ಬೆಳ್ಳಂಬೆಳಗ್ಗೆಯೇ ಪರಪ್ಪನ ಅಗ್ರಹಾರದಿಂದ ದರ್ಶನ್ ಶಿಫ್ಟ್: ಬಳ್ಳಾರಿಯಲ್ಲಿ ಹೈ ಸೆಕ್ಯೂರಿಟಿ
ಬೆಂಗಳೂರು, ಆಗಸ್ಟ್ 29: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿತ್ತು ಎನ್ನುವ ಆರೋಪದ ಮೇಲೆ ನಟ ದರ್ಶನ್‌ಅನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಇತ್ತೀಚಿಗೆ ದರ್ಶನ್ ಜೈಲಿನಲ್ಲಿರುವ ಫೋಟೋವೊಂದು ವೈರಲ್ ಆಗಿತ್ತು. ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಎನ್ನುವ ರೌಡಿಶೀಟರ್ ಜೊತೆಗೆ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಆರೋಪಿ ಜೊತೆಗೂಡಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು.

ಈ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಮಾಡಿದ ಮನವಿ ಮೇರೆಗೆ ನ್ಯಾಯಾಲಯ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿತ್ತು. ಕೋರ್ಟ್ ಪ್ರಕರಣದ ಎ-2 ಆರೋಪಿ ದರ್ಶನ್‌ನನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಮಾಡಲು ಅನುಮತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ನಟ ದರ್ಶನ್‌ಅನ್ನು ಇಂದು ( ಆಗಸ್ಟ್ 29) ಮುಂಜಾನೆ 4.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸರು ಕರೆದೊಯ್ದಿದ್ದಾರೆ. ಬೊಲೆರೋ ವಾಹನದಲ್ಲಿ ದರ್ಶನ್‌ನ್ನು ಬಳ್ಳಾರಿಗೆ ಕರೆದೊಯ್ಯಲಾಗುತ್ತಿದ್ದು, ಬೆಳಗ್ಗೆ 9.30-10ರ ಸುಮಾರಿಗೆ ಬಳ್ಳಾರಿ ಜೈಲು ತಲುಪುವ ಸಾಧ್ಯತೆ ಇದೆ. ಭದ್ರತಾ ದೃಷ್ಟಿಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿಗಳನ್ನು ಕರೆದೊಯ್ಯಲಾಗಿದೆ.
ಮೊದಲು ನೆಲಮಂಗಲ ಮೂಲಕ ತುಮಕೂರು, ಶಿರಾ, ಚಳ್ಳಕೆರೆ, ಹಾನಗಲ್ಲು, ಹಲಕುಂದಿ ಮಾರ್ಗವಾಗಿ ಬಳ್ಳಾರಿ ಜೈಲಿಗೆ ನಟ ದರ್ಶನ್‌ನನ್ನು ಸ್ಥಳಾಂತರ ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ಭದ್ರತಾ ದೃಷ್ಟಿಯಿಂದ ದರ್ಶನ್ ಇರುವ ವಾಹನ ಪರಪ್ಪನ ಅಗ್ರಹಾರ ಜೈಲಿನಿಂದ ಸಿಲ್ಕ್ ಬೋರ್ಡ್- ಮೇಖ್ರಿ ಸರ್ಕಲ್ -ಯಲಹಂಕ - ದೇವನಹಳ್ಳಿ - ಚಿಕ್ಕಬಳ್ಳಾಪುರ - ಬಾಗೇಪಲ್ಲಿ- ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ತಲುಪುವ ಸಾಧ್ಯತೆ ಇದೆ. ಇನ್ನು ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications