ಕೋಮಾದಲ್ಲಿ "ಕರಿಯ 2" ನಟ; ಐಸಿಯುನಲ್ಲಿ ಸಾವು-ಬದುಕಿನ ಹೋರಾಟ
'ಕರಿಯ 2', 'ಕೆಂಪ', 'ಗಣಪ', 'ಬರ್ಕ್ಲಿ', 'ಸತ್ಯ' ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಸಂತೋಷ್ ಬಾಲರಾಜ್ ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಟ್ಟಿಮುಟ್ಟಾಗಿ, ಖಡಕ್ ಆಗಿದ್ದ ನಟ ಈಗ ಇದ್ದಕ್ಕಿದ್ದಂತೆ ಕೋಮಾ ಸ್ಥಿತಿ ತಲುಪಿರುವುದು ಎಲ್ಲರಿಗೂ ಶಾಕ್ ನೀಡಿದೆ.
ಸಂತೋಷ್ ಬಾಲರಾಜ್ ಅವರು ಖ್ಯಾತ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ. ಸಂತೋಷ್ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕೊನೆಗೆ ಜಾಂಡೀಸ್ ಇರುವುದು ದೃಢವಾಗಿತ್ತು. ಸದ್ಯ ಜಾಂಡೀಸ್ ಹೆಚ್ಚಾಗಿ ಅವರು ಕೋಮಾ ಸ್ಥಿತಿ ತಲುಪಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಈಗ ಸಾವು ಬದುಕಿನ ಸ್ಥಿತಿಯಲ್ಲಿದ್ದಾರೆ.

ಜಾಂಡೀಸ್‌ನಿಂದ ಬಳಲುತ್ತಿದ್ದ ನಟನನ್ನು ಕುಮಾರಸ್ವಾಮಿ ಲೇಜೌಟ್‌ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಅವರಿಗೆ ಜಾಂಡೀಸ್ ತೀವ್ರಗೊಂಡಿದ್ದರಿಂದ ಕೋಮಾಗೆ ಜಾರಿದ್ದಾರೆ. ಈಗ ಸಂತೋಷ್ ಬಾಲರಾಜ್ ಅವರಿಗೆ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ನಟನ ಈ ಸ್ಥಿತಿ ಕಂಡು ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.
ಇನ್ನೂ ಮದುವೆ ಆಗಿಲ್ಲ!
ಸಂತೋಷ್ ಬಾಲರಾಜ್ ಅವರಿಗೆ 34 ವರ್ಷ ವಯಸ್ಸಾಗಿದ್ದು, ಇನ್ನೂ ಮದುವೆ ಆಗಿಲ್ಲ. ಅವರು ತಮ್ಮ ತಾಯಿಯ ಜೊತೆ ಇದ್ದಾರೆ. ಜಾಂಡೀಸ್ ಮೈಗೆಲ್ಲ ಹರಡಿರುವ ಕಾರಣ ಅವರ ಸ್ಥಿತಿ ಚಿಂತಾಜನಕವಾಗಿದೆ. ಸಂತೋಷ್ ಅವರ ತಂದೆ ಅನೇಕಲ್ ಬಾಲರಾಜ್ ಅವರು ನಟ ದರ್ಶನ್ ಅವರ ಹಿಟ್ ಸಿನಿಮಾ "ಕರಿಯ" ಸಿನಿಮಾ ನಿರ್ಮಾಣ ಮಾಡಿದ್ದರು. ಬಳಿಕ ಸಂತೋಷ್ ಕೂಡ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟಿದ್ದರು.

ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ಅವರ ಗಣಪ ಸಿನಿಮಾದಿಂದ ಸಂತೋಷ್ ಗಮನ ಸೆಳೆದಿದ್ದರು. ಈ ಸಿನಿಮಾದ ಹಾಡುಗಳು ಕೂಡ ಸಿನಿಪ್ರೇಕ್ಷಕರಿಗೆ ಇಷ್ಟವಾಗಿತ್ತು. ಗಣಪ ಸಿನಿಮಾ "ಮುದ್ದಾಗಿ ನೀನು ನನ್ನ ಕೂಗಿದೆ" ಹಾಡು ಆಗ ಟ್ರೆಂಡ್ ಆಗಿತ್ತು. ತಮ್ಮ ತಂದೆ ನಿರ್ಮಿಸಿದ್ದ ಕರಿಯ ಸಿನಿಮಾದ ಸೀಕ್ವೆಲ್ ಕರಿಯ-2 ಸಿನಿಮಾದಲ್ಲೂ ಸಂತೋಷ್ ನಾಯಕನಾಗಿ ನಟಿಸಿದ್ದಾರೆ. ಸದ್ಯ ಸಂತೋಷ್ ಬಾಲರಾಜ್ ಅವರನ್ನ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಸಂತೋಷ್ ಕೋಮಾದಲ್ಲೇ ಇದ್ದು, ನಟ ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಕುಟುಂಬಸ್ಥರು, ಆಪ್ತರು, ಸಿನಿಮಾರಂಗದವರು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications