ಬಳ್ಳಾರಿ ಜೈಲಿನ ಮುಂದೆ ನಟ ದರ್ಶನ್‌ಗೆ ಅಭಿಮಾನಿಗಳ ಜೈಕಾರದ ಸ್ವಾಗತ: ಲಾಠಿ ಚಾರ್ಜ್
ಬಳ್ಳಾರಿ, ಆಗಸ್ಟ್ 29: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದೆ. ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಹೊರಟ ಪೊಲೀಸ್ ವಾಹನ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಬಳ್ಳಾರಿ ತಲುಪಿದ್ದು, ಸದ್ಯ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ದರ್ಶನ್‌ನನ್ನು ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಶಿಫ್ಟ್ ಮಾಡಲಾಗಿದೆ.
ಇತ್ತೀಚಿಗೆ ದರ್ಶನ್ ಬೆಂಗಳೂರು ಜೈಲಿನಲ್ಲಿರುವ ಫೋಟೋವೊಂದು ವೈರಲ್ ಆಗಿತ್ತು. ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಎನ್ನುವ ರೌಡಿಶೀಟರ್ ಜೊತೆಗೆ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಆರೋಪಿ ಜೊತೆಗೂಡಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು.

ಈ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಮಾಡಿದ ಮನವಿ ಮೇರೆಗೆ ನ್ಯಾಯಾಲಯ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿತ್ತು. ಕೋರ್ಟ್ ಪ್ರಕರಣದ ಎ-2 ಆರೋಪಿ ದರ್ಶನ್‌ನನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಮಾಡಲು ಅನುಮತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ನಟ ದರ್ಶನ್‌ಅನ್ನು ಇಂದು ( ಆಗಸ್ಟ್ 29) ಮುಂಜಾನೆ 4.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸರು ಬೊಲೆರೋ ವಾಹನದಲ್ಲಿ ದರ್ಶನ್‌ನ್ನು ಬಳ್ಳಾರಿಗೆ ಕರೆದೊಯ್ದಿದ್ದಾರೆ. ಭದ್ರತಾ ದೃಷ್ಟಿಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದೊಯ್ಯಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಸಿಲ್ಕ್ ಬೋರ್ಡ್- ಮೇಖ್ರಿ ಸರ್ಕಲ್ -ಯಲಹಂಕ - ದೇವನಹಳ್ಳಿ - ಚಿಕ್ಕಬಳ್ಳಾಪುರ - ಬಾಗೇಪಲ್ಲಿ- ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಪೊಲೀಸ್ ವಾಹನ ಈಗಾಗಲೇ ತಲುಪಿದ್ದು, ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹ ಪ್ರವೇಶಿಸಿದ್ದಾರೆ.
ಬ್ರಾಂಡೆಂಡ್ ಟೀ ಶರ್ಟ್ ಧರಿಸಿ, ನೀರಿನ ಬಾಟೆಲ್, ಸನ್ ಗ್ಲಾಸ್, ಹೊದಿಕೆ ಹಿಡಿದು ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದ ಒಳಗೆ ಪ್ರವೇಶಿಸಿದ್ದು, ದರ್ಶನ್ ಒಂದು ಕೈಗೆ ಶೋಲ್ಡರ್ ಬೆಲ್ಟ್ ಸಪೋರ್ಟ್ ಧರಿಸಿರುವುದು ದೃಶ್ಯದಲ್ಲಿ ಕಂಡು ಬಂದಿದೆ.
ಇನ್ನು ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಜೈಲಿನ ಬಳಿ ಜಮಾಯಿಸಿದ್ದು ನೂಕುನುಗ್ಗಲು ಉಂಟಾಗಿದೆ. ಜೈಲಿನ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು ಡಿ ಬಾಸ್, ಡಿ ಬಾಸ್ ಎಂದು ಜೈಕಾರ ಕೂಗಿದ್ದಾರೆ. ದರ್ಶನ್ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದು, ಪೊಲೀಸರು ಲಾಠಿ ಚಾರ್ಜ್ ಮೂಲಕ ಅಭಿಮಾನಿಗಳನ್ನು ಚದುರಿಸಿದ್ದಾರೆ.












Click it and Unblock the Notifications