ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಆಹ್ವಾನ ಪತ್ರಿಕೆಯ ಫೋಟೋ ವೈರಲ್; ಮುಹೂರ್ತ, ಆರತಕ್ಷತೆ ದಿನಾಂಕ ರಿವೀಲ್
Rashmika Vijay wedding date: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಮತ್ತೊಂದು ಸಂಭ್ರಮದ ಸುದ್ದಿ ಸಿಕ್ಕಂತಾಗಿದೆ. ಹಲವು ವರ್ಷಗಳಿಂದ ತಮ್ಮ ಸಂಬಂಧವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದ ಈ ಜೋಡಿ, ಇದೀಗ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಇದೇ ತಿಂಗಳ ಕೊನೆಯ ವಾರದಲ್ಲಿ ಈ ಜೋಡಿ ಮದುವೆ ನಿಗದಿಯಾಗಿದೆ ಎಂಬ ವದಂತಿ ನಡುವೆಯೇ ಮದುವೆ ಆಮಂತ್ರಣ ಪತ್ರ ವೈರಲ್ ಆಗಿದೆ. ಇದರಲ್ಲಿ ಮದುವೆ ಮುಹೂರ್ತದ ದಿನಾಂಕ, ಆರತಕ್ಷತೆ ವಿವರವೂ ಇದೆ.
ಇತ್ತೀಚೆಗೆ ರಶ್ಮಿಕಾ ಮದುವೆ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ, "ಕುಟುಂಬದ ಆಶೀರ್ವಾದದೊಂದಿಗೆ ರಶ್ಮಿಕಾ ಮತ್ತು ನಾನು 26.02.26ರಂದು ಸಣ್ಣ ಮತ್ತು ಆತ್ಮೀಯ ಸಮಾರಂಭದಲ್ಲಿ ಮದುವೆಯಾಗುತ್ತಿದ್ದೇವೆ" ಎಂದು ಉಲ್ಲೇಖಿಸಲಾಗಿದೆ. "ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಆರಂಭಿಸುವ ಸಂದರ್ಭದಲ್ಲಿ, ನಮ್ಮ ಪ್ರಯಾಣದ ಭಾಗವಾಗಿದ್ದ ನಿಮ್ಮಂತಹವರೊಂದಿಗೆ ಈ ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತೇವೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ನಮ್ಮಿಗೆ ವಿಶೇಷ" ಎಂಬ ಹೃದಯಸ್ಪರ್ಶಿ ಸಾಲುಗಳೂ ಕಾಣಿಸುತ್ತಿವೆ. ಇದರಿಂದ ಜೋಡಿ ಅತ್ಯಂತ ಖಾಸಗಿ ಸಮಾರಂಭದಲ್ಲಿ ಮದುವೆಯಾಗಲು ತೀರ್ಮಾನಿಸಿರುವುದು ಸ್ಪಷ್ಟವಾಗುತ್ತದೆ.

ರಾಜಸ್ಥಾನದಲ್ಲಿ ಖಾಸಗಿ ಮದುವೆ?
ಮೂಲಗಳ ಪ್ರಕಾರ ಇವರ ಮದುವೆ ರಾಜಸ್ಥಾನದ ಐಷಾರಾಮಿ ಹೋಟೆಲ್‌ನಲ್ಲಿ ನಡೆಯಲಿದೆಯಂತೆ. ಕುಟುಂಬ ಸದಸ್ಯರು, ಆಪ್ತ ಬಂಧುಗಳು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಹಾಜರಾಗುವ ಕಾರ್ಯಕ್ರಮವಿರಲಿದೆ ಎಂದು ಹೇಳಲಾಗಿದೆ. ಭದ್ರತೆ ಮತ್ತು ಗೌಪ್ಯತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ಹೈದರಾಬಾದ್‌ನಲ್ಲಿ ಆಮಂತ್ರಣ ರಿಸೆಪ್ಷನ್
ಮದುವೆಯ ನಂತರ ಮಾರ್ಚ್ 4, 2026ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ತಾಜ್ ಕೃಷ್ಣದಲ್ಲಿ ಭರ್ಜರಿ ರಿಸೆಪ್ಷನ್ ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಟಾಲಿವುಡ್, ಬಾಲಿವುಡ್ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವೈರಲ್ ಆಗಿರುವ ಆಹ್ವಾನ ಪತ್ರಿಕೆ ಸಾಕಷ್ಟು ಕುತೂಹಲ ಮೂಡಿಸಿದರೂ, ಜೋಡಿ ಇದುವರೆಗೆ ಅಧಿಕೃತವಾಗಿ ಮದುವೆ ಬಗ್ಗೆ ಘೋಷಣೆ ಮಾಡಿಲ್ಲ. ಆದರೂ ಅಭಿಮಾನಿಗಳಲ್ಲಿ ಸಂಭ್ರಮದ ವಾತಾವರಣ ಮೂಡಿದೆ. ಇದು ನಿಜವಾಗಿಯೂ ರಶ್ಮಿಕಾ-ವಿಜಯ್ ಜೀವನದ ಹೊಸ ಆರಂಭವೇ? ಅಥವಾ ಮತ್ತೊಂದು ವೈರಲ್ ಗಾಸಿಪ್‌ವೇ? ಅಧಿಕೃತ ಪ್ರಕಟಣೆ ಹೊರಬರುವವರೆಗೂ ಕುತೂಹಲ ಮುಂದುವರಿಯಲಿದೆ. ಆದರೆ ಈ ಜೋಡಿ ಯಾವಾಗ ಮದುವೆಯಾದರೂ, ಅದು ಭಾರತೀಯ ಸಿನಿರಂಗದ ದೊಡ್ಡ ಸಂಭ್ರಮವಾಗಲಿದೆ.
ಇತ್ತೀಚೆಗೆ ರಾಜಸ್ಥಾನದ ಸಿಟಿ ಪ್ಯಾಲೇಸ್‌ನಲ್ಲಿ ನಡೆದ ಅಲಂಕಾರದ ವಿಡಿಯೋಗಳು ವೈರಲ್ ಆಗಿದ್ದವು. ಅದನ್ನು ನೋಡಿದ ಅಭಿಮಾನಿಗಳು, ಇದು ವಿಜಯ್-ರಶ್ಮಿಕಾ ಮದುವೆ ಸಿದ್ಧತೆ ಎಂದು ಸುದ್ದಿ ಹಬ್ಬಿಸಿದರು. ಕೆಲವರು ಫೆಬ್ರವರಿ ಆರಂಭದಲ್ಲೇ ಮದುವೆ ನಡೆಯಲಿದೆ ಎಂದು ಹೇಳಿದರೆ, ಮತ್ತೊಂದು ವರದಿ ಪ್ರಕಾರ ಫೆಬ್ರವರಿ 26ರಂದು ಉದಯಪುರದ ಹೇರಿಟೇಜ್ ವೇದಿಕೆಯಲ್ಲಿ ಸಣ್ಣ, ಆತ್ಮೀಯ ಸಮಾರಂಭದಲ್ಲಿ ವಿವಾಹ ನಡೆಯಬಹುದು ಎಂಬ ಸುದ್ದಿ ಹರಡಿತ್ತು.












Click it and Unblock the Notifications