ಅಪ್ಪ ತರೋ ಪ್ರಸಾದವೇ ಟಿಫನ್, ಹುಟ್ಟಿದಾಗ ಶನಿಕಾಟ ಅಂದಿದ್ರು: ಹೇಗಿತ್ತು ಉಪೇಂದ್ರ ಬಾಲ್ಯದ ಬಡತನ?
ಕನ್ನಡ ಚಿತ್ರರಂಗದ ಉಪೇಂದ್ರ ಅವರು ಇಡೀ ಭಾರತ ಚಿತ್ರರಂಗದಲ್ಲಿ ಡೈರೆಕ್ಟರ್‌ಗಳ ಡೈರೆಕ್ಟರ್ ಎಂದು ಕರೆಸಿಕೊಂಡಿದ್ದಾರೆ. ಅವರ ನಿರ್ದೇಶನದಿಂದಲೇ ಇಂದಿನ ಟಾಪ್ ನಿರ್ದೇಶಕರು ಪ್ರೇರಣೆ ಪಡೆದಿದ್ದಾರೆ. ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ್ದರು ಉಪ್ಪಿ. ಶ್, ಉಪೇಂದ್ರ, ಓಂ ಅಂತಹ ಎವರ್‌ಗ್ರೀನ್ ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಉಪ್ಪಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಉಪ್ಪಿ ಅವರ ನಿರ್ದೇಶನಕ್ಕೆ ದೊಡ್ಡ ದೊಡ್ಡ ನಿರ್ದೇಶಕರೇ ಸಲಾಂ ಹೊಡೆದಿದ್ದಾರೆ. ಇಂತಹ ಉಪೇಂದ್ರ ಅವರ ಬಾಲ್ಯದ ಕಥೆ ಕೇಳಿದ್ರೆ ಎಂತವರ ಕಣ್ಣಲ್ಲೂ ನೀರು ಬರೋದು ಗ್ಯಾರಂಟಿ.
ಉಪ್ಪಿ ಹುಟ್ಟು ಶ್ರೀಮಂತರೇನಲ್ಲ, ತಿನ್ನಲು ಒಂದು ಹೊತ್ತಿನ ಊಟವೂ ಇಲ್ಲದ ದಿನಗಳಲ್ಲಿ ಬೆಳೆದವರು. ಈ ಕಥೆಯನ್ನು ಇಡೀ ಕುಟುಂಬ 'ವೀಕೆಂಡ್ ವಿತ್ ರಮೇಶ್' ವೇದಿಕೆಯಲ್ಲಿ ಹೇಳಿಕೊಂಡಿತ್ತು. ಉಪ್ಪಿ ಅಭಿಮಾನಿಗಳು ಈ ಕಥೆ ಕೇಳಿ ಕಣ್ಣೀರಿಟ್ಟಿದ್ದೂ ಉಂಟು. ಉಪ್ಪಿ ಅವರ ಬಾಲ್ಯದ ಬಗ್ಗೆ ಮಾತನಾಡಿದ್ದ ಅವರ ಪೋಷಕರು, ಉಪ್ಪಿ ಹುಟ್ಟಿದಾಗ ನಮಗೆಲ್ಲ ತುಂಬಾ ಸಮಸ್ಯೆ ಇತ್ತು. ಹುಟ್ಟಿದ ನಂತರ ಏಳು ವರ್ಷ ಶನಿಕಾಟ ಅಂತೆ, ಅಂಗಡಿ ಎಲ್ಲ ಲಾಸ್ ಆಗಿತ್ತು ಎಂದು ಆ ದಿನಗಳನ್ನು ನೆನೆದಿದ್ದರು.

'ಬೇರೆ ಮಕ್ಕಳ ಬಟ್ಟೆ ಹಾಕಿ ಬೆಳೆಸಿದ್ವಿ'
'ಅವನಿಗೆ ಮೂರು ತಿಂಗಳಿದ್ದಾಗ ಚರ್ಮ ಎಲ್ಲ ಕಿತ್ತೋಗಿತ್ತು. ನಮ್ಮ ಕೈಯಲ್ಲಿ ಕಾಸಿಲ್ಲ, ಅವನ ಮೈಯಲ್ಲಿ ಮಾಂಸ ಇಲ್ಲ. ಡಾಕ್ಟರ್‌ಗೆ ತೋರಿಸಿದ್ರೆ ಎರಡು ಸಾವಿರ ರೂಪಾಯಿ ಬಿಲ್ ಹಾಕಿದ್ರು, ಜೇಬಲ್ಲಿ ಎರಡು ರೂಪಾಯಿ ಇರಲಿಲ್ಲ. ಹದಿನೈದು ರೂಪಾಯಿ ಬಾಡಿಗೆ ಕಟ್ಟೋಕೆ ಆಗಲಿಲ್ಲ. ಒಂದು ಚಿಕ್ಕ ಅಂಗಡಿಯಲ್ಲೇ ಜೀವನ ನಡೆಸಿದ್ವಿ. ಅವನಿಗೆ ಸರಿಯಾಗಿ ಬಟ್ಟೆ ಕೂಡ ತಂದು ಹಾಕಲು ಆಗಿರಲಿಲ್ಲ. ಬೇರೆಯವರ ಮಕ್ಕಳ ಬಟ್ಟೆ ಹಾಕಿ ಬೆಳೆದಿದ್ದು' ಎಂದು ಉಪೇಂದ್ರ ಪೋಷಕರು ಆ ದಿನಗಳನ್ನು ಮೆಲುಕು ಹಾಕಿದ್ದರು.
'ಉಪ್ಪಿ ಮಗುವಾಗಿದ್ದಾಗ ಹಸುವಿನ ಹಾಲು ಕುಡಿಸುತ್ತಿದ್ದೆ. ಹಾಲು ತರಲು ನಮ್ಮತ್ರ ಹಣ ಇರಲಿಲ್ಲ. ಅಲ್ಲಿ ಇಲ್ಲಿ ಕೇಳಿ ಒಂದು ಲೋಟ ಹಾಲು ತರ್ತಿದ್ದೆ. ಅದಕ್ಕೆ ಒಂದೈದು ಲೋಟ ನೀರು ಬೆರೆಸಿ ಕುಡಿಸುತ್ತಿದ್ದೆ. ಅದು ರುಚಿ ಇರುತ್ತಿರಲಿಲ್ಲ, ನೋಡಲು ಆಗ ಉಪ್ಪಿ ತೀರಾ ಬಡಕಲಾಗಿದ್ದ. ಹೊಟ್ಟೆಗೆ ಇಲ್ಲ, ಬಟ್ಟಗೆ ಇಲ್ಲ, ಇನ್ನೇನು ಹೋಗೇಬಿಡಬೇಕು ಎನ್ನುವ ಪರಿಸ್ಥಿತಿ ಇತ್ತು' ಎಂದು ಅವರ ತಾಯಿ ಕಣ್ಣೀರಿಟ್ಟಿದ್ದರು.
'ಅಪ್ಪ ತರೋ ಪ್ರಸಾದವೇ ಟಿಫನ್'
'ಅಪ್ಪ ಕನ್ನಿಕಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಪ್ರಸಾದ ತರುತ್ತಿದ್ರು. ಆ ಪ್ರಸಾದವೇ ನಮಗೆ ಟಿಫನ್, ಅದನ್ನ ತಿಂದು ಸ್ಕೂಲಿಗೆ ಹೋಗ್ತಿದ್ದೆ. ಇವತ್ತಿಗೂ ಆ ರುಚಿ ನನಗೆ ಸಿಗಲಿಲ್ಲ. ಈಗ ಫೈವ್‌ಸ್ಟಾರ್ ಹೋಟಲ್‌ನಲ್ಲಿ ಏನೇನೋ ಊಟ ಮಾಡ್ತೀನಿ. ಆ ನಿಜವಾದ ಕಷ್ಟದಿಂದ ಬಂದಾಗ ಸಿಗೋ ಖುಷಿ ಕೋಟಿಗಿಂತಲೂ ಹೆಚ್ಚು ಎಂದು ತಮ್ಮ ಬಡತನದ ಬಾಲ್ಯವನ್ನು ಉಪ್ಪಿ ನೆನೆದಿದ್ದರು. ಲೈಫಲ್ಲಿ ಚಾಲೆಂಜ್, ಹೋರಾಟ ಇರಬೇಕು. ಅದಿಲ್ಲದ ಜೀವನ ಜೀವನವೇ ಅಲ್ಲ' ಎಂಬ ಸ್ಪೂರ್ತಿಯ ಮಾತುಗಳನ್ನಾಡಿದ್ದರು ಉಪ್ಪಿ.












Click it and Unblock the Notifications