮೂತ್ರಕೋಶ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮರಳಿದ ಬಳಿಕ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಕೆಲ ತಿಂಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಶಿವಣ್ಣ ಮತ್ತೆ ಶೂಟಿಂಗ್ ಕಡೆಗೆ ವಾಪಸ್ ಆಗಿದ್ದಾರೆ. ಸ್ಯಾಂಡಲ್‌ವುಡ್‌ನ ಬ್ಯುಸಿಯೆಷ್ಟ್ ನಟ ಅಂದರೆ ಅದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು. ಇದೀಗ ಅವರು ಕೊಂಚ ಬಿಡುವು ಮಾಡಿಕೊಂಡು ಸೈಕಲ್ ಸವಾರಿ ಮಾಡಿದ್ದಾರೆ.
ಹೌದು ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಅವರು ಸಂಪೂರ್ಣವಾಗಿ ಆಕ್ಟಿವ್ ಆಗಿದ್ದಾರೆ ಅನ್ನೋದಕ್ಕೆ ವೈರಲ್ ಆದ ಈ ವಿಡಿಯೋವೇ ಸಾಕ್ಷಿ. ಕಳೆದ ದಿನ ಅವರು ತಮ್ಮ ನಿವಾಸದ ಬಳಿ ಸೈಕಲ್ ಸವಾರಿ ಮಾಡಿದ್ದಾರೆ. ಮಕ್ಕಳ ಜೊತೆಗೆ ಬೆರೆತು ತಾವೂ ಕೂಡ ಮಕ್ಕಳಂತೆ ಸೈಕಲ್ ಓಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್ ಅವರಿಗೆ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಅನಾರೋಗ್ಯದ ನಡುವೆಯೂ ಅವರು ತಾವು ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದರು. ವೃತ್ತಿ ಬಗೆಗಿನ ಅವರ ಬದ್ಧತೆ ಬಗ್ಗೆ ಅಭಿಮಾನಿಗಳಿಗೆ ಹೆಮ್ಮೆ ಅನಿಸಿದರೆ ಮತ್ತೊಂದೆಡೆ ಅವರ ಅನಾರೋಗ್ಯದ ಬಗ್ಗೆ ಆತಂಕವೂ ಇತ್ತು. ಆದರೆ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಶಿವಣ್ಣ, ತಮಗೆ ಕ್ಯಾನ್ಸರ್ ಇರುವುದು ನಿಜ ಆದರೆ ಯಾರೂ ಕೂಡ ಆತಂಕ ಪಡುವುದು ಬೇಡ. ನಾನು ಚೆನ್ನಾಗಿದ್ದೇನೆ ಎಂದಿದ್ದರು.
ಜೊತೆಗೆ ಅಮೆರಿಕಾಕ್ಕೂ ಹೋಗಿ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಆರೋಗ್ಯವಾಗಿ ವಾಪಾಸ್ ಆಗಿದ್ದಾರೆ. ಅಲ್ಲದೆ ಅವರು ತುಂಬಾ ಆಕ್ಟಿವ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಹೀಗೆ ಆರೋಗ್ಯವಾಗಿ ಬರಲಿ ಎಂದು ಲಕ್ಷಾಂತರ ಜನ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಕುಟುಂಬಸ್ಥರು, ಆಪ್ತರು ಬೇಡಿಕೊಳ್ಳದ ದೇವರು ಇರಲಿಲ್ಲ. ಆ ಪೂಜಾ ಫಲದಿಂದ ಇವತ್ತು ಶಿವಣ್ಣ ನಮ್ಮ ಮುಂದೆ ಗಟ್ಟಿಯಾಗಿ ಓಡಾಡುವಂತಾಗಿದೆ.

ತಮಗೆ ಅನಾರೋಗ್ಯದ ಬಗ್ಗೆ ಗೊತ್ತಾದಾಗ ಶಿವಣ್ಣ '45' ಸಿನಿಮಾ ಶೂಟಿಂಗ್‌ನಲ್ಲಿ ಇದ್ದರು. ಈ ಸಿನಿಮಾ ಶೂಟಿಂಗ್ ಇನ್ನೂ ಕೂಡ ಪೂರ್ಣಗೊಂಡಿರಲಿಲ್ಲ. ಆಗ ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಕೂಡಲೇ ತಡ ಮಾಡದೆ ಶಿವಣ್ಣ ಅಮೆರಿಕಾಗೆ ಹೋಗಬೇಕಿತ್ತು. ಆದರೆ ಶಿವಣ್ಣ ಎಲ್ಲವನ್ನೂ ಅರ್ಧದಲ್ಲಿ ಬಿಟ್ಟು ಹೋಗಲಿಲ್ಲ. ತಮಗೆ ಆರೋಗ್ಯ ಸಮಸ್ಯೆ ಇದೆ ಅನ್ನೋದನ್ನು ಖುದ್ದು ನಿರ್ಮಾಪಕರಿಗೆ ಮಾಹಿತಿ ನೀಡಿ, ಸಿನಿಮಾದ ಎಲ್ಲಾ ಶೂಟಿಂಗ್ ಮುಗಿಸಿದ ಬಳಿಕವಷ್ಟೇ ಅವರು ಅಮೆರಿಕಾಕ್ಕೆ ತೆರಳಿದ್ದರು.
ಡಿಸೆಂಬರ್ 24ರಂದು ಶಿವಣ್ಣ ಅವರು ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರೆ ಇತ್ತ ರಾಜ್ಯದಲ್ಲಿ ಅವರ ಆಪರೇಷನ್ ಯಶಸ್ವಿಯಾಗಲಿ ಎಂದು ಅವರ ಅಭಿಮಾನಿಗಳು ಕುಟುಂಬಸ್ಥರು ಹೋಮ-ಹವನ ಹಾಗೂ ಪೂಜೆಗಳನ್ನು ಮಾಡಿಸುತ್ತಿದ್ದರು. ಕರ್ನಾಟಕದ ವಿವಿಧ ಭಾಗದಲ್ಲಿ ಅನ್ನಸಂತರ್ಪಣೆ ಸಹ ಮಾಡಲಾಗಿತ್ತು. ಅಷ್ಟೇ ಅಲ್ಲ ರಾಜ್ಯದ ನಟ, ನಟಿಯರು ಸಹ ಶಿವಣ್ಣ ಆರೋಗ್ಯವಾಗಿ ಹಿಂದಿರುಗಬೇಕು ಎಂದು ಪ್ರಾರ್ಥನೆ ಮಾಡಿದ್ದರು. ದೇಶದ ಹಲವು ಗಣ್ಯರು ಹಾಗೂ ಸಿನಿಮಾ ನಟ ನಟಿಯರು ಶಿವರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದ್ದರು. ಬೇಗ ಗುಣಮುಖರಾಗಿ ಎಂದು ಆಶಿಸಿದ್ದರು.
ಇದೆಲ್ಲದರಿಂದ ಇಂದು ಶಿವಣ್ಣ ಗುಣಮುಖರಾಗಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿ ಸೈಕಲ್ ಸವಾರಿ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಜನ ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಲೈಕ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.












Click it and Unblock the Notifications