Rishab Shetty: ರಿಷಬ್ ಹುಟ್ಟುಹಬ್ಬದಂದೇ ಹೊರಬಿತ್ತು 'ಕಾಂತಾರ ಚಾಪ್ಟರ್-1' ರಿಲೀಸ್ ಬಗ್ಗೆ ಬಿಗ್ ಅಪ್ಡೇಟ್
Kantara Chapter 1: ಸ್ಯಾಂಡಲ್‌ವುಡ್ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಾಂತಾರ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದರು. ಕಾಂತಾರ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಇದೇ ಕಥೆಯನ್ನು ವಿವಿಧ ಭಾಗಗಳಾಗಿ ಮುಂದುವರಿಸಿದ್ದಾರೆ. ಇದೀಗ "ಕಾಂತಾರ ಚಾಪ್ಟರ್-1" ಸಿನಿಮಾ ಶೂಟಿಂಗ್ ಕೂಡ ಪೂರ್ಣಗೊಳ್ಳುತ್ತಿದೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಬಿಗ್ ಅಪ್ಡೇಟ್ ನೀಡಿದೆ. ರಿಷಬ್ ಶೆಟ್ಟಿ ಅವರಿಗೆ ಬರ್ತ್‌ಡೇ ವಿಶ್ ಮಾಡಿ, ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುದನ್ನೂ ಘೋಷಿಸಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆಗಿ, ನಂತರ ಬಹುಭಾಷೆಗಳಲ್ಲೂ ಈ ಸಿನಿಮಾ ತೆರೆಕಂಡಿತ್ತು. ರಿಷಬ್ ಶೆಟ್ಟಿ ಅವರ ಕಥೆ ಹಾಗೂ ಅಭಿನಯಕ್ಕೆ ಬಾಲಿವುಡ್ ಮಂದಿ ಕೂಡ ಬೆರಗಾಗಿದ್ದರು. ಹೀಗಾಗಿ ರಿಷಬ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಈಗ ರಿಷಬ್ ಶೆಟ್ಟಿ ಅವರಿಗೆ ಬೇರೆ ಚಿತ್ರರಂಗಗಳಿಂದಲೂ ಭಾರಿ ಬೇಡಿಕೆ ಇದ್ದು, ತೆಲುಗು ಹಾಗೂ ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇನ್ನು "ಕಾಂತಾರ ಚಾಪ್ಟರ್-1" ಶೂಟಿಂಗ್ ಕೂಡ ಬಹುತೇಕ ಅಂತಿಮ ಹಂತಿಮದಲ್ಲಿದ್ದು, ಆಗಲೇ ರಿಲೀಸ್ ಡೇಟ್ ಕೂಡ ಘೋಷಣೆಯಾಗಿದೆ.

'ದಂತಕಥೆಗಳು ಹುಟ್ಟುವ ಮತ್ತು ಕಾಡಿನ ಘರ್ಜನೆ ಪ್ರತಿಧ್ವನಿಸುವ ಸ್ಥಳ. ಕಾಂತಾರ-ಲಕ್ಷಾಂತರ ಜನರನ್ನು ಪ್ರೇರೇಪಿಸಿದ ಮೇರುಕೃತಿಗೆ ಪ್ರೀಕ್ವೆಲ್. ದಂತಕಥೆಯ ಹಿಂದಿನ ಹಾದಿ ತೋರುವ ಶಕ್ತಿಯಾದ ರಿಷಬ್ ಶೆಟ್ಟಿ ಅವರಿಗೆ ದೈವಿಕ ಮತ್ತು ಅದ್ಭುತವಾದ ಜನ್ಮದಿನದ ಶುಭಾಶಯಗಳು ಎಂದು ಹೊಂಬಾಳೆ ಫಿಲ್ಮ್ಸ್ ವಿಶ್ ಮಾಡಿದೆ. ದೈವಿಕ ಸಿನಿಮೀಯ ವಿದ್ಯಮಾನಕ್ಕೆ ಬಹು ನಿರೀಕ್ಷಿತ ಪೂರ್ವಭಾಗವಾದ Kantara Chapter-1 ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಘರ್ಜಿಸಲಿದೆ. ದಂತಕಥೆಯ ಮುನ್ನುಡಿ, ಆ ನುಡಿಗೊಂದು ಪರಿಚಯ, ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ' ಎಂದು ಎಕ್ಸ್‌ನಲ್ಲಿ ಅಪ್ಡೇಟ್ ನೀಡಿದೆ.
ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ರಿಷಬ್ ಅವರ ಲುಕ್ ಅನ್ನು ಸಹ ರಿವೀಲ್ ಮಾಡಿದ್ದು, ಫೋಟೋಗಳು ವೈರಲ್ ಆಗಿವೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ತೆರೆಕಾಣಲಿದೆ. ಈ ಸಿನಿಮಾ ಮೂಲಕ ರಿಷಬ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಕಾಂತಾರ ಬಳಿಕ ಅದರ ಪ್ರೀಕ್ವೆಲ್ ನೋಡಲು ಪ್ರೇಕ್ಷಕರು ಕೂಡ ಕಾತರದಿಂದ ಕಾದಿದ್ದಾರೆ.

ಇತ್ತೀಚೆಗೆ ಕಾಂತಾರ ಚಾಪ್ಟರ್-1 ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಕಲಾವಿದರ ಸರಣಿ ಸಾವು ಸಂಭವಿಸಿತ್ತು. ಪದೇ ಪದೇ ಇಂತಹ ಅವಘಡಗಳು ಸಂಭವಿಸುತ್ತಿರುವುದರಿಂದ ಹಲವು ವದಂತಿಗಳು ಕೂಡ ಹಬ್ಬಿದ್ದವು. ಈ ಹಿಂದೆ ದೈವವು ರಿಷಬ್ ಶೆಟ್ಟಿ ಅವರಿಗೆ ಎಚ್ಚರಿಕೆ ಹಾಗೂ ಭಯ ನೀಡಿತ್ತು. ಈ ದುರಂತಗಳ ಹಿಂದೆ ದೈವದ ಮಾತುಗಳು ತಳುಕು ಹಾಕಿಕೊಂಡಿತ್ತು. ಇತ್ತೀಚೆಗೆ ಶೂಟಿಂಗ್ ವೇಳೆ ದೋಣಿ ಮುಗುಚಿ, ಹಲವರು ಗಂಭೀರ ಗಾಯಗೊಂಡಿದ್ದರು ಎಂಬ ಸುದ್ದಿ ಹರಿದಾಡಿತ್ತು. ಬಳಿಕ ಚಿತ್ರತಂಡವು ಈ ವದಂತಿಗಳನ್ನು ತಳ್ಳಿಹಾಕಿ ಸ್ಪಷ್ಟನೆ ನೀಡಿತ್ತು. ಇದೀಗ ಕೊನೆಗೂ ಎಲ್ಲ ವಿಘ್ನಗಳನ್ನು ದಾಟಿ ಕಾಂತಾರ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.












Click it and Unblock the Notifications