'ಮಾರ್ಕೋ' ಖ್ಯಾತಿಯ ನಟ ಉನ್ನಿ ಮುಕುಂದನ್ ವಿರುದ್ಧ ಕೇಸ್ ದಾಖಲು, ಆರೋಪವೇನು?
ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಉನ್ನಿ ಮುಕುಂದನ್ (Unni Mukundan) ಅವರ ವಿರುದ್ಧ ಕೇಸ್ ದಾಖಲಾಗಿದೆ. ಇತ್ತೀಚೆಗಷ್ಟೇ ಅವರು ನಟಿಸಿದ್ದ ʼಮಾರ್ಕೋʼ ಸಿನಿಮಾ ಸಖತ್ ಹಿಟ್ ಕಂಡಿತ್ತು. ಇದೀಗ ನಟನ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ತಮ್ಮ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟನ ವಿರುದ್ಧ ಕೇಸ್ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ನಟನ ವಿಮರ್ಶೆಯನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ನಟ ತಮಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮುಕುಂದನ್ ಅವರ ಮ್ಯಾನೇಜರ್ ವಿಪಿನ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕಕ್ಕನಾಡ್‌ನ ಅಪಾರ್ಟ್‌ಮೆಂಟ್ ಸಂಕೀರ್ಣದ ನೆಲಮಾಳಿಗೆಯ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಮುಕುಂದನ್ ನಿಂದನೀಯ ಭಾಷೆ ಬಳಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವಿಪಿನ್ ಆರೋಪಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಮುಕುಂದನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 126(2) (ತಪ್ಪಾದ ಸಂಯಮ), 296(b) (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು), 351(2) (ಕ್ರಿಮಿನಲ್ ಬೆದರಿಕೆ), 324(4), ಮತ್ತು 324(5) (ಎರಡೂ ಕಿಡಿಗೇಡಿತನದೊಂದಿಗೆ ವ್ಯವಹರಿಸುವುದು) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಸ್ಪಷ್ಟನೆ ನೀಡಿದ ಉನ್ನಿ ಮುಕುಂದನ್
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಉನ್ನಿ ಮುಕುಂದನ್, ನನ್ನ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ವಿಪಿನ್ ಈ ರೀತಿ ವರ್ತಿಸಿದ್ದಾರೆ. ನಮ್ಮೊಂದಿಗೆ ತೀರಾ ಹತ್ತಿರದಲ್ಲಿದ್ದ ವ್ಯಕ್ತಿ ಇಂತಹ ಕೆಲಸ ಮಾಡಿದರೆ ತುಂಬಾ ನೋವಾಗುತ್ತೆ. ವಿಪಿನ್ ವರ್ತನೆಯ ಬಗ್ಗೆ ತಿಳಿದಿದ್ದ ಮೆಪ್ಪಡಿಯಾನ್ ನಿರ್ದೇಶಕ ವಿಷ್ಣು ಮೋಹನ್ ಅವರ ಒತ್ತಾಯದ ಮೇರೆಗೆ ನಾನು ಅವರ ಫ್ಲಾಟ್‌ಗೆ ಭೇಟಿ ನೀಡಿದ್ದೆ. ನನ್ನ ಸ್ನೇಹಿತನ ಸಮ್ಮುಖದಲ್ಲಿ ಈ ಘರ್ಷಣೆ ನಡೆದಿದೆ ಎಂದು ಉನ್ನಿ ಬಹಿರಂಗಪಡಿಸಿದ್ದಾರೆ.
ತಾನು ಯಾವುದೇ ರೀತಿಯ ಹಲ್ಲೆ, ದೈಹಿಕ ಹಿಂಸೆ ನೀಡಿಲ್ಲ. ನಾನು ಅವನ ಮೇಲೆ ಹಲ್ಲೆ ಮಾಡಲಿಲ್ಲ. ನಾನು ಅವನನ್ನು ಸ್ನೇಹಿತ ಎಂದು ಭಾವಿಸಿದಾಗ ಅವನು ನನ್ನ ವಿರುದ್ಧ ಏಕೆ ಅಪಪ್ರಚಾರ ನಡೆಸುತ್ತಿದ್ದಾನೆ ಎಂದು ನಾನು ಅವನನ್ನು ಕೇಳಲು ಬಯಸಿದ್ದೆ ಎಂದು ಉನ್ನಿ ಹೇಳಿದ್ದಾರೆ. ವಿಷ್ಣು ಮುಂದೆ ತನ್ನ ಕೃತ್ಯಗಳನ್ನು ಒಪ್ಪಿಕೊಂಡಿದ್ದ ವಿಪಿನ್, ಸನ್ ಗ್ಲಾಸ್ ಧರಿಸಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದನ್ನು ನೋಡಿ ತನಗೆ ಬೇಸರವಾಯಿತು. ಅಲ್ಲಿ ಸಿಸಿಟಿವಿಯೂ ಇದೆ. ಆ ಜಾಗದಲ್ಲಿ ನಾನು ವಿಪಿನ್ ಅವರನ್ನು ಕನ್ನಡಕ ಮುರಿದಿದ್ದು ನಿಜ, ಆದರೆ ಅವರಿಗೆ ಹೊಡೆಯಲಿಲ್ಲ ಎಂದು ಉನ್ನಿ ಒಪ್ಪಿಕೊಂಡಿದ್ದಾರೆ.
ʼವಿಪಿನ್ ಕಪ್ಪು ಸನ್ ಗ್ಲಾಸ್ ಧರಿಸಿ ಹೊರಗೆ ಬಂದ. ಅವನು ಹರಡುತ್ತಿರುವ ವದಂತಿಗಳ ಬಗ್ಗೆ ನಾನು ಅವನಿಗೆ ಕೇಳಿದೆ. ಅವನು ನನಗೆ ಸ್ಪಷ್ಟ ಉತ್ತರ ನೀಡಲಿಲ್ಲ. ಅವನು ತುಂಬಾ ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಹಿಂದೇಟು ಹಾಕಿದ. ಈ ವೇಳೆ ನಾನು ಅವನ ಸನ್ ಗ್ಲಾಸ್ ಕಸಿದುಕೊಂಡಾಗ ಅದು ಹೊಡೆದು ಹೋಯ್ತು, ಆದರೆ ನಾನು ಅವನಿಗೆ ದೈಹಿಕವಾಗಿ ಹಾನಿ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications