ಪುನೀತ್ ಸಾಯುವ ಹಿಂದಿನ ದಿನ ಅಸಲಿಗೆ ನಡೆದಿದ್ದೇನು? ಶಾಕಿಂಗ್ ವಿಚಾರ ತಿಳಿಸಿದ ರಾಘಣ್ಣ ಸೊಸೆ
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವು ಸಂಭ್ರಮದಿಂದ ನೆರವೇರುತ್ತಿದೆ. ಅಪ್ಪು ಅಭಿಮಾನಿಗಳು ಎಲ್ಲೆಡೆ ಈ ದಿನವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಸಿನಿಮಾ ನಟರು, ರಾಜಕೀಯ ನಾಯಕರು ಕೂಡ ಅಪ್ಪು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಪುನೀತ್ ಅವರಿಗೆ ಮನೆಯಲ್ಲೂ ಅಭಿಮಾನಿಗಳಿದ್ದಾರೆ. ಈ ಪೈಕಿ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಅವರ ಸೊಸೆ ಶ್ರೀದೇವಿ ಬೈರಪ್ಪ ಕೂಡ ಒಬ್ಬರು. ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಶ್ರೀದೇವಿ ಅವರು ಪುನೀತ್ ಅವರ ಸಾಯುವ ಹಿಂದಿನ ದಿನದ ಶಾಕಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸದ್ಯ ವಿದೇಶದಲ್ಲಿರುವ ಶ್ರೀದೇವಿ ಬೈರಪ್ಪ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ಅಪ್ಪು ಬರ್ತ್‌ಡೇಗೆ ವಿಶ್ ಮಾಡಿದ್ದಾರೆ. ವಿಶೇಷ ವಿಡಿಯೋ ಹಂಚಿಕೊಂಡಿರುವ ಅವರು ಕೆಲವು ಅಚ್ಚರಿ ವಿಚಾರಗಳನ್ನು ಕೂಡ ಹಂಚಿಕೊಂಡಿದ್ದಾರೆ. "ಅಪ್ಪು ಕೇವಲ ಹೆಸರಲ್ಲ, ನನ್ನಂತಹ ಅನೇಕ ಕನ್ನಡಿಗರಿಗೆ ಅದು ಒಂದು ಫೀಲಿಂಗ್. ಅಪ್ಪು ಮತ್ತು ಅವರ ಶಕ್ತಿಯಿಂದ ಹಲವು ವರ್ಷಗಳ ಕಾಲ ಅವರೊಂದಿಗೆ ಸುತ್ತುವರೆದಿರುವುದು ನನಗೆ ಸೌಭಾಗ್ಯವಾಗಿತ್ತು" ಎಂದು ಶ್ರೀದೇವಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

"ಅಪ್ಪು ಅವರು ಸಾವನ್ನಪ್ಪುವ ಹಿಂದಿನ ದಿನ ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದರು. ಮುಖ್ಯವಾಗಿ ಕೆಲವು ಅರ್ಥಹೀನ ಸಿನಿಮಾಗಳು, ಸಂಭಾಷಣೆಗಳು ಹಾಗೂ ಇವು ಸಮಾಜವನ್ನು ಹೇಗೆ ನಕಾರಾತ್ಮಕವಾಗಿ ರೂಪಿಸುತ್ತಿವೆ ಎಂಬುದರ ಕುರಿತು ಅವರು ಗಂಭೀರವಾಗಿ ಮಾತನಾಡಿದ್ದರು. ಸಿನಿಮಾ ನಿರ್ಮಾಪಕರು ತಮ್ಮ ಅಹಂಕಾರವನ್ನು ತೋರಿಸಲು ಹಾಗೂ ಹಣ ಗಳಿಸಲು ಇದನ್ನು ಹೇಗೆ ಮಾಡುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದ್ದರು ಎಂದು ಹೇಳಿದ್ದಾರೆ. ನಮ್ಮ ಸಮಾಜದ ಮೆಂಟಾಲಿಟಿಯನ್ನು ಕೂಡ ಅಪ್ಪು ಪ್ರಶ್ನೆ ಮಾಡಿದ್ದರು. ಅಂತಹ ನಾಯಕತ್ವವನ್ನು ನೇರವಾಗಿ ನೋಡುವ ಗೌರವ ನಾನು ಪಡೆದುಕೊಂಡೆ, ಇದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ" ಎಂದಿದ್ದಾರೆ.
"ಅಪ್ಪು ಅವರು ತಮ್ಮದೇ ಆದ ಪ್ರೊಡಕ್ಷನ್ ಸ್ಟುಡಿಯೋ ಸ್ಥಾಪಿಸಿದರು. ಈ ಮೂಲಕ ಹೊಸಬರಿಗೆ ಅವಕಾಶಗಳನ್ನೂ ನೀಡಿದರು. ಹಳೆಯ ಸಿನಿಮಾ ಸಂಸ್ಕೃತಿಗೂ ಅಬರು ಹೊಸ ರೂಪ ನೀಡಿದ್ದರು. ಹಾಗಾಗಿ ಅವರು ಭಾರತೀಯ ಚಲನಚಿತ್ರದ ಇತಿಹಾಸದಲ್ಲಿ ಅಜೇಯವಾಗಿ ಉಳಿದಿರುವ ದಾಖಲೆಗಳನ್ನು ಮುರಿದಿರುವ ಹಾಗೂ ಹೊಸತನ ನೀಡಿದ ಸೂಪರ್‌ಸ್ಟಾರ್ ಆಗಿದ್ದರು" ಎಂದು ನೆನೆದಿದ್ದಾರೆ.

"ಆದರೆ ಸ್ವತಃ ಬಂಡವಾಳ ಹಾಕುವ ವಿಷಯಕ್ಕೆ ಬಂದಾಗ, ಅವರು ಗಂಧದ ಗುಡಿಯನ್ನು ಆರಿಸಿಕೊಂಡರು. ಇದು ಅವರ ಭೂಮಿ ಮತ್ತು ಅವರ ಜನರ ಕಥೆಯನ್ನು ಹೇಳುವ ಸಾಕ್ಷ್ಯಚಿತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಬೆಂಬಲವಾಗಿ ಜಾಹೀರಾತನ್ನು ಉಚಿತವಾಗಿ ಚಿತ್ರೀಕರಿಸುವ ಉದ್ದೇಶದೊಂದಿಗೆ ಒಂದು ಎಡ್‌ಟೆಕ್ ಸಂಸ್ಥೆಯ ಮಿಲಿಯನ್ ಡಾಲರ್ ಆಫರ್ ಅನ್ನು ತಿರಸ್ಕರಿಸಿದ್ದರು. ಏಕೆಂದರೆ, ಅವರಿಗೆ ನಾವು ಏನು ಕೆಲಸ ಮಾಡುತ್ತಿದ್ದೇವೆ ಎಂಬ ಅರಿವು, ನಂಬಿಕೆ ಇತ್ತು. ಹಾಗಾಗಿ ಸರಿಯಾದ ಕೆಲಸವನ್ನೇ ಮಾಡಿದರು. ಅವರ ಸುತ್ತಲೂ ಮಹಿಳೆಯರು ಹೆಚ್ಚು ಸೇಫ್ ಆಗಿರುತ್ತಿದ್ದರು. ಅವರು ನನ್ನನ್ನೂ ಒಳಗೊಂಡಂತೆ ಅನೇಕರಿಗೆ ಜೀವನವನ್ನು ನಿಜವಾಗಿ ಪೂರ್ಣವಾಗಿ ಹೇಗೆ ಬದುಕಬೇಕೆಂಬ ಪಾಠ ಕಲಿಸಿದರು" ಎಂದು ಶ್ರೀದೇವಿ ಪೋಸ್ಟ್‌ನಲ್ಲಿ ಭಾವುಕರಾಗಿದ್ದಾರೆ.
ಅಪ್ಪು ನೆನಪಾರ್ಥ ಸ್ಟುಡಿಯೋ:
"ಪುನೀತ್ ಅವರ 50ನೇ ಹುಟ್ಟುಹಬ್ಬದ ದಿನದಂದು ಶಾಶ್ವತವಾಗಿ ನಿಮಗಾಗಿ ಮತ್ತು ನಿಮ್ಮಂತೆ ನನ್ನನ್ನು ನಂಬಿದ ಎಲ್ಲರಿಗೂ ಒಂದನ್ನು ಸಮರ್ಪಿಸುತ್ತಿದ್ದೇನೆ. ಇನ್ಫಿನಿಟಿ ವರ್ಲ್ಡ್ ಸ್ಟುಡಿಯೋಸ್ ಅನ್ನು ನಿಮ್ಮ ನೆನಪಾರ್ಥ ಪ್ರಸ್ತುತಪಡಿಸಲಾಗುತ್ತಿದೆ. ಇದು ಜಗತ್ತು ಇನ್ನೂ ನೋಡದ ಕಥೆಗಳನ್ನು ಹೇಳುವ ದೃಷ್ಟಿಕೋನ. ನಮ್ಮ ಮೊದಲ ಯೋಜನೆಯನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ" ಎಂದು ಶ್ರೀದೇವಿ ಹೇಳಿದ್ದಾರೆ.












Click it and Unblock the Notifications