Rashmika Mandanna: ಡೈಮಂಡ್ ರಿಂಗ್ ತೋರಿಸಿ ಎಂಗೇಜ್‌ಮೆಂಟ್ ಗುಟ್ಟು ರಟ್ಟು ಮಾಡಿದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಇದನ್ನು ಅಧಿಕೃತವಾಗಿ ಘೋಷಣೆ ಮಾಡದೇ ಇದ್ದರೂ, ಅವರ ಕೈಯಲ್ಲಿರುವ ಉಂಗುರ ಸತ್ಯ ಹೇಳುತ್ತಿದೆ. ಇತ್ತೀಚೆಗೆ ವಿಜಯ್ ದೇವರಕೊಂಡ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಕೈಯಲ್ಲಿ ಉಂಗುರ ಗಮನ ಸೆಳೆದಿತ್ತು. ಹಾಗಾಗಿ ಎಂಗೇಜ್‌ಮೆಂಟ್ ಆಗಿರೋದು ಬಹುತೇಕ ಕನ್ಫರ್ಮ್ ಆಗಿತ್ತು. ಇದೀಗ ರಶ್ಮಿಕಾ ಕೈಯಲ್ಲೂ ಸ್ಪೆಷಲ್ ರಿಂಗ್ ಕಾಣಿಸಿಕೊಂಡಿದೆ. ಈ ಫೋಟೋ, ವಿಡಿಯೋ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ತನ್ನ ನಾಯಿಯನ್ನು ಮುದ್ದಾಡುತ್ತಾ ತಮ್ಮ ಕೈಯಲ್ಲಿರುವ ಉಂಗುರವನ್ನು ಪ್ರದರ್ಶಿಸಿದ್ದಾರೆ. ವೀಡಿಯೊದಲ್ಲಿ ರಶ್ಮಿಕಾ ತನ್ನ ಸಾಕು ನಾಯಿಯೊಂದಿಗೆ ತಮಾಷೆಯಾಗಿ ಸಮಯ ಕಳೆಯುವುದನ್ನು ಕಾಣಬಹುದು. ಆದರೆ ಎಲ್ಲರ ಗಮನ ಸೆಳೆದದ್ದು ಅವರ ಬೆರಳಿನಲ್ಲಿದ್ದ ಹೊಳೆಯುವ ವಜ್ರದ ಉಂಗುರ.

ಹೌದು, ಆಯುಷ್ಮಾನ್ ಖುರಾನಾ ಜೊತೆ ನಟಿಸಿರುವ ತಮ್ಮಾ ಚಿತ್ರದ ಹಾಡಿನ ಕ್ಲಿಪ್ ಅನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ನಾನು ಕೇಳಿದ ಮೊದಲ ಹಾಡು ಇದು. ಇನ್ನೂ ನಾನು ಈ ಹಾಡನ್ನು ಪ್ರೀತಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ವಿಡಿಯೋದಲ್ಲಿ ಹಾಡಿನ ಬಗ್ಗೆ ಉಲ್ಲೇಖಿಸಿದ್ದರೂ ಅವರ ಕೈಯಲ್ಲಿದ್ದ ವಜ್ರದ ಉಂಗುರ ಮೇಲೆ ಎಲ್ಲರ ಕಣ್ಣುಬಿದ್ದಿದೆ. ಅದು ಅವರು ತಮ್ಮ ನಾಯಿಯೊಂದಿಗೆ ಆಟವಾಡುವಾಗ ಕಾಣಿಸಿಕೊಂಡಿತು. ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆ ಹರಿಸಿದ್ದಾರೆ. ಇದು ನಿಶ್ಚಿತಾರ್ಥದ ಅಧಿಕೃತ ದೃಢೀಕರಣ ಎಂದು ಕರೆದಿದ್ದಾರೆ.
ವಿಜಯ್ ದೇವರಕೊಂಡ ಅವರ ಆಪ್ತರು ಈಗಾಗಲೇ ನಿಶ್ಚಿತಾರ್ಥದ ವಿಚಾರವನ್ನು ಖಚಿತಪಡಿಸಿದ್ದಾರೆ. ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ದೃಢಪಡಿಸಿದ್ದಾರೆ. ಫೆಬ್ರವರಿ 2026ರಲ್ಲಿ ಇಬ್ಬರೂ ವಿವಾಹವಾಗಲಿದ್ದಾರೆ ಎಂದೂ ಸುಳಿವು ನೀಡಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಬ್ಬರ ಕೈಯಲ್ಲೂ ಉಂಗುರ ಕಾಣಿಸಿಕೊಂಡಿದೆ.
ರಶ್ಮಿಕಾ ಮತ್ತು ವಿಜಯ್ ಅವರ ಗೀತ ಗೋವಿಂದಂ (2018) ಸೆಟ್‌ನಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದರು. ಈ ಸಿನಿಮಾ ಹಿಟ್ ಆದ ನಂತರ ಡಿಯರ್ ಕಾಮ್ರೇಡ್ (2019) ನಲ್ಲಿ ಅವರ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯಿತು. ಅಂದಿನಿಂದಲೂ ಇಬ್ಬರೂ ಸ್ನೇಹಿತರಾಗಿ, ಡೇಟಿಂಗ್ ವದಂತಿ ನಡುವೆ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಯಾವಾಗಲೂ ತಮ್ಮ ಸಂಬಂಧದ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲದೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇಕೆ ಎಂದೂ ಇಬ್ಬರ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.












Click it and Unblock the Notifications