Dadasaheb Phalke Award: ನಟ ಮೋಹನ್ ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಭಾರತ ಸರ್ಕಾರವು ನಟ ಮೋಹನ್ ಲಾಲ್ ಅವರಿಗೆ 2023ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ಸಂತೋಷಪಡುತ್ತದೆ ಎಂದು ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಸೆಪ್ಟೆಂಬರ್ 23ರಂದು ನಡೆಯುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದೆ.
ಮೋಹನ್ ಲಾಲ್ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ಲೆಜೆಂಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ. ಮೋಹನ್‌ಲಾಲ್ ಅವರ ಅಪ್ರತಿಮ ಪ್ರತಿಭೆ, ಬಹುಮುಖತೆ ಮತ್ತು ನಿರಂತರ ಕಠಿಣ ಪರಿಶ್ರಮವು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಸುವರ್ಣ ಮಾನದಂಡವನ್ನು ಸ್ಥಾಪಿಸಿದೆ ಎಂದು ಶ್ಲಾಘಿಸಿದೆ.

"ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಲು ನಿಜಕ್ಕೂ ವಿನೀತನಾಗಿದ್ದೇನೆ. ಈ ಗೌರವ ನನಗೊಬ್ಬನಿಗಲ್ಲ, ಈ ಪ್ರಯಾಣದಲ್ಲಿ ನನ್ನೊಂದಿಗೆ ನಡೆದ ಪ್ರತಿಯೊಬ್ಬ ವ್ಯಕ್ತಿಗೂ ಸೇರಿದೆ. ನನ್ನ ಕುಟುಂಬ, ಪ್ರೇಕ್ಷಕರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ, ನಿಮ್ಮ ಪ್ರೀತಿ, ನಂಬಿಕೆ ಮತ್ತು ಪ್ರೋತ್ಸಾಹವು ನನ್ನ ದೊಡ್ಡ ಶಕ್ತಿಯಾಗಿದೆ. ನಾನು ಇಂದು ಯಾರೆಂದು ರೂಪಿಸಿದೆ. ನಾನು ಈ ಮನ್ನಣೆಯನ್ನು ಆಳವಾದ ಕೃತಜ್ಞತೆ ಮತ್ತು ಪೂರ್ಣ ಹೃದಯದಿಂದ ಹೊತ್ತಿದ್ದೇನೆ" ಎಂದು ಮೋಹನ್‌ಲಾಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೋಹನ್ ಲಾಲ್ ಅವರಿಗೆ ಪೋಸ್ಟ್‌ನಲ್ಲಿ ಅಭಿನಂದಿಸಿದ್ದಾರೆ. ಮೋಹನ್ ಲಾಲ್ ಜಿ ಶ್ರೇಷ್ಠತೆ ಮತ್ತು ಬಹುಮುಖತೆಯನ್ನು ಪ್ರತಿನಿಧಿಸುತ್ತಾರೆ. ದಶಕಗಳ ಕಾಲದ ಶ್ರೀಮಂತ ಕಾರ್ಯವೈಖರಿಯೊಂದಿಗೆ, ಅವರು ಮಲಯಾಳಂ ಸಿನಿಮಾ, ರಂಗಭೂಮಿಯ ಪ್ರಮುಖ ಜ್ಯೋತಿಯಾಗಿ ನಿಂತಿದ್ದಾರೆ ಹಾಗೂ ಕೇರಳದ ಸಂಸ್ಕೃತಿಯ ಬಗ್ಗೆ ತೀವ್ರ ಒಲವು ಹೊಂದಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ.
ಮೋಹನ್ ಲಾಲ್ ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮಾಧ್ಯಮಗಳಲ್ಲಿ ಅವರ ಸಿನಿಮೀಯ ಮತ್ತು ರಂಗಭೂಮಿ ಪ್ರತಿಭೆ ನಿಜವಾಗಿಯೂ ಸ್ಪೂರ್ತಿದಾಯಕ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ ಎಂದು ಅಭಿನಂದಿಸಿದ್ದಾರೆ.
ಅಣ್ಣಾವ್ರಿಗೂ ಸಿಕ್ಕಿತ್ತು ಪ್ರಶಸ್ತಿ
1995ರಲ್ಲಿ ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ಅವರಿಗೆ ಈ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. 45 ವರ್ಷಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ರಾಜ್‌ಕುಮಾರ್ ಅವರು 200 ಕ್ಕೂ ಹೆಚ್ಚು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದು ಹಾಗೂ 1992ರಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ನಟ ರಜನಿಕಾಂತ್ ಸೇರಿ ಪ್ರಮುಖರಿಗೆ ಈ ಪ್ರಶಸ್ತಿ ನೀಡಲಾಗಿದೆ.












Click it and Unblock the Notifications