Sai Pallavi: ಹಿಂದಿ ಮಾತನಾಡಲು ಬರಲ್ಲ, ಸೀತೆ ಪಾತ್ರ ಹೇಗೆ ಮಾಡ್ತೀರಿ: ಟ್ರೋಲ್ ಆದ ಸಾಯಿ ಪಲ್ಲವಿ
ಬಹುಭಾಷಾ ನಟಿ ಸಾಯಿ ಪಲ್ಲವಿ ಅವರು ಶೀಘ್ರದಲ್ಲೇ ತೆರೆಕಾಣಲಿರುವ 'ಏಕ್ ದಿನ್' ಚಿತ್ರದ ಪ್ರಚಾರಕ್ಕಾಗಿ ಮುಂಬೈನಲ್ಲಿ ಆಯೋಜಿಸಲಾಗಿದ್ದ 'ಏಕ್ ದಿನ್ ಕಿ ಮೆಹಫಿಲ್' ಎಂಬ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೇ 1ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಈ ವೇಳೆ ಅವರು ಹಿಂದಿಯಲ್ಲಿ ಮಾತನಾಡಲು ಒದ್ದಾಡಿರುವ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.
ನನ್ನ ಹಿಂದಿ ಅಷ್ಟು ಚೆನ್ನಾಗಿಲ್ಲ ಎಂದ ನಟಿ
ಕಾರ್ಯಕ್ರಮದಲ್ಲಿ ನೆರೆದಿದ್ದ ಅತಿಥಿಗಳು ಮತ್ತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲು ಮುಂದಾದ ಸಾಯಿ ಪಲ್ಲವಿ, ಹಿಂದಿ ಭಾಷೆಯನ್ನು ಸರಾಗವಾಗಿ ಮಾತನಾಡಲು ಸಾಧ್ಯವಾಗದೆ ತಡಬಡಾಯಿಸಿದರು. ವೇದಿಕೆಯ ಮೇಲೆಯೇ ಈ ವಿಷಯವನ್ನು ಮುಕ್ತವಾಗಿ ಒಪ್ಪಿಕೊಂಡ ಅವರು, "ನನ್ನ ಹಿಂದಿ ಭಾಷೆಯ ಜ್ಞಾನ ಅಷ್ಟೊಂದು ಚೆನ್ನಾಗಿಲ್ಲ" ಎಂದು ಹೇಳಿಕೊಂಡರು.

ಸಾಯಿ ಪಲ್ಲವಿ ಅವರು ಹಿಂದಿ ಮಾತನಾಡಲು ಕಷ್ಟಪಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಅವರ ವಿರುದ್ಧ ಟೀಕೆ ಆರಂಭಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಅವರು ಸೀತೆಯ ಪಾತ್ರ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿ ಹಲವರು ಅಪಸ್ವರ ಎತ್ತಿದ್ದಾರೆ.
ಸೀತೆಯ ಪಾತ್ರ ಹೇಗೆ ನಿಭಾಯಿಸುತ್ತಾರೆ?
"ಕನಿಷ್ಠ ಮಟ್ಟದ ಹಿಂದಿ ಪದಗಳನ್ನು ಮಾತನಾಡಲು ಬಾರದ ಸಾಯಿ ಪಲ್ಲವಿ, ರಾಮಾಯಣದಂತಹ ಮಹಾಕಾವ್ಯದಲ್ಲಿ ಸೀತಾ ಮಾತೆಯ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ?" ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಭಾಷೆಯ ಮೇಲೆ ಹಿಡಿತವಿಲ್ಲದಿದ್ದರೆ ಪಾತ್ರದ ಗಾಂಭೀರ್ಯಕ್ಕೆ ಧಕ್ಕೆ ಬರುತ್ತದೆ ಎಂಬುದು ಹಲವರ ವಾದಿಸುತ್ತಿದ್ದಾರೆ.
ಒಂದೆಡೆ ಟ್ರೋಲ್ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾಯಿ ಪಲ್ಲವಿ ಅವರ ಪ್ರಾಮಾಣಿಕತೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅವರು ತಮ್ಮ ಮಿತಿಗಳನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ನಟನೆಯಲ್ಲಿ ಅವರು ಅದ್ಭುತವಾಗಿದ್ದು, ಪಾತ್ರಕ್ಕಾಗಿ ಭಾಷೆಯನ್ನು ಕಲಿಯಬಲ್ಲರು" ಎಂದು ಬೆಂಬಲಕ್ಕೆ ನಿಂತಿದ್ದಾರೆ. ಸದ್ಯ ಬಾಲಿವುಡ್‌ನ ಅತಿದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿರುವ 'ರಾಮಾಯಣ'ದಲ್ಲಿ ಅವರ ಭಾಷೆಯ ಉಚ್ಚಾರಣೆ ಹೇಗಿರಲಿದೆ ಎಂಬ ಕುತೂಹಲ ಮತ್ತು ಆತಂಕ ಎರಡೂ ಈಗ ಪ್ರೇಕ್ಷಕರಲ್ಲಿ ಮನೆಮಾಡಿದೆ.
Why would you sign an actor in a film who can't speak the language properly?pic.twitter.com/edrDh6gfdT
— Mayank (@Cules651) April 27, 2026
ಏಕ್ ದಿನ್ ಚಿತ್ರದಲ್ಲಿ ಸಾಯಿ ಪಲ್ಲವಿ
'ಏಕ್ ದಿನ್' ಚಿತ್ರವನ್ನು ಸುನಿಲ್ ಪಾಂಡೆ ನಿರ್ದೇಶಿಸಿದ್ದು, ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಅಮೀರ್ ಖಾನ್, ಮನ್ಸೂರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಅವರು 'ಅಮೀರ್ ಖಾನ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಏಕ್ ದಿನ್' ಚಿತ್ರದ ಕಥೆ ಮತ್ತು ಸಾಯಿ ಪಲ್ಲವಿ ಅವರ ನಟನಾ ಕೌಶಲದ ಮೇಲೆ ಭರವಸೆ ಇಟ್ಟಿರುವ ಸಿನಿಪ್ರಿಯರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಮೇ 1ರಂದು ಈ ಚಿತ್ರ ರಿಲೀಸ್ ಆಗಲಿದೆ.
ಇದು ಒಬ್ಬ ಮುಗ್ದ ಯುವಕನ ಪ್ರೇಮಕಥೆಯಾಗಿದೆ. ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಯುವಕನೊಬ್ಬ, ಅವಳ ಮುಂದೆ ಪ್ರೇಮ ನಿವೇದನೆ ಮಾಡಲು ಧೈರ್ಯವಿಲ್ಲದೆ ಒದ್ದಾಡುತ್ತಿರುತ್ತಾನೆ. ಕೇವಲ ಒಂದು ದಿನವಾದರೂ ಅವಳ ಜೊತೆ ಕಳೆಯುವಂತಾಗಲಿ ಎಂದು ಅವನು ಆಸೆಪಡುತ್ತಾನೆ. ಅನಿರೀಕ್ಷಿತವಾಗಿ ಆತನ ಈ ಆಸೆ ಹೇಗೆ ಈಡೇರುತ್ತದೆ ಎಂಬುದು ಚಿತ್ರದ ಕುತೂಹಲಕಾರಿ ಅಂಶ.













Click it and Unblock the Notifications