ಕೊರಿಯೋಗ್ರಫರ್ ಜಾನಿ ಮಾಸ್ಟರ್‌ಗೆ ಮತ್ತೊಂದು ದೊಡ್ಡ ಶಾಕ್!
ಖ್ಯಾತ ನೃತ್ಯ ಸಂಯೋಜಕ (ಕೊರಿಯೋಗ್ರಫರ್) ಜಾನಿ ಮಾಸ್ಟರ್ ಅವರ ಲೈಂಗಿಕ ಕಿರುಕುಳ ಕೇಸ್‌ನಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಜಾನಿ ಮಾಸ್ಟರ್‌ಗೆ ದೊಡ್ಡ ಆಘಾತವೊಂದು ಎದುರಾಗಿದೆ. ಈ ಕೇಸ್‌ನಿಂದಾಗಿ ಜಾನಿ ಮಾಸ್ಟರ್ ಕೆರಿಯರ್‌ಗೆ ಹಿನ್ನಡೆ ಶುರುವಾಗಿದೆ.
ತೆಲುಗು, ಕನ್ನಡ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ತಮ್ಮ ನೃತ್ಯದ ಮೂಲಕ ಮೋಡಿ ಮಾಡಿದ್ದ ಜಾನಿ ಮಾಸ್ಟರ್ ಅವರಿಗೆ ಅತ್ಯಾಚಾರ ಕೇಸ್ ಸುರುಳಿಯಂತೆ ಸುತ್ತಿಕೊಂಡಿದೆ. ಇದೇ ಆರೋಪದಿಂದಾಗಿ ಜಾನಿ ಮಾಸ್ಟರ್‌ಗೆ ಘೋಷಣೆಯಾಗಿದ್ದ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂಪಡೆದಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಜಾನಿ ಮಾಸ್ಟರ್ ಅವರಿಗೆ ನೃತ್ಯ ಸಂಯೋಜನೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಇದೇ ಸಮಯದಲ್ಲಿ ಜಾನಿ ಮಾಸ್ಟರ್ ಅರೆಸ್ಟ್ ಆಗಿದ್ದರು. ತಿರುಚಿತ್ರಂಬಲಂ ಸಿನಿಮಾದ ಮೇಘಮ್ ಕರುಕ್ಕಥಾ ಹಾಡಿಗೆ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಅನೌನ್ಸ್ ಆಗಿತ್ತು.
ಆದರೆ ಅತ್ಯಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೋಶವು ಜಾನಿ ಮಾಸ್ಟರ್ ಅವರ ಪ್ರಶಸ್ತಿಯನ್ನು ಅಮಾನತುಗೊಳಿಸಿದೆ ಎಂದು ತಿಳಸಿದೆ. ನವದೆಹಲಿಯಲ್ಲಿ ಅಕ್ಟೋಬರ್ 8ರಂದು ನಡೆಯುತ್ತಿರುವ ಈ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಜಾನಿ ಮಾಸ್ಟರ್‌ಗೆ ನೀಡಿದ್ದ ಆಹ್ವಾನವನ್ನೂ ವಾಪಸ್ ಪಡೆಯಲಾಗಿದೆಯಂತೆ.
ಜಾನಿ ಮಾಸ್ಟರ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಹೋದ್ಯೋಗಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ಜಾನಿ ಮಾಸ್ಟರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. 21 ವರ್ಷದ ಯುವತಿಯೊಬ್ಬರು ಜಾನಿ ಮಾಸ್ಟರ್ ವಿರುದ್ಧ ಈ ಆರೋಪ ಮಾಡಿದ್ದು, ಇವರೂ ಕೂಡ ನೃತ್ಯ ಸಂಯೋಜಕಿ ಎನ್ನಲಾಗಿದೆ.

ಯುವತಿ ದೂರು ಆಧರಿಸಿ ಹೈದರಾಬಾದ್‌ನ ರಾಯದುರ್ಗಂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ದೂರುದಾರ ಯುವತಿಯು ಜಾನಿ ಮಾಸ್ಟರ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು, ಔಟ್‌ಡೋರ್ ಶೂಟಿಂಗ್ ಸಮಯದಲ್ಲಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಶೂಟಿಂಗ್‌ಗಾಗಿ ವಿವಿಧ ನಗರಗಳಿಗೆ ಜಾನಿ ಅವರೊಂದಿಗೆ ನಾನು ತೆರಳಿದ್ದೆ. ಈ ವೇಳೆ ಅವರು ನನ್ನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದರು. ನನ್ನ ನರ್‌ಸಿಂಗಿ ನಿವಾಸದಲ್ಲೂ ಜಾನಿ ನನಗೆ ಹಲವು ಬಾರಿ ದೌರ್ಜನ್ಯ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದರು. ಯುವತಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಈ ಕೇಸ್ ಅನ್ನು ನರ್‌ಸಿಂಘಿ ಪೊಲೀಸರಿಗೆ ಹೆಚ್ಚಿನ ತನಿಖೆಗಾಗಿ ವರ್ಗಾಯಿಸಿದ್ದರು.
ಬಳಿಕ ಗೋವಾದಲ್ಲಿ ಜಾನಿ ಮಾಸ್ಟರ್ ಅವರನ್ನು ಬಂಧಿಸಿ, ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇತ್ತೀಚೆಗೆ ಜಾಮೀನು ಕೂಡ ಪಡೆದಿದ್ದರು. ಆದರೆ, ಮೊದಲ ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ನಾನಿನ್ನೂ ಬಾಲಕಿಯಾಗಿದ್ದೆ ಎಂದು ಸಂತ್ರಸ್ತೆ ಆರೋಪ ಮಾಡಿರುವುದರಿಂದ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಕೇಸ್ ಕೂಡ ದಾಖಲಾಗಿದೆ.












Click it and Unblock the Notifications