'ನನ್ನ ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್‌ನಲ್ಲಿ ಚಿತ್ರಿಸಿ ಲೈಕ್ಸ್ ಗಾಗಿ...': ನಟ ಜಗ್ಗೇಶ್ ಪೋಸ್ಟ್ ವೈರಲ್
ಬೆಂಗಳೂರು, ಮೇ. 03 : ನವರಸ ನಾಯಕ ಜಗ್ಗೇಶ್ ನೂರಾರು ಸಿನಿಮಾಗಳ ಮೂಲಕ ಜನರನ್ನು ರಂಜಿಸಿದ್ದಾರೆ. ರಾಜಕಾರಣಿಯಾದರು ಕೂಡ ಈಗಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ಅವರು, ಆಗ್ಗಾಗೆ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ಹೊಸ ಪೋಸ್ಟ್ ಮೂಲಕ ಸೆಲೆಬ್ರಿಟಿಗಳ ಜೀವನ ಹೇಗಿರುತ್ತದೆ ಎಂದು ವಿವರಿಸಿದ್ದಾರೆ. "ಸೆಲಿಬ್ರಿಟಿ ಆಗಲು ಎಲ್ಲರು ಒಂದಿಲ್ಲಾ ಒಂದು ರೀತಿ ಯತ್ನಿಸುತ್ತಾರೆ. ಕೆಲವರು ನಟ, ನಟಿ ಕೆಲವರು ರಂಗಕಲಾವಿದರಾಗಿ, ಕೆಲವರು ಟಿವಿ ಕೆಲವರು ತಮ್ಮ ಮೊಬೈಲ್ ಮೂಲಕ ಮತ್ತೆ ಕೆಲವರು ಯೂಟ್ಯೂಬ್ ಮೂಲಕ. ಒಟ್ಟಾರೆ ಹೇಗಾದರು ಸರಿ ಸೆಲಿಬ್ರಿಟಿ ಆಗಲೆ ಬೇಕು ಆಗದಿದ್ದರೆ ಡಿಪ್ರೆಷನ್‌ಗೆ ಒಳಗಾಗುತ್ತಾರೆ" ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ನಾನು ಸೆಲಿಬ್ರಿಟಿ ಕನಸು ಕಂಡವನಲ್ಲಾ !
"ಆದರೆ ನಾನು ಸೆಲಿಬ್ರಿಟಿ ಕನಸು ಕಂಡವನಲ್ಲಾ... ಕಟ್ಟಿಕೊಂಡ ಮಡದಿ ಹಾಗು ಸಾಧಿಸಿ ಸಾಯಬೇಕು ಎಂಬ ಸಾಮಾನ್ಯ ಮನುಷ್ಯನ ಕನಸು ಮಾತ್ರ ಆಗಿತ್ತು. ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು ಜೊತೆಗೆ ನನ್ನ ವೈಯಕ್ತಿಕ ಸಂತೋಷ ಕಮರಿಹೋಯಿತು. ಎಲ್ಲರಂತೆ ಎಲ್ಲಾ ಕಡೆ ಎಲ್ಲಾ ಸಂತೋಷ ನೋಡುವ ಯೋಗ ಇಲ್ಲವಾಯಿತು" ಎಂದು ನೋವು ಹಂಚಿಕೊಂಡಿದ್ದಾರೆ.
"ಪ್ರತಿದಿನ ಯಾರು ಏನು ಹೇಳುತ್ತಾರೋ, ಯಾರು ತಪ್ಪು ಕಂಡು ಹಂಗಿಸುತ್ತಾರೋ, ಯಾರು ನಮ್ಮ ಬಾಯಿಂದ ಬಂದ ಅರಿಯದ ಮಾತು ಬಳಸಿ ಲೈಕ್ಸ್ ಪಡೆದು ಗಹಗಹಿಸಿ ನಗುತ್ತಾರೋ, ನನ್ನ ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್‌ನಲ್ಲಿ ಚಿತ್ರಿಸಿ ಲೈಕ್ಸ್ ಗಾಗಿ ಸಂಭ್ರಮಿಸೋ ಪುಣ್ಯಾತ್ಮರು ಬರುತ್ತಾರೋ.. ಯಾರು ನನ್ನ ಕೇಡು ಬಯಸುತ್ತಾರೋ.. ಒಟ್ಟಾರೆ ಸೆಲಿಬ್ರಿಟಿ ಬದುಕು ಜೀವನಪರ್ಯೆಂತು ಜೈಲುವಾಸ ಬದುಕು ಅಥವ ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಸೆಲಿಬ್ರಿಟಿಯ ಬದುಕು" ಎಂದು ನವರಸ ನಾಯಕ ತಮ್ಮ ಅನುಭವ ವಿವರಿಸಿದ್ದಾರೆ.
ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನ ಮಾಡುತ್ತಿದ್ದೇನೆ!
"ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯೋ ಅಥವ ಪಂಜರದಿಂದ ಹಾರಿ ಪರಿಸರ ಸವಿಯೋ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನ ಮಾಡುತ್ತಿದ್ದೇನೆ. ಇದರಲ್ಲಿ ಪೂರ್ಣಸಂತೋಷ ಸಿಗುತ್ತಿದೆಯೇ.. ಸತ್ಯವಾಗಿಯು ಇಲ್ಲ. ಏನೋ ಒಂದೆಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೆ ಈ ಸೆಲಿಬ್ರಿಟಿಯ ಬದುಕು" ಎನ್ನುತ್ತಾ ಸೆಲೆಬ್ರಿಟಿ ಬದುಕಿನಿಂದ ದೂರವಾಗುವ ತನ್ನ ಆಲೋಚನೆಯನ್ನು ಎಲ್ಲರ ಮುಂದಿಟ್ಟಿದ್ದಾರೆ.

ಮುಂದುವರಿದು, "ನಾನು ನನ್ನ ಸಹಾಯಕ ರಸ್ತೆಯಲ್ಲಿ ಸಿಕ್ಕ ತಾಟಿಲಿಂಗು ವ್ಯಾಪಾರಿಯ ಜೊತೆ ವ್ಯಾಪಾರ ಮುಗಿಸಿ ಅವನಿಗೆ ಸಂತೋಷ ಆಗುವಂತೆ ಅವನ ಬಂಡವಾಳ ಎರಡು ಹಣ್ಣಿಗೆ ನೀಡಿದಾಗ ಅವನ ಕಂಗಳ ಆನಂದಭಾಷ್ಪ ಶಿವನ ಜಲಾಭಿಷೇಕದಂತೆ ಭಾಸವಾಯಿತು. ಸೆಲಿಬ್ರಿಟಿಯ ಬದುಕು ಕಂಡು ನೀವು ಸೆಲಿಬ್ರಿಟಿ ಆಗಬೇಕಾ...? ಇಲ್ಲಾ ಸೆಲಿಬ್ರಿಟಿಯ ಮೇಲೆ ಪ್ರೀತಿ ಕರುಣೆ ತೋರಬೇಕಾ...? ದೇವರು ವಾಸಮಾಡೋ ನಿಮ್ಮ ಹೃದಯಕ್ಕೆ ಸೇರಿದ್ದು. ಜೀವನ ನಾಟಕರಂಗ, ಸಮಾಜವೆ ರಂಗಮಂದಿರ, ದೇವರೆ ಸೂತ್ರದಾರ, ಅಭಿಮಾನಿಗಳೆ ಬಂಧು ಮಿತ್ರರು" ಎಂದು ತಮ್ಮ ಪೋಸ್ಟ್ ಮುಗಿಸಿದ್ದಾರೆ.












Click it and Unblock the Notifications