Kantara: ಕಾಂತಾರ ದೈವದ ಬಗ್ಗೆ ಅಪಹಾಸ್ಯ: ವಿರೋಧದ ಬೆನ್ನಲ್ಲೇ ಕ್ಷಮೆ ಕೇಳಿದ ನಟ ರಣವೀರ್ ಸಿಂಗ್
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ & ಕಾಂತಾರ ಚಾಪ್ಟರ್-1 ಸಿನಿಮಾಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಎರಡೂ ಸಿನಿಮಾಗಳಲ್ಲಿ ತುಳುನಾಡಿನ ದೈವಗಳ ಬಗ್ಗೆ ಉಲ್ಲೇಖಿಸಲಾಗಿದೆ. ರಿಷಬ್ ಶೆಟ್ಟಿ ಕೂಡ ಆ ಪಾತ್ರಗಳನ್ನು ಮಾಡುವಾಗ ಕೆಲ ಧಾರ್ಮಿಕ ನಂಬಿಕೆಗಳನ್ನು ಪಾಲಿಸಿ, ಅದಕ್ಕೆ ಯಾವುದೇ ಚ್ಯುತಿಯಾಗದಂತೆ ಎಚ್ಚರವಹಿಸಿದ್ದರು. ಆದರೆ ಇತ್ತೀಚೆಗೆ ಕಾಂತಾರ ದೈವದ ಬಗ್ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅಣಕಿಸುವಂತೆ ವರ್ತಿಸಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಎದುರಲ್ಲೇ ಕಾಂತಾರ: ಅಧ್ಯಾಯ-1ರ ಪ್ರಮುಖ ದೃಶ್ಯವನ್ನು ರಣವೀರ್ ಅಪಹಾಸ್ಯ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೊದಲನೇ ವೈರಲ್ ವಿಡಿಯೋದಲ್ಲಿ ರಣವೀರ್ ಸಿಂಗ್ ಮಾಡಿದ ಮಿಮಿಕ್ರಿಗೆ ರಿಷಬ್ ಶೆಟ್ಟಿ ನಗುತ್ತಿರುವಂತೆ ತೋರಿಸಲಾಗಿತ್ತು.

ಆದರೆ, ಮತ್ತೊಂದು ವಿಡಿಯೋದಲ್ಲಿ ಅಸಲಿಗೆ ಅಲ್ಲಿ ನಡೆದಿದ್ದೇನು ಎಂಬುದು ಸ್ಪಷ್ಟವಾಗಿತ್ತು. ಕಾಂತಾರ ಸಿನಿಮಾ ಬಗ್ಗೆ ವೇದಿಕೆಯಲ್ಲಿ ಮಾತು ಶುರು ಮಾಡಿದ್ದ ರಣವೀರ್ ಸಿಂಗ್ ರಿಷಬ್ ಶೆಟ್ಟಿ ಎದುರಿಗೆ ಬಂದು ಸಿನಿಮಾದಲ್ಲಿನ ದೈವದ ಬಗ್ಗೆ ಜೋಕ್ ಮಾಡಿ ಮಿಮಿಕ್ರಿ ಮಾಡಿದ್ದರು. ಇದಕ್ಕೆ ಅಲ್ಲೇ ಇದ್ದ ರಿಷಬ್ ಕೋಪದಿಂದ ಇದು ಸರಿಯಲ್ಲ ಎಂದೇ ರಣವೀರ್ ಸಿಂಗ್‌ಗೆ ಹೇಳಿದ್ದರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ರಣವೀರ್ ನಡೆಯನ್ನು ಖಂಡಿಸಿದ್ದರು.
ರಣವೀರ್ ಸಿಂಗ್ ಬೇರೊಬ್ಬ ಕಲಾವಿದನ ಪಾತ್ರವನ್ನು, ಸಿನಿಮಾವನ್ನು ಹಾಗೂ ದೈವದ ಬಗ್ಗೆ ಈ ರೀತಿ ಅವಮಾನಕಾರಿ ರೀತಿಯಲ್ಲಿ ವರ್ತಿಸಿದ್ದಾರೆ. ಇದು ಖಂಡನೀಯ. ರಣವೀರ್ ಕೂಡಲೇ ಈ ತಪ್ಪಿಗೆ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಕರ್ನಾಟಕದ ಸಿನಿ ಪ್ರೇಕ್ಷಕರು ಹಾಗೂ ತುಳುನಾಡಿನ ದೈವದ ಭಕ್ತರು ಕೂಡ ಇದನ್ನು ವಿರೋಧಿಸಿದ್ದರು. ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದರಿಂದ ರಣವೀರ್ ಸಿಂಗ್ ಕೊನೆಗೂ ಪೋಸ್ಟ್ ಮೂಲಕ ಕ್ಷಮೆ ಕೇಳಿದ್ದಾರೆ.
ಎಲ್ಲ ಸಂಪ್ರದಾಯದ ಮೇಲೆ ಗೌರವ ಇದೆ
"ನನ್ನ ಉದ್ದೇಶ ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಹೈಲೈಟ್ ಮಾಡುವುದಷ್ಟೇ. ಒಬ್ಬ ನಟನಾಗಿ, ಆ ವಿಶೇಷ ಸನ್ನಿವೇಶವನ್ನು ಅವರು ಪ್ರದರ್ಶಿಸಿದ ರೀತಿಯಲ್ಲಿ ಅಭಿನಯಿಸಲು ಎಷ್ಟು ಶ್ರಮ, ಕೌಶಲ್ಯ ಮತ್ತು ಭಾವನಾತ್ಮಕ ಆಳತೆ ಬೇಕಾಗುತ್ತದೆ ಎಂಬುದನ್ನು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಅದಕ್ಕಾಗಿ ಅವರಿಗೆ ನನ್ನ ಹೃತ್ಪೂರ್ವಕ ಪ್ರಶಂಸೆ ಇದೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಗಳಿಗೆ ನಾನು ಯಾವಾಗಲೂ ದಿಟ್ಟವಾದ ಗೌರವವನ್ನು ಹೊಂದಿದ್ದೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications