ಪ್ರತಿಭೆ ಇರುವ ಎಲ್ಲರಿಗೂ ಅವಕಾಶ ಇಲ್ಲ: 'ಬಡವರ ಮಕ್ಳು ಬೆಳೀಬೇಕು' ಸಾಲಿನ ಅರ್ಥ ವಿವರಿಸಿದ ನಟ ಡಾಲಿ
ನಟ ಡಾಲಿ ಧನಂಜಯ್ ಅವರ 'ಬಡವರ ಮಕ್ಕಳು ಬೆಳೀಬೇಕು' ಎಂಬ ಡೈಲಾಗ್ ಒಂದು ಹಂತದಲ್ಲಿ ಭಾರೀ ಟ್ರೆಂಡ್ ಆಗಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು. ಬಳಿಕ ಈ ವಿಚಾರದಲ್ಲಿ ನಟ ರಾಜ್ ಬಿ.ಶೆಟ್ಟಿ ಅವರು, ಬಡವ-ಶ್ರೀಮಂತ ಎಂಬ ಬೇಧವಲ್ಲ, ಪ್ರತಿಭೆ ಇರುವವರಿಗೆ ಮಾತ್ರ ಅವಕಾಶ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಚರ್ಚೆ ಬೇರೆ ತಿರುವು ಪಡೆದುಕೊಂಡಿತ್ತು. ಇದಾದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಇಬ್ಬರೂ ನಟರ ಹೇಳಿಕೆಗಳು ಪರ ವಿರೋಧದ ಚರ್ಚೆಗಳಿಗೆ ಕಾರಣವಾಗಿತ್ತು. ಇದೀಗ ನಟ ಡಾಲಿ ಧನಂಜಯ್ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ಅದರ ಅರ್ಥವೇನು ಎಂದು ಸ್ಪಷ್ಟಪಡಿಸಿದ್ದಾರೆ.
ಡಾಲಿ ಧನಂಜಯ್ ತಮ್ಮ ಹೇಳಿಕೆಯ ನಿಜವಾದ ಅರ್ಥ ಮತ್ತು ಆಶಯವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ 'ಬಡವರ ಮಕ್ಕಳು ಬೆಳೀಬೇಕು' ಎಂಬುದು ಯಾವುದೇ ಟ್ರಂಪ್ ಕಾರ್ಡ್ ಅಲ್ಲ, ಅದು ಒಂದು ಆಶಯ. ಈ ವಿಚಾರವನ್ನು ನಾನು ಈಗಾಗಲೇ ಅನೇಕ ಬಾರಿ ವಿವರಿಸಿದ್ದೇನೆ. ಆದರೂ ಮತ್ತೆ ಮತ್ತೆ ಅದೇ ವಿಷಯವನ್ನು ಸ್ಪಷ್ಟಪಡಿಸಬೇಕಾಗುತ್ತಿರುವುದು ನಿಜಕ್ಕೂ ದುರಂತ. ಆದರೂ ಈ ವಿಷಯದ ಬಗ್ಗೆ ಸಮಾಜದಲ್ಲಿ ಒಳ್ಳೆಯ ಚರ್ಚೆ ನಡೆಯುತ್ತಿದೆ ಎಂಬುದೇ ಸಂತೋಷದ ಸಂಗತಿ' ಎಂದಿದ್ದಾರೆ ಡಾಲಿ.

'ಇರುವವರಿಗೆ ಅಭದ್ರತೆ ಸೃಷ್ಟಿ ಬೇಡ'
"ಇಲ್ಲಿ ಅರ್ಥವೇನೆಂದರೆ, ಇಲ್ಲದವರಿಗೆ ಕೆಲವು ವ್ಯವಸ್ಥೆಗಳನ್ನು ಒದಗಿಸಬೇಕು, ಆದರೆ ಅದರಿಂದ ಈಗಾಗಲೇ ಇರುವವರಿಗೆ ಅಭದ್ರತೆ ಸೃಷ್ಟಿಯಾಗಬಾರದು. ಇದರ ಅರ್ಥ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದಷ್ಟೇ. ಇರುವವರಿಗೆ ಅವಕಾಶ ಕೊಡಬೇಡಿ ಎನ್ನುವುದಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಕ್ಷೇತ್ರವಾಗಿರಲಿ, ಪ್ರತಿಭೆ ಅತ್ಯಂತ ಮುಖ್ಯ. ಪ್ರತಿಭೆ ಇಲ್ಲದವರಿಗೆ ಅವಕಾಶ ಸಿಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ. ಹಾಗೆಯೇ ಪ್ರತಿಭೆ ಇರುವ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂಬುದಕ್ಕೂ ಗ್ಯಾರಂಟಿ ಇಲ್ಲ'' ಎಂದಿದ್ದಾರೆ.
'ಜನಕ್ಕೆ ಸ್ಫೂರ್ತಿ ಅದರ ಉದ್ದೇಶ'
'ಅದರ ಅರ್ಥವೇ ಎಲ್ಲರಿಗೂ ಸಮಾನವಾದ ಅವಕಾಶ ಕೊಡಿ ಎನ್ನುವುದು. ಇರುವವರಿಗೆ ಅವಕಾಶ ಕೊಡಬೇಡಿ ಎಂದಲ್ಲ. ಏನೇ ಆದರೂ ಪ್ರತಿಭೆ ಅನ್ನೋದು ಇರಲೇಬೇಕು. ಅದೇ ರೀತಿ ಪ್ರತಿಭೆ ಇರುವ ಎಲ್ಲರಿಗೂ ಅವಕಾಶ ಇಲ್ಲ ಎಂದು ತಮ್ಮ ಹೇಳಿಕೆಯನ್ನು ಅರ್ಥೈಸಿದ್ದಾರೆ. ಬಡವರ ಮನೆ ಮಕ್ಕಳು ಬೆಳೀಬೇಕು ಅಂತ ನಾನು ನನಗೆ ಹೇಳಿಕೊಂಡಿದ್ದಲ್ಲ, ಅದರಿಂದ ಇನ್ನಷ್ಟು ಜನಕ್ಕೆ ಸ್ಪೂರ್ತಿ ಸಿಗಲಿ ಅಂತ ಹೇಳಿದ್ದು. ನಮ್ಮ ಪ್ರೊಡಕ್ಷನ್‌ನಿಂದಲೂ ಯಾವುದೇ ಬ್ಯಾಂಕ್‌ಗ್ರೌಂಡ್ ಇಲ್ಲದವರು ನಿರ್ದೇಶಕರಾಗಿ ಬೆಳೆಯುತ್ತಿದ್ದಾರೆ' ಎಂದಿದ್ದಾರೆ ಡಾಲಿ.
ಡಾಲಿ ಧನಂಜಯ್ ಅವರ ಹೇಳಿಕೆಯ ಅರ್ಥ ಬಡವ-ಶ್ರೀಮಂತ ಎಂಬ ವಿಭಜನೆ ಸೃಷ್ಟಿಸುವುದಲ್ಲ, ಬದಲಾಗಿ ಸಮಾಜದಲ್ಲಿ ಹಿಂದುಳಿದವರಿಗೆ ಸಹಾಯ ಮಾಡುವ ವ್ಯವಸ್ಥೆಗಳನ್ನು ಬಲಪಡಿಸಿ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂಬುದು. ಈ ವಿಚಾರದ ಮೇಲೆ ನಡೆಯುತ್ತಿರುವ ಚರ್ಚೆ ಸಮಾಜದ ದೃಷ್ಟಿಕೋನವನ್ನು ವಿಸ್ತರಿಸುವತ್ತ ಸಾಗುತ್ತಿರುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications