Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Ram Gopal Varma: ಭಾರತೀಯ ಚಿತ್ರರಂಗದ ವಿವಾದಾತ್ಮಕ ಹಾಗೂ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ) ಅವರು ತಮ್ಮ ವೃತ್ತಿಜೀವನದ ಯಶಸ್ಸಿನ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪರೋಕ್ಷ ಪಾತ್ರವಿದೆ ಎಂದು ಹೇಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಗ್ಯಾಂಗ್‌ಸ್ಟರ್ ಸಿನಿಮಾಗಳೇ ಬಂಡವಾಳ
ಸಂದರ್ಶನವೊಂದರಲ್ಲಿ ಮಾತನಾಡಿರುವ ವರ್ಮಾ, "ಒಂದು ವೇಳೆ ದಾವೂದ್ ಇಬ್ರಾಹಿಂ ಎಂಬ ವ್ಯಕ್ತಿ ಇಲ್ಲದೇ ಹೋಗಿದ್ದರೆ, ನಾನು 'ಸತ್ಯ' (Satya) ಅಥವಾ 'ಕಂಪನಿ' (Company) ಅಂತಹ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂದು ನಾನು ಏನಾದರೂ ಸಂಪಾದಿಸುತ್ತಿದ್ದರೆ ಮತ್ತು ನನ್ನ ಜೀವನ ನಡೆಯುತ್ತಿದ್ದರೆ ಅದಕ್ಕೆ ಅವನೇ ಕಾರಣ" ಎಂದು ಹೇಳಿದ್ದಾರೆ.

ದಾವೂದ್ ನನ್ನ 'ಸೋಲ್‌ಮೇಟ್'
ಆರ್‌ಜಿವಿ ಅವರು ದಾವೂದ್ ಇಬ್ರಾಹಿಂನನ್ನು ತಮ್ಮ 'ಸೋಲ್‌ಮೇಟ್' ಎಂದು ಕರೆದಿದ್ದಾರೆ. ಭೂಗತ ಲೋಕದ ಚಟುವಟಿಕೆಗಳು, ಅಲ್ಲಿನ ಕ್ರೌರ್ಯ ಮತ್ತು ವ್ಯವಸ್ಥೆಯನ್ನು ತಾವು ಹತ್ತಿರದಿಂದ ಗಮನಿಸಿ ಸಿನಿಮಾಗಳನ್ನಾಗಿ ಮಾಡಿದ್ದರಿಂದಲೇ ತಮಗೆ ದೊಡ್ಡ ಮಟ್ಟದ ಹೆಸರು ಸಿಕ್ಕಿತು ಎಂಬುದು ಅವರ ಅಭಿಪ್ರಾಯ.
ನನಗೆ ಬೆದರಿಕೆ ಕರೆಗಳಿಲ್ಲ
ಬಾಲಿವುಡ್‌ನ ಹಲವು ಗಣ್ಯರಿಗೆ ಭೂಗತ ಲೋಕದಿಂದ ಬೆದರಿಕೆ ಕರೆಗಳು ಬರುತ್ತಿದ್ದ ಕಾಲದಲ್ಲೂ ತಮಗೆ ಅಂತಹ ಯಾವುದೇ ತೊಂದರೆ ಆಗಿರಲಿಲ್ಲ ಎಂದು ವರ್ಮಾ ಹೇಳಿದ್ದಾರೆ. "ನನಗೆ ಎಂದಿಗೂ ಬೆದರಿಕೆ ಕರೆಗಳು ಬರಲಿಲ್ಲ. ಯಾಕೆಂದರೆ, ಭೂಗತ ಲೋಕದ ಜನರಿಗೆ ನನ್ನ 'ಸತ್ಯ' ಮತ್ತು 'ಕಂಪನಿ' ಸಿನಿಮಾಗಳು ತುಂಬಾ ಇಷ್ಟವಾಗಿದ್ದವು. ಅವರ ಜೀವನವನ್ನು ಅಷ್ಟು ನೈಜವಾಗಿ ತೆರೆಯ ಮೇಲೆ ತಂದಿದ್ದಕ್ಕೆ ಅವರು ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದರು" ಎಂದು ಅವರು ವಿವರಿಸಿದ್ದಾರೆ.
ಸಿನಿಮಾ ಲೋಕದಲ್ಲಿ ಆರ್‌ಜಿವಿ ಚಾಪು
1998ರಲ್ಲಿ ತೆರೆಕಂಡ 'ಸತ್ಯ' ಸಿನಿಮಾ ಬಾಲಿವುಡ್‌ನ ಗ್ಯಾಂಗ್‌ಸ್ಟರ್ ಸಿನಿಮಾಗಳ ಶೈಲಿಯನ್ನೇ ಬದಲಿಸಿತ್ತು. ಆನಂತರ ಬಂದ 'ಕಂಪನಿ' ಮತ್ತು 'ಡಿ' ಸಿನಿಮಾಗಳು ದಾವೂದ್ ಮತ್ತು ಆತನ ಡಿ-ಕಂಪನಿಯ ಸುತ್ತಲೇ ಸುಳಿಯುತ್ತಿದ್ದವು. ಈ ಸಿನಿಮಾಗಳ ಮೂಲಕ ಆರ್‌ಜಿವಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ 'ಕ್ರೈಂ ಜಾನರ್' ಸೃಷ್ಟಿಸುವಲ್ಲಿ ಯಶಸ್ವಿಯಾದರು.
ರಾಮ್ ಗೋಪಾಲ್ ವರ್ಮಾ ಅವರ ಈ ಹೇಳಿಕೆಯು ಸಿನಿಮಾ ಮತ್ತು ವಾಸ್ತವ ಜಗತ್ತಿನ ಕ್ರೈಂ ಘಟನೆಗಳ ನಡುವಿನ ಕೊಂಡಿಯನ್ನು ಪ್ರತಿಬಿಂಬಿಸುತ್ತದೆ. ಅಪರಾಧ ಜಗತ್ತಿನ ಕಥೆಗಳೇ ತಮಗೆ ಅನ್ನ ನೀಡುತ್ತಿವೆ ಎಂದು ಒಪ್ಪಿಕೊಳ್ಳುವ ಮೂಲಕ ವರ್ಮಾ ಮತ್ತೊಮ್ಮೆ ತಮ್ಮ ನೇರ ನಡೆಯನ್ನು ಸಾಬೀತುಪಡಿಸಿದ್ದಾರೆ.
ಬಾಲಿವುಡ್ ಮತ್ತು ಭೂಗತ ಲೋಕ
1990ರ ದಶಕವು ಬಾಲಿವುಡ್ ಪಾಲಿಗೆ ಕೇವಲ ಸುಂದರ ಸಿನಿಮಾಗಳ ಕಾಲವಾಗಿರಲಿಲ್ಲ, ಬದಲಿಗೆ ಭೂಗತ ಲೋಕದ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗಿದ್ದ ಕರಾಳ ಅವಧಿಯಾಗಿತ್ತು. ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ನಿರಂತರವಾಗಿ ದಾವೂದ್ ಇಬ್ರಾಹಿಂನಂತಹ ಗ್ಯಾಂಗ್‌ಸ್ಟರ್‌ಗಳ ಬೆದರಿಕೆ ಕರೆಗಳ ನಡುವೆಯೇ ಬದುಕಬೇಕಾದ ಅನಿವಾರ್ಯತೆ ಇತ್ತು.

ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ತಮ್ಮ ಚೊಚ್ಚಲ ಸಿನಿಮಾ 'ಕುಚ್ ಕುಚ್ ಹೋತಾ ಹೈ' ಬಿಡುಗಡೆಯಾದ ಸಂದರ್ಭದಲ್ಲಿ ಭೂಗತ ಲೋಕದಿಂದ ಪ್ರಾಣ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾಗಿ ಈ ಹಿಂದೆ ಬಹಿರಂಗಪಡಿಸಿದ್ದರು. ಅದೇ ರೀತಿ, ವರುಣ್ ಧವನ್ ಕೂಡ ತಮ್ಮ ತಂದೆ, ಹಿರಿಯ ನಿರ್ದೇಶಕ ಡೇವಿಡ್ ಧವನ್ ಅವರು ಅಂದು ಇಂತಹ ಅನೇಕ ಬೆದರಿಕೆ ಕರೆಗಳನ್ನು ಎದುರಿಸುತ್ತಿದ್ದರು ಎಂದು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ.
ಈ ಕರಾಳ ಅಧ್ಯಾಯದ ಅತ್ಯಂತ ಭಯಾನಕ ಘಟನೆಯೆಂದರೆ ಟಿ-ಸೀರೀಸ್ ಮಾಲೀಕ ಗುಲ್ಶನ್ ಕುಮಾರ್ ಅವರ ಹತ್ಯೆ. ಹಾಡಹಗಲೇ ಗ್ಯಾಂಗ್‌ಸ್ಟರ್‌ಗಳು ಅವರನ್ನು ಗುಂಡಿಕ್ಕಿ ಕೊಂದ ಘಟನೆಯು ಇಡೀ ಚಿತ್ರರಂಗವನ್ನೇ ನಡುಗಿಸಿತ್ತು. ಭೂಗತ ಲೋಕಕ್ಕೆ ಹಣ ನೀಡಲು ನಿರಾಕರಿಸುವವರಿಗೆ ಅಥವಾ ಅವರ ಮಾತು ಕೇಳದವರಿಗೆ ಸಾವು ಕಟ್ಟಿಟ್ಟ ಬುತ್ತಿ ಎನ್ನುವಂತಹ ವಾತಾವರಣ ಅಂದು ನಿರ್ಮಾಣವಾಗಿತ್ತು.
ಸಿನಿಮಾಗಳಿಗೆ ಬಂಡವಾಳ ಹೂಡುವುದರಿಂದ ಹಿಡಿದು, ನಟರ ಡೇಟ್ಸ್ ಫಿಕ್ಸ್ ಮಾಡುವವರೆಗೆ ಭೂಗತ ಲೋಕದ ಹಸ್ತಕ್ಷೇಪವಿತ್ತು. ಪೊಲೀಸರಿಂದ ರಕ್ಷಣೆ ಸಿಗದ ಕಾರಣ, ಅಂದಿನ ಸಿನಿಮಾ ದಿಗ್ಗಜರು ತಮ್ಮ ಪ್ರಾಣ ಉಳಿಸಿಕೊಳ್ಳಲು ಭೂಗತ ಲೋಕದ ಬೇಡಿಕೆಗಳಿಗೆ ತಲೆಬಾಗಬೇಕಾದ ಸ್ಥಿತಿ ಇತ್ತು.












Click it and Unblock the Notifications