ಮೊದಲೇ ಗೊತ್ತಿದ್ದರೆ ಹೋಗ್ತಾನೇ ಇರಲಿಲ್ಲ: ಪೊಲೀಸ್ ವಿಚಾರಣೆ ಬಳಿಕ ಚಿಕ್ಕಣ್ಣ ಹೇಳಿದ್ದೇನು..?
ಬಳ್ಳಾರಿ, ಆಗಸ್ಟ್ 29: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರವಾಗಿ ನಡೆಯುತ್ತಿದೆ. ಅತ್ತ ಈ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದ್ದರೆ, ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಮತ್ತೊಮ್ಮೆ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ಚಿಕ್ಕಣ್ಣ ಬಸವೇಶ್ವರನಗರದಲ್ಲಿರುವ ತನಿಖಾಧಿಕಾರಿ ಮುಂದೆ ಇಂದು(ಆಗಸ್ಟ್ 29) ಗುರುವಾರ ವಿಚಾರಣೆಗೆ ಹಾಜರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿರುವುದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿಗೆ ವಿಚಾರಣೆ ಎದುರಿಸಿದ್ದ ನಟ ಚಿಕ್ಕಣ್ಣ, ನ್ಯಾಯಾಧೀಶರ ಮುಂದೆಯೂ ಹಾಜರಾಗಿದ್ದರು. ಸಿಆರ್‌ಪಿಸಿ 164 ಅಡಿಯಲ್ಲಿ ಅವರ ಹೇಳಿಕೆ ಕೂಡ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ. ಕಳೆದ ಬಾರಿ ವಿಚಾರಣೆ ಬಳಿಕ ನಟ ದರ್ಶನ್ ಭೇಟಿ ಮಾಡಲು ನಟ ಚಿಕ್ಕಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು.
ಇತ್ತೀಚಿಗೆ ನಟ ಅಭಿಷೇಕ್ ಅಂಬರೀಶ್, ನಟ ಧನ್ವೀರ್ ಜೊತೆ ಚಿಕ್ಕಣ್ಣ ಕೂಡ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ದರ್ಶನ್ ಜೊತೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ಮತ್ತೊಮ್ಮೆ ನೋಟಿಸ್ ನೀಡಲಾಗಿದ್ದು, ಚಿಕ್ಕಣ್ಣ ಮತ್ತೆ ವಿಚಾರಣೆ ಎದುರಿಸಿದ್ದಾರೆ.
ಪೊಲೀಸರ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಚಿಕ್ಕಣ್ಣ, 'ಮೊನ್ನೆ ಜೈಲಿಗೆ ದರ್ಶನ್ ಸರ್‌ನ ನೋಡಲು ಹೋಗಿದ್ದೆ. ಅಲ್ಲಿ ಹೋದಾಗ ಏನೇನು ಮಾತನಾಡಿದ್ರಿ? ಏನು? ಅಂತೆಲ್ಲಾ ಪ್ರಶ್ನೆಗಳನ್ನು ಕೇಳಲು ಪೊಲೀಸರು ಕರೆಸಿದ್ದರು. ಅಧಿಕಾರಿಗಳು ಏನೇನು ಪ್ರಶ್ನೆ ಕೇಳಿದರು ಅದಕ್ಕೆಲ್ಲಾ ಉತ್ತರಿಸಿದ್ದೇನೆ' ಎಂದರು.
'ಜೈಲಿನಲ್ಲಿರುವ ಅವರನ್ನು ಮಾತನಾಡಿಸಬಾರದು ಅಂತಾ ಗೊತ್ತಿರಲಿಲ್ಲ. ಈಗ ಗೊತ್ತಾಗಿದ್ದು. ಒಂದು ವೇಳೆ ಈ ವಿಚಾರ ಮೊದಲೇ ಗೊತ್ತಿದ್ದರೆ ಹೋಗುತ್ತಿರಲಿಲ್ಲ. ಈಗ ಅದಕ್ಕೆ ಕರೆದು ವಿಚಾರಣೆ ನಡೆಸಿದ್ದಾರೆ. ಅವರು ಕೇಳಿದಕ್ಕೆಲ್ಲಾ ಉತ್ತರ ಕೊಟ್ಟಿದ್ದೇನೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಇದರಲ್ಲಿ ನಾನೂ ಒಬ್ಬ ಸಾಕ್ಷಿದಾರ ಆಗಿರುವುದರಿಂದ ನಾನು ಏನು ಹೆಚ್ಚು ಮಾತನಾಡಲು ಆಗುವುದಿಲ್ಲ' ಎಂದು ಮಾಧ್ಯಮಗಳಿಗೆ ನಟ ಚಿಕ್ಕಣ್ಣ ಉತ್ತರ ನೀಡಿದ್ದಾರೆ.
'ಸದ್ಯ ಮತ್ತೆ ಬರಲು ಪೊಲೀಸರು ಕರೆದಿಲ್ಲ. ಒಂದು ವೇಳೆ ಕರೆದರೆ ಖಂಡಿತಾ ಬರುತ್ತೇನೆ. ವಿಚಾರಣೆಗೆ ಸಹಕಾರ ಕೊಡುತ್ತೇನೆ. ಜೈಲಿಗೆ ಹೋಗಿ ಭೇಟಿ ಮಾಡಲು ಯಾರೂ ಹೇಳಿರಲಿಲ್ಲ. ಇವತ್ತು ವಿಚಾರಣೆಗೆ ಹಾಜರಾಗುವಂತೆ ನಿನ್ನೆ ನೋಟಿಸ್ ಕೊಟ್ಟಿದ್ದರು. ಇವತ್ತು ಒಂಬತ್ತು ಗಂಟೆಗೆ ಬರಲು ಹೇಳಿದ್ದರು. ಹೋಗಿ ವಿಚಾರಣೆ ಎದುರಿಸಿದ್ದೇನೆ' ಎಂದು ಹೇಳಿದರು.











Click it and Unblock the Notifications