ಅರ್ಜುನ್ ಜನ್ಯಗೆ ವಾರ್ನಿಂಗ್ ಕೊಟ್ಟ ರೂಪೇಶ್ ರಾಜಣ್ಣ, ಕಾರಣವೇನು?
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ವಾರ್ನಿಂಗ್ ನೀಡಿದ್ದಾರೆ. ಅರ್ಜುನ್ ಜನ್ಯ ಮಾತ್ರವಲ್ಲದೆ ಅಜನೀಶ್ ಲೋಕನಾಥ್, ರವಿ ಬಸ್ರೂರು, ವಿ.ಹರಿಕೃಷ್ಣ ಸೇರಿದಂತೆ ಕನ್ನಡದ ಎಲ್ಲ ಸಂಗೀತ ನಿರ್ದೇಶಕರಿಗೂ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ. ಸಂಗೀತ ನಿರ್ದೇಶಕರ ವಿರುದ್ಧ ರೂಪೇಶ್ ರಾಜಣ್ಣ ಗರಂ ಆಗಲು ಕಾರಣವೇನು ಗೊತ್ತಾ?
ಅಜನೀಶ್ ಲೋಕನಾಥ್, ರವಿ ಬಸ್ರೂರು, ಅರ್ಜುನ್ ಜನ್ಯಾ, ವಿ.ಹರಿಕೃಷ್ಣ ಸೇರಿದಂತೆ ಎಲ್ಲ ಸಂಗೀತ ನಿರ್ದೇಶಕರು ನೀವೂ ಕನ್ನಡಿಗರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮನ್ನೂ ಸೇರಿಸಿಯೇ ಸೋನು ನಿಗಮ್ ಭಯೋತ್ಪಾದಕ ಎಂದಿರುವುದು. ಅವನಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ಕೊಡುವ ಬದಲು ಅದೇ ಹಣವನ್ನು ಕನ್ನಡಿಗರಿಗೆ ಕೊಡಿ. ಕನ್ನಡದ ನಾಲ್ಕು ಮಂದಿ ಗಾಯಕರಿಗೆ ಆ ಒಬ್ಬನ ಸಂಭಾವನೆ ಕೊಡಬಹುದಲ್ಲ? ಎಂದು ಸಲಹೆ ನೀಡಿದ್ದಾರೆ.

ಇಲ್ಲಿರುವ ಕನ್ನಡದವರೂ ಚೆನ್ನಾಗಿಯೇ ಹಾಡುತ್ತಾರೆ. ಅವರ ಹಾಡು ಕೂಡ ಕೇಳಲು ಇಂಪಾಗಿಯೇ ಇರುತ್ತೆ. ಅವನೇ ಅಲ್ಲಿಂದ ಬಂದು ಹಾಡಿ ಏನೂ ಉದುರಿಸಬೇಕಾಗಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳಲ್ಲಿ ಏನಾದ್ರೂ ಸೋನು ನಿಗಮ್ ಕಡೆಯಿಂದ ಹಾಡು ಹಾಡಿಸಿದ್ರೆ ಅದನ್ನು ಮೊದಲು ಕಟ್ ಮಾಡಿ ಬಿಸಾಕಿ. ಬದಲಿಗೆ ಕನ್ನಡದ ಹೊಸಬರ ಕೈಯಲ್ಲಿ ಆ ಹಾಡನ್ನು ಹಾಡಿಸಿ ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸೋನು ನಿಗಮ್ ಕ್ಷಮೆ ಕೇಳಿದ್ರೂ ಆತನನ್ನು ಇನ್ಮುಂದೆ ಕನ್ನಡದಲ್ಲಿ ಹಾಡಲು ನಾವು ಬಿಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ನೀವು ಎಲ್ಲೇ ಸಿಕ್ಕರೂ ನಿಮ್ಮ ಮುಖಕ್ಕೆ ಮಸಿ ಬಳಿಯುತ್ತೇವೆ. ಇದು ಇಡೀ ಕರ್ನಾಟಕಕ್ಕೆ ಮಾಡಿರುವ ಅವಮಾನ. ಇಲ್ಲಿರುವ ದೊಡ್ಡ ದೊಡ್ಡ ಕಂಪನಿಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸೋನು ನಿಗಮ್ ಅವರನ್ನು ಕರೆಸಿ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ. ಆ ಕಾಲೇಜಿನವರು ಕೂಡಲೇ ಸೋನು ನಿಗಮ್ ಅವರ ಕೈಯಲ್ಲಿ ಕ್ಷಮೆ ಕೇಳಿಸಬೇಕು. ಇದೆಲ್ಲ ನಡೆದಿರುವುದು ನಿಮ್ಮ ಕಾಲೇಜಿನಲ್ಲಿ, ಇಷ್ಟೆಲ್ಲ ನಡೆದಿದ್ದರೂ ಒಂದು ಪ್ರತಿಕ್ರಿಯೆ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ
ಪ್ರೀತಿಯಿಂದ ಕನ್ನಡ ಹಾಡು ಕೇಳಿದ್ದಕ್ಕೆ ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರು ಎಂದಿರುವುದು ಎಷ್ಟರ ಮಟ್ಟಿಗೆ ಸರಿ? ಇಡೀ ಉತ್ತರ ಭಾರತ ಅವರ ದುರಹಂಕಾರಕ್ಕೆ ಮೂಲೆಗುಂಪು ಮಾಡಿದೆ. ಆದರೆ ನಾವು ಪ್ರೀತಿ ಕೊಟ್ಟಿದ್ದೀವಿ, ಹಣ ಅವಕಾಶ ಕೊಟ್ಟಿದ್ದೀವಿ. ನಮ್ಮನ್ನು ಬಳಸಿಕೊಂಡು ಈ ರೀತಿ ದುರಹಂಕಾರ ತೋರಿರುವುದು ಖಂಡನೀಯ. ಹಾಗಾಗಿ ಇನ್ಮುಂದೆ ಸೋನು ನಿಗಮ್ ಅವರನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ. ನಾವೆಲ್ಲರೂ ಸೋನು ನಿಗಮ್ ಅವರ ನಂಬರ್ ಹುಡುಕುತ್ತಿದ್ದೇವೆ. ಅವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.

ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸೋನು ನಿಗಮ್ ವಿರುದ್ಧ ಪ್ರತಿಭಟಿಸಿ ಕನ್ನಡ ಚಿತ್ರರಂಗದಿಂದ ಸಹಕಾರ ಕೊಡದೆ, ನಿರ್ಬಂಧ ಮಾಡಿ ಕನ್ನಡಿಗರ ಪರ ನಿಲ್ಲುವಂತೆ ನಮ್ಮ ಯುವ ಕರ್ನಾಟಕ ವೇದಿಕೆ ವತಿಯಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ಒತ್ತಾಯ ಮಾಡಿದ್ದೇವೆ. ಕನ್ನಡ ದ್ರೋಹಿಗಳೇ ಎಚ್ಚರ ಎಂದಿದ್ದಾರೆ.












Click it and Unblock the Notifications