₹350 ಕೋಟಿ ಭವ್ಯ ಬಂಗಲೆ ಮಾಲೀಕರಾದ ರಣಬೀರ್-ಆಲಿಯಾ, ಒಳಗೆ ಏನೆಲ್ಲ ಇದೆ?
ಸಿನಿಮಾ ತಾರೆಯರು ಅಂದ್ರೆ ಐಷಾರಾಮಿ ಮನೆ, ದುಬಾರಿ ಜೀವನ ಸಹಜ. ಕೆಲವರು ಇಂತಹ ಶ್ರೀಮಂತಿಕೆಯಿಂದಲೇ ಎಲ್ಲರ ಹುಬ್ಬೇರಿಸುತ್ತಾರೆ. ಈಗ ಬಾಲಿವುಡ್‌ನ ತಾರಾಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಐಷಾರಾಮಿ ಬಂಗಲೆ ಕೂಡ ಸಖತ್ ಸುದ್ದಿಯಾಗುತ್ತಿದೆ. ಈ ದೀಪಾವಳಿ ಹಬ್ಬದಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಂದ್ರಾ ವೆಸ್ಟ್‌ನಲ್ಲಿರುವ ತಮ್ಮ ಹೊಸ ಬಂಗಲೆಗೆ ತೆರಳಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು ₹350 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಈ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗೃಹ ಪ್ರವೇಶ ಪೂಜೆಯಂತೆ ಕಾಣುವ ಫೋಟೋಗಳನ್ನು ಆಲಿಯಾ ಭಟ್ ಹಂಚಿಕೊಂಡಿದ್ದಾರೆ. ಆಲಿಯಾ ತಮ್ಮ ಹೊಸ ನಿವಾಸದ ಒಂದು ನೋಟವನ್ನು ನೀಡಿದ್ದು, ಒಂದು ಫೋಟೋದಲ್ಲಿ ರಣಬೀರ್ ತಮ್ಮ ತಂದೆ ರಿಷಿ ಕಪೂರ್ ಅವರ ಭಾವಚಿತ್ರದ ಮುಂದೆ ನಮಸ್ಕರಿಸುತ್ತಿದ್ದಾರೆ. ನೀತು ಕಪೂರ್ ಕೂಡ ಪತಿ ರಿಷಿ ಕಪೂರ್ ಅವರ ಫೋಟೋದೊಂದಿಗೆ ಆಲಿಯಾ ಅವರನ್ನು ಅಪ್ಪಿಕೊಂಡಿದ್ದಾರೆ.

ಈ ಫೋಟೋದಲ್ಲಿ ತಾರಾ ದಂಪತಿಗಳು ಮನೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲ ಆಚರಣೆಗಳನ್ನು ನಡೆಸುತ್ತಿದ್ದಾರೆ. ಪೂಜೆಯ ಮತ್ತೊಂದು ಮುದ್ದಾದ ಫೋಟೋದಲ್ಲಿ ಮಗಳು ರಾಹಾ ತನ್ನ ಪೋಷಕರೊಂದಿಗೆ ಪುಟ್ಟ ಕೈಯಲ್ಲಿ ಅಕ್ಕಿ ಕಣಗಳನ್ನು ಹಿಡಿದು ಕುಳಿತಿದ್ದಾಳೆ. ಮತ್ತೊಂದು ಫೋಟೋದಲ್ಲಿ, ಆಲಿಯಾ ಗೃಹಪ್ರವೇಶ ಪೂಜೆಯ ಸಮಯದಲ್ಲಿ ಪವಿತ್ರ ಹೋಮಕ್ಕೆ ಹಾಜರಾಗಿದ್ದು, ಆಲಿಯಾ ಪುಟ್ಟ ರಾಹಾಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಿದ್ದಾರೆ.
ಮನೆ ಹೇಗಿದೆ?
ಐತಿಹಾಸಿಕ ಕೃಷ್ಣ ರಾಜ್ ಬಂಗಲೆ ಸ್ಥಳದಲ್ಲಿ ನಿರ್ಮಿಸಲಾದ ತಮ್ಮ ಹೊಸ ನಿವಾಸಕ್ಕೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಮೊದಲ ಹೆಜ್ಜೆ ಇಡುತ್ತಿರುವ ಫೋಟೋಗಳು ಹರಿದಾಡುತ್ತಿವೆ. ರಣಬೀರ್ ಮತ್ತು ಆಲಿಯಾ ಅವರ ಈ ಬಂಗಲೆ ನಿರ್ಮಿಸಲು ವರ್ಷಗಟ್ಟಲೆ ಸಮಯ ಹಿಡಿಯಿತು. ಸುಮಾರು ಆರು ಅಂತಸ್ತಿನ ಈ ಬಂಗಲೆಯನ್ನು ರಾಜ್ ಕಪೂರ್ ಅವರ ಪ್ರಸಿದ್ಧ ಕೃಷ್ಣ ರಾಜ್ ಆಸ್ತಿಯ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಕೃಷ್ಣ ರಾಜ್ ಎಂಬ ಹೆಸರನ್ನು ಇಡಲಾಗಿದೆ. ಇದರ ವೆಚ್ಚ 350 ಕೋಟಿ ರೂಪಾಯಿ ಎಂದು ವರದಿಯಾಗಿದ್ದು, ಬಾಲಿವುಡ್‌ನ ಅತ್ಯಂತ ದುಬಾರಿ ಮನೆಯ ಮಾಲೀಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಲಿಯಾ ಹಂಚಿಕೊಂಡ ಫೋಟೋಗಳಲ್ಲಿ ಮನೆಯ ಒಳಾಂಗಣವನ್ನು ಆಧುನಿಕ ವಿನ್ಯಾಸದಿಂದ ಮಾಡಲಾಗಿದೆ. ಫೋಟೋವೊಂದರಲ್ಲಿ ಹೆಂಚಿನ ನೆಲ ಮತ್ತು ದೊಡ್ಡ ಗಾಜಿನ ಕಿಟಕಿಗಳ ಮೂಲಕ ನೈಸರ್ಗಿಕ ಬೆಳಕು ಹೇರಳವಾಗಿದೆ. ಪ್ರಶಾಂತ ಮತ್ತು ಪ್ರಕಾಶಮಾನವಾದ ವಾತಾವರಣವನ್ನು ಈ ಮನೆ ಹೊಂದಿದೆ. ವಿಸ್ತಾರವಾದ ಬಹುಮಹಡಿ ಬಂಗಲೆಯಲ್ಲಿ ಸಾಂಪ್ರದಾಯಿಕ ಭಾರತೀಯ ದೇಸಿ ಸ್ಪರ್ಶವನ್ನು ನೀಡಿದೆ. ಸದ್ಯ ಎಲ್ಲೆಡೆ ಈ ಮನೆಯದ್ದೇ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications