ಸಿನಿಮಾಗಾಗಿ ತನ್ನ ನೆಚ್ಚಿನ BMW ಕಾರು ಮಾರಿಕೊಂಡ ನಟ ಅಜಯ್ ರಾವ್, ಕಣ್ಣೀರಿಟ್ಟ ಮಗಳು
ಸ್ಯಾಂಡಲ್‌ವುಡ್ ನಟ ಕೃಷ್ಣ ಅಜಯ್ ರಾವ್ ಅವರು ನಟಿಸಿರುವ "ಯುದ್ಧಕಾಂಡ ಚಾಪ್ಟರ್-2" ಸಿನಿಮಾ ಇದೇ ಏಪ್ರಿಲ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಖುದ್ದು ಅಜಯ್ ರಾವ್ ಅವರೇ ನಿರ್ಮಾಣ ಮಾಡುತ್ತಿದ್ದು, ಅಜಯ್ ರಾವ್ ಪ್ರೊಡಕ್ಷನ್ ಅಡಿಯಲ್ಲೇ ಮೂಡಿ ಬರುತ್ತಿದೆ. ಈಗಾಗಲೇ ನಟರಾಗಿ ಮಿಂಚಿರುವ ಅಜಯ್ ರಾವ್ ಅವರು ನಿರ್ಮಾಣಕ್ಕೂ ಕೈಹಾಕಿದ್ದಾರೆ. ಈ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅಜಯ್ ರಾವ್ ಅವರು ಈ ಸಿನಿಮಾಗಾಗಿ ತಮ್ಮ ನೆಚ್ಚಿನ BMW ಕಾರನ್ನು ಮಾರಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸಿನಿರಂಗದಲ್ಲಿ ಬಹಳ ಏಳುಬೀಳುಗಳನ್ನು ಕಂಡಿರುವ ನಟ ಅಜಯ್ ರಾವ್ ಅವರು ಯುದ್ಧಕಾಂಡ ಸಿನಿಮಾದ ಮೂಲಕ ಮತ್ತೊಂದು ಸವಾಲು ಸ್ವೀಕರಿಸಿದ್ದಾರೆ. ತಾವೇ ನಟಿಸಿ, ತಾವೇ ನಿರ್ಮಾಣ ಮಾಡುತ್ತಿರುವುದರಿಂದ ಅಜಯ್ ಅವರಿಗೆ ಇದೊಂದು ದೊಡ್ಡ ಸವಾಲಾಗಿದೆ. ಈಗಾಗಲೇ ಅವರು ಈ ಯುದ್ಧಕಾಂಡ ಸಿನಿಮಾವನ್ನು ತಮ್ಮ ಮಗಳಾದ ಚೆರಿಷ್ಮಾಗಾಗಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸಾಮಾನ್ಯ ಕುಟುಂಬದಿಂದ ಸಿನಿರಂಗಕ್ಕೆ ಪ್ರವೇಶಿಸಿದ ಅಜಯ್ ರಾವ್ ಅವರಿಗೆ ಕೆಲ ಸಿನಿಮಾಗಳು ಹಿಟ್ ಆದರೆ, ಇನ್ನೂ ಕೆಲವು ಕಳಪೆ ಪ್ರದರ್ಶನವೂ ಕಂಡಿತು. ಇದರಿಂದ ಅವರು ಸಿನಿಮಾಗಳಲ್ಲಿ ಏರಿಳಿತ ಕಂಡಿದ್ದರು. ಈಗ ಯುದ್ಧಕಾಂಡ ಸಿನಿಮಾವನ್ನು ತಾವೇ ನಿರ್ಮಾಣ ಮಾಡುತ್ತಿರುವುದರಿಂದ ಬಂಡವಾಳಕ್ಕೆ ಹಣ ಹೊಂದಿಸಲು ನಾನಾ ಕಷ್ಟಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ. ತಾವು ಈಗಾಗಲೇ ಕೋಟಿಗಟ್ಟಲೆ ಸಾಲ ಮಾಡಿಕೊಂಡಿರುವುದಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಈ ಸಿನಿಮಾಗಾಗಿ ಅವರು ತಮ್ಮ ನೆಚ್ಚಿನ ಬಿಎಂಡಬ್ಲ್ಯು ಕಾರನ್ನು ಕೂಡ ಮಾರಿದ್ದಾರೆ ಎಂದು ತಿಳಿದುಬಂದಿದೆ.

ಸಿನಿಮಾಗಾಗಿ ಹಣ ಒದಗಿಸಲು ತನ್ನ ನೆಚ್ಚಿನ BMW ಕಾರನ್ನು ಸಹ ಅಜಯ್ ರಾವ್ ಮಾರಿಕೊಂಡಿದ್ದಾರೆ. ಈ ಕಾರನ್ನು ತೆಗೆದುಕೊಂಡು ಹೋದಾಗ ಅಜಯ್ ರಾವ್ ಮಗಳು ಚೆರಿಷ್ಮಾ ಬಿಕ್ಕಳಿಸಿ ಕಣ್ಣೀರು ಹಾಕಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಿನಿಮಾಗಾಗಿ ಅಜಯ್ ರಾವ್ ಪಟ್ಟಿರುವ ಕಷ್ಟ ಕಂಡು ಎಲ್ಲರೂ ಮರುಗಿದ್ದಾರೆ. ಈ ವಿಡಿಯೋ ಕಾಮೆಂಟ್ ಮಾಡಿರುವ ಹಲವರು ಅಜಯ್ ರಾವ್ ಅವರನ್ನು ಗೆಲ್ಲಿಸುವ ಅವಕಾಶ ನಮ್ಮ ಮುಂದಿದೆ. ಆ ಪುಟ್ಟ ಹುಡುಗಿ ಚೆರಿಷ್ಮಾಗೆ ಅವಳ ನಗುವನ್ನು ಮತ್ತೆ ನೀಡೋಣ ಎಂದು ಹೇಳಿದ್ದಾರೆ.

ಸ್ವಂತ ಪ್ರೊಡಕ್ಷನ್ ಮಾಡುವ ನಿರ್ಧಾರ ಮಾಡಲೇಬೇಕಾಯಿತು. ನನ್ನ ಹಲವು ಸಿನಿಮಾಗಳು ಸಾಲು ಸಾಲು ಸೋಲು ಕಂಡಿತ್ತು. ನಾನು ನನಗೆ ಬಂದಿರುವ ಕಥೆಗಳಲ್ಲಿ ಒಳ್ಳೆಯದನ್ನೇ ಆಯ್ಕೆ ಮಾಡುತ್ತಿದ್ದೆ. ಆದರೆ, ಅದು ಯಶಸ್ವಿ ಕಾಣುತ್ತಿರಲಿಲ್ಲ. ಅಲ್ಲಿ ತಪ್ಪು ಯಾರದ್ದು ಎಂದು ಹೇಳಲು ಆಗಲ್ಲ. ಸ್ವಲ್ಪ ಸಮಯ ಕಳೆದ ನಂತರ ಕೃಷ್ಣ ಲೀಲಾ ಕಥೆ ಚೆನ್ನಾಗಿತ್ತು ಅನ್ನೋದು ಗೊತ್ತಿತ್ತು. ಹಾಗಾಗಿ ಪ್ರೊಡಕ್ಷನ್ ಮಾಡಿದರೆ ಜನ ಮತ್ತೆ ನನ್ನನ್ನು ಸ್ವೀಕರಿಸುತ್ತಾರೆ ಎಂದು ಗೊತ್ತಿತ್ತು. ಕೊನೆಗೆ ನಾನೇ ಪ್ರೊಡಕ್ಷನ್ ಹೌಸ್ ತೆರೆಯುವ ನಿರ್ಧಾರ ಮಾಡಿದೆ. ನನ್ನನ್ನು ಯಾರೂ ನಂಬಂದೇ ಇದ್ದಾಗ ನಾನೇ ನನ್ನನ್ನು ನಂಬಿ ಈ ಕೆಲಸ ಮಾಡಿದೆ ಎಂದು ಅಜಯ್ ರಾವ್ ನೆನೆದಿದ್ದಾರೆ.












Click it and Unblock the Notifications