ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೇಂಜ್' (Dhurandhar 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದರೂ, ಹಳೆಯ ವಿವಾದವೊಂದು ಮಾತ್ರ ನಟನನ್ನು ಬಿಡದೇ ಕಾಡುತ್ತಿದೆ. ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ ಚಾಪ್ಟರ್-1' ಸಿನಿಮಾದ ದೈವಾರಾಧನೆಯ ಸಂಪ್ರದಾಯವನ್ನು ಅಣಕಿಸಿದ ಪ್ರಕರಣದಲ್ಲಿ ರಣವೀರ್ ಸಿಂಗ್ ಈಗ ಕರ್ನಾಟಕ ಹೈಕೋರ್ಟ್ ಮುಂದೆ ಮಂಡಿಯೂರಿದ್ದಾರೆ. ಇಂದು ನಡೆದ ವಿಚಾರಣೆಯಲ್ಲಿ ರಣವೀರ್ ಸಿಂಗ್ ಅವರು ತಮ್ಮ ತಪ್ಪಿಗೆ ಬೇಷರತ್ ಕ್ಷಮೆಯಾಚಿಸಲು ಸಿದ್ಧರಿರುವುದಾಗಿ ಮತ್ತು ಪ್ರಾಯಶ್ಚಿತ್ತವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ವಿವಾದ?
ರಿಷಬ್ ಶೆಟ್ಟಿ ನಿರ್ದೇಶನದ, ಕರ್ನಾಟಕದ ಕರಾವಳಿಯ ದೈವಾರಾಧನೆಯ ಹಿನ್ನೆಲೆಯುಳ್ಳ 'ಕಾಂತಾರ' ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದರೂ, ಅದರ ಸುತ್ತಲ ವಿವಾದಗಳು ಮಾತ್ರ ಇನ್ನೂ ತಣ್ಣಗಾಗಿಲ್ಲ. ಈ ವಿವಾದಕ್ಕೆ ಸಂಬಂಧಿಸಿದಂತೆ ಈಗ ನಟ ರಣವೀರ್ ಸಿಂಗ್ ಅವರು ಕರ್ನಾಟಕ ಹೈಕೋರ್ಟ್‌ಗೆ ಮಹತ್ವದ ಮಾಹಿತಿ ನೀಡಿದ್ದಾರೆ. 'ಕಾಂತಾರ ಚಾಪ್ಟರ್-1' ಸಿನಿಮಾದ ದೈವಾರಾಧನೆಯ ನೃತ್ಯ ಅಥವಾ ಅದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಅಣಕಿಸುವಂತೆ ಅಥವಾ ಗೌರವಕ್ಕೆ ಧಕ್ಕೆ ಬರುವಂತೆ ರಣವೀರ್ ಸಿಂಗ್ ಅವರ ಕೆಲವು ನಡೆಗಳು ಕನ್ನಡಿಗರ ಮತ್ತು ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದವು.

ಈ ಬಗ್ಗೆ ಕರ್ನಾಟಕದ ವಿವಿಧೆಡೆ ದೂರು ದಾಖಲಾಗಿದ್ದವು. ಈ ಪ್ರಕರಣದ ವಿಚಾರಣೆ ಈಗ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಕಳೆದ ವರ್ಷ ರಣವೀರ್ ಸಿಂಗ್ ಅವರ 'ಧುರಂಧರ್' ಮೊದಲ ಭಾಗದ ಬಿಡುಗಡೆಯ ಸಮಯದಲ್ಲಿ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಘಟನೆ ನಡೆದಿತ್ತು. ರಿಷಬ್ ಶೆಟ್ಟಿ ಅವರ ಸಮ್ಮುಖದಲ್ಲೇ ವೇದಿಕೆಯ ಮೇಲೆ 'ಕಾಂತಾರ' ಸಿನಿಮಾದ ದೈವದ ಅಭಿನಯವನ್ನು ರಣವೀರ್ ಅಣಕಿಸಿದ್ದರು.
ದೈವಾರಾಧನೆಯ ಆವೇಶದ ದೃಶ್ಯವನ್ನು ಅಣಕಿಸುತ್ತಾ, ಪವಿತ್ರ ದೈವವನ್ನು 'ಹೆಣ್ಣು ಭೂತ' ಎಂದು ರಣವೀರ್ ಕರೆದಿದ್ದರು. ಇದು ಕರಾವಳಿ ಕರ್ನಾಟಕದ ಜನರ ಮತ್ತು ದೈವಾರಾಧಕರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅವರ ನಟನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ಎಫ್‌ಐಆರ್ ರದ್ದು ಕೋರಿದ್ದ ರಣವೀರ್
ನಟ ರಣವೀರ್ ಸಿಂಗ್ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ನಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, "ಸ್ಟಾರ್ ಪಟ್ಟ ಎನ್ನುವುದು ಕೇವಲ ಜನಪ್ರಿಯತೆಯಲ್ಲ, ಅದು ದೊಡ್ಡ ಜವಾಬ್ದಾರಿ" ಎಂದು ಮೌಖಿಕವಾಗಿ ಎಚ್ಚರಿಸಿದೆ. ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ರಣವೀರ್ ಸಿಂಗ್ ಅವರ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನೀವು ಸಮಾಜದಲ್ಲಿ ಗುರುತಿಸಿಕೊಂಡಿರುವ ದೊಡ್ಡ ನಟರು. ನೀವು ಮಾಡುವ ಪ್ರತಿಯೊಂದು ಕೆಲಸವೂ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರುತ್ತದೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಅಣಕವಾಡುವುದು ಸರಿಯಲ್ಲ" ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ದೈವಾರಾಧನೆಯಂತಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳ ಜೊತೆ ನಟರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಾಲಯ ಚಾಟಿ ಬೀಸಿದೆ. ನ್ಯಾಯಾಲಯದ ಕಠಿಣ ನಿಲುವನ್ನು ಗಮನಿಸಿದ ರಣವೀರ್ ಸಿಂಗ್ ಅವರ ಪರ ವಕೀಲರು, ನಟನು ಈ ಘಟನೆಗಾಗಿ ಬೇಷರತ್ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ. ಕೇವಲ ಮೌಖಿಕವಾಗಿ ಅಲ್ಲದೆ, ಅಧಿಕೃತವಾಗಿ ಅಫಿಡವಿಟ್ ಸಲ್ಲಿಸುವ ಮೂಲಕ ಕ್ಷಮೆ ಕೋರಲು ನಟ ಒಪ್ಪಿದ್ದಾರೆ. ಅಲ್ಲದೆ, ಪ್ರಾಯಶ್ಚಿತ್ತವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವುದಾಗಿ ಕೋರ್ಟ್‌ಗೆ ಭರವಸೆ ನೀಡಿದ್ದಾರೆ.












Click it and Unblock the Notifications