Get Updates
Get notified of breaking news, exclusive insights, and must-see stories!

Prakash Raj: ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೈನ್ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ: ನಟ ಪ್ರಕಾಶ್‌ ರಾಜ್‌ ಆಕ್ಷೇಪ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES) ಪ್ಯಾಲೆಸ್ಟೈನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವ ಬಗ್ಗೆ ಬಹುಭಾಷಾ ನಟ ಹಾಗೂ ಚಲನಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಅವರು ಅಸಮಾಧಾನ ಹೊರಹಾಕಿದರು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಮಾನವೀಯತೆ, ಸಾಂಸ್ಕೃತಿಕ ಸಂವಾದ ಮತ್ತು ಜಾಗತಿಕ ಬಾಂಧವ್ಯವನ್ನು ಬೆಳೆಸಬೇಕಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಮೇಲೆ ರಾಜಕೀಯದ ನೆರಳು ಬಿದ್ದಿದೆ ಎಂದು ಪ್ರಕಾಶ್ ರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ದೃಢ ನಿಲುವು ತೆಗೆದುಕೊಳ್ಳಿ

ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವೀಯ ಸಂಬಂಧಗಳನ್ನು ಕಟ್ಟಬೇಕಾದ ಚಿತ್ರೋತ್ಸವಗಳಲ್ಲಿ ಇಂತಹ ರಾಜಕೀಯ ಹಸ್ತಕ್ಷೇಪ ಆಗಬಾರದು. ಆದರೆ ಇಂದು ಪ್ಯಾಲೆಸ್ತೀನ್ ಸಿನಿಮಾಗಳನ್ನು ಪ್ರದರ್ಶಿಸಲು ನಮ್ಮ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಇದು ಅತೀವ ದುಃಖಕರ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟ ಹಾಗೂ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ರಾಯಭಾರಿಯ ಸ್ಥಾನದಲ್ಲಿ ನಿಂತು ಮನವಿ ಮಾಡಿಕೊಳ್ಳುತ್ತೇನೆ ಎಂದರು.

Palestinian Films

ಇತ್ತೀಚೆಗೆ ತಾನು ಭಾಗವಹಿಸಿದ್ದ ಅಂತರರಾಷ್ಟ್ರೀಯ ಸಾಹಿತ್ಯ ಉತ್ಸವದ ಅನುಭವವನ್ನು ಹಂಚಿಕೊಂಡ ಪ್ರಕಾಶ್ ರಾಜ್, ಅಲ್ಲಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರೊಂದಿಗೆ ನಡೆದ ಸಂಭಾಷಣೆಯನ್ನು ಉಲ್ಲೇಖಿಸಿದರು. "ಮೇಲಿನಿಂದ ಭೂಮಿಯನ್ನು ನೋಡಿದಾಗ ಅದು ಬಹಳ ಪುಟ್ಟದಾಗಿ ಕಾಣುತ್ತದೆ. ಮನುಷ್ಯರ ಜನಸಂಖ್ಯೆ ಅಲ್ಲಿ ಅಲ್ಪವಾಗಿ ತೋರುತ್ತದೆ. ಈ ಭೂಮಿ ಮನುಷ್ಯರಿಗಿಂತ ಇತರೆ ಜೀವಿಗಳಿಗೆ ಹೆಚ್ಚು ಸೇರಿದ್ದಂತಿದೆ. ಆದರೂ ಮನುಷ್ಯರು ಯಾಕೆ ಹೋರಾಟ, ಜಗಳಗಳಲ್ಲಿ ತೊಡಗುತ್ತಾರೆ?" ಎಂದು ಸುನಿತಾ ವಿಲಿಯಮ್ಸ್ ಹೇಳಿದ್ದನ್ನು ಅವರು ಸ್ಮರಿಸಿದರು.

ಕೇರಳ ಸರ್ಕಾರ ಅವಕಾಶ ಕೊಟ್ಟಿದೆ

ನಮ್ಮ ಮಣ್ಣಿನ ಕಥೆಗಳು ಬೇರೆ ಭಾಷೆಗಳಿಗೆ ಅನುವಾದಗೊಂಡು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಾಗ ನಾವು ಹೆಮ್ಮೆಪಡುತ್ತೇವೆ. ಆದರೆ "ನಮ್ಮ ನೆಲಕ್ಕೆ ಇನ್ನೊಬ್ಬರ ಕಥೆಗಳನ್ನು ತರಲು ಆಗಲ್ಲ ಎಂದು ಹೇಳುವುದು ಹೇಗೆ ಸರಿ?" ಎಂದು ಪ್ರಶ್ನಿಸಿದ್ದಾರೆ. ಪ್ಯಾಲೆಸ್ತೀನ್ ಕಥನಗಳನ್ನು ನಿರಾಕರಿಸುವ ಮನೋಭಾವವನ್ನು ವಿರೋಧಿಸಿರುವ ಅವರು, ಕೇರಳ ಸರ್ಕಾರ ಇತ್ತೀಚೆಗೆ ಅಂತಹ ಪ್ರದರ್ಶನಗಳಿಗೆ ಅವಕಾಶ ನೀಡಿರುವುದನ್ನು ಉಲ್ಲೇಖಿಸಿದರು. ಬೆಂಗಳೂರು ಚಲನಚಿತ್ರೋತ್ಸವದಲ್ಲಿ ರಾಜಕೀಯ ಆಟ ನಡೆಯಬಾರದು ಎಂಬುದನ್ನು ಕರ್ನಾಟಕ ಸರ್ಕಾರ ಮತ್ತು ಚಲನಚಿತ್ರ ಅಕಾಡೆಮಿ ಸ್ಪಷ್ಟವಾಗಿ ಪ್ರತಿರೋಧಿಸಬೇಕು ಎಂದು ಒತ್ತಾಯಿಸಿದರು.

"ನಮ್ಮ ನೋವಿಗೆ ಮಾತ್ರ ಕಣ್ಣೀರು ಸುರಿಸಿದರೆ ಸಾಲದು. ಇನ್ನೊಬ್ಬರ ನೋವಿಗೂ ಅಳುವ ಸಾಮರ್ಥ್ಯ ಬೆಳೆಸಿದಾಗಲೇ ನಾವು ಮನುಷ್ಯರಾಗುತ್ತೇವೆ" ಎಂದು ಭಾವುಕವಾಗಿ ಮಾತನಾಡಿದ ಪ್ರಕಾಶ್ ರಾಜ್, ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೆ, ಆ ವೇದಿಕೆಯಲ್ಲಿ ಅಲ್ಲಿನ ನೋವಿನ ಪದ್ಯವನ್ನು ಓದುತ್ತೇನೆ. ಅದೇ ನನ್ನ ಪ್ರತಿರೋಧ ಎಂದು ಘೋಷಿಸಿದರು. ಪ್ರಕಾಶ್ ರಾಜ್ ಅವರ ಈ ಹೇಳಿಕೆಗಳು ಈಗ ರಾಜ್ಯದ ರಾಜಕೀಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಸಿನಿಮಾ ಸಮಾಜದ ಅಂಕುಡೊಂಕು ತಿದ್ದುವ ಸಾಧನವಾಗಲಿ

ಇದೇ ಕಾರ್ಯಕ್ರಮದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿನಿಮಾ ಮನರಂಜನೆ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನವಾಗಲಿ ಎಂದು ಹೇಳಿದರು. ಸಮಾಜದಲ್ಲಿ ಅಸಮಾನತೆ ಇದೆ. ಅಸಮಾನತೆಗೆ ತುತ್ತಾಗಿರುವ ಮಹಿಳೆಯರು, ಹಿಂದುಳಿದವರು, ರೈತ, ದಲಿತ ಸಮುದಾಯಗಳಿವೆ. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಶ್ರಮಿಸಿದಾಗ ಸಿನಿಮಾ ಮಾಧ್ಯಮದ ಆಶಯ ಮತ್ತು ಉದ್ದೇಶ ಈಡೇರಿದಂತಾಗುತ್ತದೆ. ವಿಶ್ವದ ಇತರೆ ಸಮಾಜಗಳು ಹಾಗೂ ಇತರೆ ದೇಶಗಳ ಜನಜೀವನ ಮತ್ತು ಸಂಸ್ಕೃತಿ, ಸಮಾನತೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಮಾಜದಲ್ಲಿ ಬದಲಾವಣೆ ತರಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆಯಾಗಲಿ ಎಂದರು.

ನಾವು ಪ್ರಥಮವಾಗಿ, ಅಂತಿಮವಾಗಿ ಮನುಷ್ಯರು. ನಾವು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಮೂಲಕ ಸಮಸಮಾಜ ಕಟ್ಟುವ ಕೆಲಸ ಮಾಡಬೇಕು. ಇದಕ್ಕೆ ಚಲನಚಿತ್ರಗಳು ಒಂದು ಮಾಧ್ಯಮ‌ವಾಗಿ ನೆರವಾಗಬೇಕು. ಇತರೆ ದೇಶಗಳಲ್ಲಿ‌ನ‌ ಮಾನವೀಯ ಸಂಬಂಧಗಳು, ಇತರೆ ದೇಶಗಳಲ್ಲಿ ಆಚರಣೆಯಲ್ಲಿರುವ ಸಮಸಮಾಜದ ಆಚರಣೆಗಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಚಲಚಿತ್ರದಿಂದ ಸಾಧ್ಯವಿದೆ. ಸಮಾಜಮುಖಿ ಸಿನಿಮಾ ಮಾಡುವವರಿಗೆ, ಚಿತ್ರೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಸಿದ್ಧವಿದೆ. ಅಗತ್ಯವಿರುವ ಎಲ್ಲ ನೆರವುಗಳನ್ನು ನೀಡಲು ಸರ್ಕಾರ ಬದ್ಧ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+