Darshan Thoogudeepa: ದರ್ಶನ್ ವಿರುದ್ಧ ಪಟ್ಟಣಗೆರೆ ಶೆಡ್ 'ಮಣ್ಣು' ಸಹ ಸಾಕ್ಷಿ ಹೇಳುತ್ತಿದೆ!
ಬೆಂಗಳೂರು, ಸೆಪ್ಟಂಬರ್ 07: ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ವಿರುದ್ಧ ಒಂದೊಂದೇ ಸಾಕ್ಷ್ಯಗಳು ಬಯಲಾಗುತ್ತಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ನಟ ದರ್ಶನ್ ವಿರುದ್ಧ ಯಾವೆಲ್ಲ ಸಾಕ್ಷ್ಯಗಳು ಸಿಕ್ಕಿವೆ ಎಂಬುದು ಬಹಿರಂಗವಾಗಿದೆ. ಈ ಪೈಕಿ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೇಡ್ ಮಣ್ಣು ಸಹ ಪ್ರಮುಖ ಸಾಕ್ಷಿಯಾಗಿದೆ.
ಹೌದು, ಶೆಡ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಆತನ ಸಾವಿನ ಬಳಿಕ ನಟ ದರ್ಶನ್ ಮತ್ತವರ ಸಹಚರರು ಸಾಕ್ಷಿ ನಾಶಕ್ಕೆ ಪ್ರಯತ್ನಪಟ್ಟಿದ್ದು ಜಗಜ್ಜಾಹೀರಾಗಿದೆ.

ಅಂದು ನಟ ದರ್ಶನ್ ಶೆಡ್‌ನಲ್ಲಿನ ಹತ್ಯೆ ಘಟನೆ ಬಳಿಕ ತನ್ನ ಬಟ್ಟೆ, ಶೂಗಳನ್ನು ವಿಜಯಲಕ್ಷ್ಮೀ ಮನೆಗೆ ಸಾಗಿಸಿದ್ದ. ದರ್ಶನ್ ಹಾಗೂ ಆತನ ಸಹಚರರ ಶೂಗಳನ್ನು ವಶಕ್ಕೆ ಪಡೆದಿದ್ದ ತನಿಖಾಧಿಖಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಕಳುಹಿಸಿದ್ದರು.
ದರ್ಶನ್ ವಿರುದ್ಧ ವೈಜ್ಞಾನಿಕ ಸಾಕ್ಷಿ
ಕೇವಲ ಶೂಗಳನ್ನು ಮಾತ್ರವಲ್ಲದೇ ಪಟ್ಟಣೆಗೆರೆಯ ಶೆಡ್‌ನಲ್ಲಿದ್ದ ಮಣ್ಣನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ದರ್ಶನ್ ಸೇರಿ ಮೂವರು ಧರಿಸಿದ್ದ ಶೂಗಳಲ್ಲಿರುವ ಮಣ್ಣು ಹಾಗೂ ಶೆಡ್ ನಲ್ಲಿನ ಮಣ್ಣು ಒಂದೇ ಎಂದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದೆ. ಈ ಮೂಲಕ ನಟ ದರ್ಶನ್ ವಿರುದ್ಧ ಮತ್ತೊಂದು ವೈಜ್ಞಾನಿಕ ಸಾಕ್ಷಿಯೊಂದು ಸಿಕ್ಕಂತಾಗಿದೆ.

ರೇಣುಕಾಸ್ವಾಮಿ ಹತ್ಯೆ ಬಳಿಕ ಮುಚ್ಚಿಟ್ಟಿದ್ದ ಬಟ್ಟೆಗಳು, ಶೂಗಳು, ಲಾಠಿ, ಚಪ್ಪಲಿಗಳ ಮೇಲೆ ಮೃತ ರೇಣುಕಾಸ್ವಾಮಿಯ ರಕ್ತದ ಕಲೆಗಳು ಕಂಡು ಬಂದಿದ್ದವು. ಅದೆಲ್ಲವನ್ನು ಪರೀಕ್ಷೆ ಮಾಡಿದಾಗ ಇದು ರೇಣುಕಾಸ್ವಾಮಿಯದ್ದೆ ರಕ್ತದಕಲೆಗಳು ಎಂಬ ಸಾಕ್ಷ್ಯ ದೊರೆತಿವೆ.
ಒಟ್ಟಾರೆ ಪ್ರಕರಣದಲ್ಲಿ 17 ಮಂದಿಯ ಬಂಧನವಾಗಿದೆ. ಈ ಪೈಕಿ ಬಹುತೇಕರು ಕೃತ್ಯದಲ್ಲಿ ಪಾತ್ರವಹಿಸಿದ್ದರು ಎಂಬುದು ತನಿಖೆಯಿಂದ ಸ್ಪಷ್ಟವಾಗುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ ಅನೇಕ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದೆಲ್ಲದರ ತನಿಖೆಗೆ ಮಾಡಿ ನ್ಯಾಯಾಲಯಕ್ಕೆ 3991 ಪುಟಗಳು ಏಳು ಸಂಪುಟಗಳ ಬೃಹತ್ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದಾರೆ.
ಸೆಪ್ಟಂಬರ್ 09ರಂದು ವಿಚಾರಣೆ
ಇನ್ನೂ ರೇಣುಕಾಸ್ವಾಮಿ ನಟಿ ಪವಿತ್ರಾ ಗೌಡಗೆ ಇನ್‌ಸ್ಟಾಗ್ರಾಮ್, ವಾಟ್ಸಾಪ್‌ನಲ್ಲಿ ಅಶ್ಲೀಲ್ ಸಂದೇಶ ಕಳುಹಿಸಿರುವುದು ಸಾಬೀತಾಗಿದೆ. ವಿಕೃತ ಕಾಮಿಯ ರೀತಿಯಲ್ಲಿ ಆಕೆಗೆ ಸಂದೇಶ ಕಳುಹಿಸಿದ್ದು ಸಾಬೀತಾಗಿದೆ. ಸದ್ಯ ಪ್ರಕರಣದ ವಿಚಾರಣೆಯು ಇದೇ ಸೆಪ್ಟಂಬರ್ 09ರಂದು ನಡೆಯಲಿದ್ದು, ಅಂದು ಚಾರ್ಜ್ ಶೀಟ್ ಕುರಿತು ಒಂದಷ್ಟು ವಾದ ವಿವಾದಗಳು ಜರುಗಲಿದೆ.












Click it and Unblock the Notifications