Prakash Heggodu: ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕಾಶ್ ಹೆಗ್ಗೋಡು ವಿಧಿವಶ
ಬೆಂಗಳೂರು, ಮಾರ್ಚ್ 31: ಕನ್ನಡ ಚಿತ್ರರಂಗದ ಖ್ಯಾತ ನಟ, ರಂಗಕರ್ಮಿ ಪ್ರಕಾಶ್ ಹೆಗ್ಗೋಡು(58) ವಿಧಿವಶರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಿನ್ನೆ( ಮಾರ್ಚ್ 30)ರ ಸಂಜೆ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಪ್ರಕಾಶ್ ಹೆಗ್ಗೋಡು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

ರಂಗಭೂಮಿ ಕಲಾವಿದ, ಚಿತ್ರ ನಟ, ಸಂಘಟಕ ಮಾತ್ರವಲ್ಲದೇ ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದ ಪ್ರಕಾಶ್ ಹೆಗ್ಗೋಡು ಅವರು ಏಸು ಪ್ರಕಾಶ್ ಕಲ್ಲುಕೊಪ್ಪ ಅಂತಲೇ ಜನಪ್ರಿಯರಾಗಿದ್ದರು.
ಪ್ರಕಾಶ್ ಹೆಗ್ಗೋಡು ಅವರು ಮೂಲತಃ ಶಿವಮೊಗ್ಗ ಜಿಲ್ಲೆಯಯ ಸಾಗರ ತಾಲೂಕಿನ ಪುರಪ್ಪೆಮನೆಯವರಾಗಿದ್ದಾರೆ. ಹೀಗಾಗಿ ಪುರಪ್ಪೆಮನೆಯ ಸ್ವಗೃಹದಲ್ಲೇ ಇಂದು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಹೊಸನಗರದ ಸಾರಾ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದ ಪ್ರಕಾಶ್ ಹೆಗ್ಗೋಡು, ಕೆರೆ ಪುನರುಜ್ಜೀವನ ಸೇರಿದಂತೆ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಅಲ್ಲದೇ ಸಾರಾ ಸಂಸ್ಥೆಯ ಖಜಾಂಚಿಯಾಗಿಯೂ ಆಗಿದ್ದರು ಎನ್ನಲಾಗಿದೆ. ರಂಗಭೂಮಿ ಕಲಾವಿದನಾಗಿ ನಟನೆ ಆರಂಭಿಸಿದ ಇವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಾಹುಲಿ, ಉಪೇಂದ್ರ ಅಭಿನಯದ ಕಲ್ಪನಾ 2 ಸೇರಿದಂತೆ ಸಂತ, ಮಾಡ್ರರ್ನ್ ಮಹಾಭಾರತ, ಭಾಗ್ಯದ ಬಳೆಗಾರ ಸೇರಿ ಒಟ್ಟು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.












Click it and Unblock the Notifications