Rajinikanth Health: ಹೃದಯ ರಕ್ತನಾಳದಲ್ಲಿ ಊತ; ರಜನಿಕಾಂತ್ ಆರೋಗ್ಯ ಈಗ ಹೇಗಿದೆ?
ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯ ಸಮಸ್ಯೆಯಿಂದ ದಿಢೀರ್ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ನೆಚ್ಚಿನ ನಟ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು, ಇದೀಗ ಚೆನ್ನೈನ ಅಪೋಲೋ ಆಸ್ಪತ್ರೆಗೆ ರಜನಿಕಾಂತ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ವಿವರ ನೀಡಿದ್ದು, ಅಭಿಮಾನಿಗಳು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಚೆನ್ನೈನ ಅಪೋಲೋ ಹಾಸ್ಪಿಟಲ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸದ್ಯ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು ಎರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದೆ.

ರಜನಿಕಾಂತ್‌ಗೆ ಆರೋಗ್ಯದಲ್ಲಿ ಸಮಸ್ಯೆ
ರಜನಿಕಾಂತ್ ಅವರನ್ನು ಗ್ರೀಮ್ಸ್ ರಸ್ತೆಯ ಅಪೋಲೋ ಆಸ್ಪತ್ರೆಗೆ ಸೆಪ್ಟೆಂಬರ್ 30ರಂದು ದಾಖಲಿಸಲಾಗಿದೆ. ರಜನಿಕಾಂತ್ ಹೃದಯದ (ಮಹಾಪಧಮನಿಯ) ಮುಖ್ಯ ರಕ್ತನಾಳದಲ್ಲಿ ಊತ ಹೊಂದಿದ್ದರು. ಇದನ್ನು ಶಸ್ತ್ರಚಿಕಿತ್ಸೆ ರಹಿತ ಟ್ರಾನ್ಸ್‌ಕ್ಯಾಥೆದರ್ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ. ಹೃದ್ರೋಗ ತಜ್ಞ ಡಾ ಸಾಯಿ ಸತೀಶ್ ಅವರ ನೇತೃತ್ವದ ವೈದ್ಯರ ತಂಡ ಸ್ಟೆಂಟ್ ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಚಿಕಿತ್ಸೆಯು ಯಶಸ್ವಿಯಾಗಿ ನಡೆದಿದೆ ಎಂದು ಅವರ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಈ ಮೂಲಕ ತಿಳಿಸುತ್ತಿದ್ದೇವೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಸುಧಾರಿಸಿಕೊಳ್ಳುತ್ತಿದ್ದಾರೆ, ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದರು.
ಆರೋಗ್ಯ ಸಚಿವ ಹೇಳಿದ್ದೇನು?
ರಜನಿಕಾಂತ್ ಆರೋಗ್ಯದ ಬಗ್ಗೆ ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಮಾಹಿತಿ ನೀಡಿ, ರಜನಿಕಾಂತ್ ಅವರು ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಖಾಲಿ ಹೊಟ್ಟೆಯಲ್ಲಿ ಕೆಲವು ಪರೀಕ್ಷೆಗಳನ್ನು ಮಾಡಬೇಕಿದ್ದರಿಂದ, ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ರಜನಿಕಾಂತ್ ಆರೋಗ್ಯ ಉತ್ತಮವಾಗಿದೆ ಎಂದಯ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅವರು ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎಂದು ಹೇಳಿದರು. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ರಜನಿಕಾಂತ್ ಬೇಗನೆ ಸುಧಾರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ವೆಟ್ಟೈಯಾನ್ ಬಿಡುಗಡೆಗೆ ಸಿದ್ಧತೆ
ಜೈಲರ್ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ವೆಟ್ಟೈಯಾನ್ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಟಿಜೆ ಜ್ಞಾನವೇಲ್ ನಿರ್ದೇಶನ ಮಾಡಿರುವ ಈ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಅಮಿತಾಬ್ ಬಚ್ಚನ್, ಫಹಾದ ಫಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ವೆಟ್ಟೈಯಾನ್ ಸಿನಿಮಾ ಬಿಡುಗಡೆಗೆ ಸಜ್ಜಾದ ಬೆನ್ನಲ್ಲೇ ರಜನಿಕಾಂತ್ ಕೂಲಿ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾ ಸದ್ಯ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ನಾಗಾರ್ಜುನ, ಸೌಬಿನ್ ಶಾಹಿರ್, ಶ್ರುತಿ ಹಾಸನ್, ಸತ್ಯರಾಜ್ ಮತ್ತು ಉಪೇಂದ್ರ ತಾರಾಗಣದಲ್ಲಿದ್ದಾರೆ.












Click it and Unblock the Notifications