Rakshit Shetty: ಅಭಿಮಾನಿಗಳಿಗೆ ಕೊನೆಗೂ ದರ್ಶನ ಕೊಟ್ಟ ನಟ ರಕ್ಷಿತ್ ಶೆಟ್ಟಿ, ನೇಮೋತ್ಸವದಲ್ಲಿ ಭಾಗಿ
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಿನಿಮಾ ಈವೆಂಟ್‌ಗಳಿಂದ ದೂರವಾಗಿದ್ದರು. ಇದರಿಂದಾಗಿ ಅಭಿಮಾನಿಗಳಲ್ಲಿ "ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ?" ಎಂಬ ಕುತೂಹಲವೂ ಹೆಚ್ಚಾಗಿತ್ತು. ಇದೀಗ ಹಲವು ದಿನಗಳ ಬಳಿಕ ಅವರು ಪ್ರತ್ಯಕ್ಷರಾಗಿದ್ದು, ಊರಿನ ಸಂಪ್ರದಾಯದ ನೇಮೋತ್ಸವದಲ್ಲಿ ಭಾಗವಹಿಸುವ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದ ನೇಮೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಅವರು ಭಾಗವಹಿಸಿದ್ದಾರೆ. ಈ ನೇಮೋತ್ಸವವನ್ನು ಅಲೆವೂರು ದೊಡ್ಡಮನೆಯವರು ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಅಲೆವೂರು ದೊಡ್ಡಮನೆ ಕುಟುಂಬದ ಕುಡಿಯಾಗಿರುವ ರಕ್ಷಿತ್ ಶೆಟ್ಟಿ ಅವರಿಗೆ ಈ ನೇಮೋತ್ಸವಕ್ಕೆ ವಿಶೇಷ ಮಹತ್ವವಿದ್ದು, ಕುಟುಂಬದ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅವರು ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.

ನೇಮೋತ್ಸವದಲ್ಲಿ ರಕ್ಷಿತ್
ಈ ಬಾರಿ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಅವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಯಾವುದೇ ಸಂಭ್ರಮ ಅಥವಾ ಪ್ರದರ್ಶನವಿಲ್ಲದೇ, ಸರಳವಾಗಿ ನೇಮೋತ್ಸವದಲ್ಲಿ ಕುಳಿತು ಪೂಜಾ ವಿಧಾನಗಳನ್ನು ಗಮನಿಸಿದ ರಕ್ಷಿತ್ ಶೆಟ್ಟಿ, ಬಹಳ ಹೊತ್ತು ಕಾರ್ಯಕ್ರಮದಲ್ಲಿ ಸಮಯ ಕಳೆಯುವ ಮೂಲಕ ತಮ್ಮ ಸಂಪ್ರದಾಯದ ಮೇಲೆ ಇರುವ ಗೌರವವನ್ನು ತೋರಿಸಿದರು. ನೇಮೋತ್ಸವ ಪೂರ್ಣಗೊಂಡ ಬಳಿಕ ಅವರು ಅಲ್ಲಿಂದ ವಾಪಸ್ ಆಗಿದ್ದಾರೆ.
ಸಾಮಾನ್ಯವಾಗಿ ಸಿನಿಮಾಗಳ ಪ್ರಚಾರ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರಕ್ಷಿತ್ ಶೆಟ್ಟಿ, ಈ ಬಾರಿ ಊರಿನ ಸಂಪ್ರದಾಯದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸಂತಸ ತಂದಿದೆ. ಸೋಷಿಯಲ್ ಮೀಡಿಯಾದಲ್ಲೂ "ನಮ್ಮ ಮಣ್ಣಿನ ಮಗ" ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹಲವು ದಿನಗಳ ಬಳಿಕ ನಟ ರಕ್ಷಿತ್ ಶೆಟ್ಟಿ ಅವರು ಊರಿನ ನೇಮೋತ್ಸವದಲ್ಲಿ ಪ್ರತ್ಯಕ್ಷರಾಗಿದ್ದು, ತಮ್ಮ ಬೇರುಗಳೊಂದಿಗೆ ಇರುವ ನಂಟನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ಈಗ ಅವರ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಕೆಲಸದ ವಿಷಯಕ್ಕೆ ಬಂದರೆ, ಸದ್ಯ ರಕ್ಷಿತ್ ಶೆಟ್ಟಿ ಅವರು ಮುಂಬರುವ ಸಿನಿಮಾಗಳ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಕಥೆಗಳು, ವಿಭಿನ್ನ ಪಾತ್ರಗಳು ಹಾಗೂ ಪ್ರಯೋಗಾತ್ಮಕ ಸಿನಿಮಾಗಳತ್ತ ಗಮನ ಹರಿಸಿರುವ ಅವರು, ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳ ಘೋಷಣೆ ಮಾಡುವ ಸಾಧ್ಯತೆ ಇದೆ.
#Rakshitshetty pic.twitter.com/qPnL4mqWTI
— its Karthik Shetty (@KarthikAjekar) January 11, 2026
ಸಪ್ತಸಾಗರದಾಚೆ ಬಳಿಕ ಸೈಲೆಂಟ್
ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಅವರು 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾ ಬಿಡುಗಡೆಯಾದ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಕಾರ್ಯಕ್ರಮಗಳು, ಪ್ರೀಮಿಯರ್‌ಗಳು ಅಥವಾ ಸೋಷಿಯಲ್ ಮೀಡಿಯಾದಲ್ಲೂ ಅವರು ಅಷ್ಟಾಗಿ ಸಕ್ರಿಯರಾಗಿಲ್ಲ. ಇದರಿಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಅವರನ್ನು ಪರದೆಯ ಮೇಲೆ ಮತ್ತೆ ನೋಡಬೇಕು ಎಂಬ ನಿರೀಕ್ಷೆಯಲ್ಲಿ ಇರುವ ಅಭಿಮಾನಿಗಳು, ಇದೀಗ "ಸಿನಿಮಾ ಅಪ್‌ಡೇಟ್ ಕೊಡಿ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ.
ಫ್ಯಾನ್ ಪೇಜ್‌ಗಳು ಹಾಗೂ ಕಾಮೆಂಟ್ ಸೆಕ್ಷನ್‌ಗಳಲ್ಲಿ "ಮುಂದಿನ ಸಿನಿಮಾ ಯಾವುದು?", "ಶೂಟಿಂಗ್ ಯಾವ ಹಂತದಲ್ಲಿದೆ?", "ಹೊಸ ಪ್ರಾಜೆಕ್ಟ್ ಘೋಷಣೆ ಯಾವಾಗ?" ಎಂಬ ಪ್ರಶ್ನೆಗಳು ಹೆಚ್ಚಾಗಿ ಕಾಣಿಸುತ್ತಿವೆ. 'ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ತೋರಿಸಿದ್ದ ಆಳವಾದ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಸಿನಿಮಾ ಬಳಿಕ ಅವರು ಮತ್ತೊಂದು ದೊಡ್ಡ ಪ್ರಾಜೆಕ್ಟ್‌ನೊಂದಿಗೆ ಬರ್ತಾರೆ ಎಂಬ ನಿರೀಕ್ಷೆ ಇದ್ದರೂ, ಅಧಿಕೃತ ಘೋಷಣೆಗಳಿಲ್ಲದ ಕಾರಣ ಅಭಿಮಾನಿಗಳ ತಾಳ್ಮೆಯ ಕಟ್ಟೆ ಹೊಡೆದಿದೆ.
ಇನ್ನೊಂದೆಡೆ, ರಕ್ಷಿತ್ ಶೆಟ್ಟಿ ಅವರು ಸದ್ಯ ಹೊಸ ಸಿನಿಮಾಗಳ ಕಥೆ ಮತ್ತು ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾವಾಗಲೂ ವಿಭಿನ್ನ ಹಾಗೂ ವಿಷಯಾಧಾರಿತ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವ ಅವರು, ಆತುರಕ್ಕೆ ಬಗ್ಗದೇ ಸೂಕ್ತ ಕಥೆಯ ಹುಡುಕಾಟದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕಾರಣದಿಂದಲೇ ಅವರು ಸಾರ್ವಜನಿಕವಾಗಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವೂ ಇದೆ. ಆದರೆ ಅಭಿಮಾನಿಗಳು ಮಾತ್ರ, "ಪ್ರಾಜೆಕ್ಟ್ ಏನೇ ಇರಲಿ, ಕನಿಷ್ಠ ಒಂದು ಅಪ್‌ಡೇಟ್ ಆದರೂ ಕೊಡಿ" ಎಂದು ಮನವಿ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಘೋಷಣೆ ಯಾವಾಗ ಬರುತ್ತದೆ ಎಂಬುದೇ ಈಗ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲದ ವಿಷಯವಾಗಿದೆ.












Click it and Unblock the Notifications