ಕನ್ನಡದಲ್ಲೂ ಒಟಿಟಿಗೆ ಬಂತು ಮಹೇಶ್ ಬಾಬು-ಶ್ರೀಲೀಲಾ ನಟನೆಯ 'ಗುಂಟೂರು ಖಾರಂ': ಎಲ್ಲಿ, ಯಾವಾಗ?
ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನ ಫ್ಯಾಮಿಲಿ ಡ್ರಾಮಾ 'ಗುಂಟೂರು ಖಾರಂ' ಒಟಿಟಿಗೆ ಕಾಲಿಡುತ್ತಿದೆ. ಫ್ಯಾಮಿಲಿ ಎಮೋಷನ್ಸ್ ಜೊತೆಗೆ ಫುಲ್ ಆಕ್ಷನ್ ತುಂಬಿದ್ದ ಈ ಸಿನಿಮಾ ಜನವರಿ 12, 2024 ರಂದು, ಸಂಕ್ರಾಂತಿ ಸ್ಪೆಷಲ್ ಆಗಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
'ಗುಂಟೂರು ಖಾರಂ' ಸಿನಿಮಾ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಫೆಬ್ರವರಿ 9, 2024 ರಿಂದ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸ್ಟ್ರೀಮ್ ಆಗಲಿದೆ. ಮಹೇಶ್ ಬಾಬು ಅವರಲ್ಲದೆ, ಗುಂಟೂರು ಖಾರಂನಲ್ಲಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ಪ್ರಕಾಶ್ ರಾಜ್, ರಮ್ಯಾ ಕೃಷ್ಣ, ರಾವ್ ರಮೇಶ್, ಜಗಪತಿ ಬಾಬು, ಅಜಯ್ ಘೋಷ್ ಸೇರಿ ಬೃಹತ್ ತಾರಾಗಣವಿದೆ.

'ಗುಂಟೂರು ಖಾರಂ'ಗೆ ತ್ರಿವಿಕ್ರಮ್ ಶ್ರೀನಿವಾಸ್ ಬರೆದು ನಿರ್ದೇಶಿಸಿದ್ದಾರೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಾಗ ವಂಶಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ತಮನ್ ಎಸ್ ಸಂಗೀತ ಸಂಯೋಜಿಸಿದ್ದಾರೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳಿಗೆ ತೆರೆದುಕೊಂಡಿದ್ದ ಗುಂಟೂರು ಖಾರಂ ಒಟಿಟಿಯಲ್ಲಿ ಕಮಾಲ್ ಮಾಡಲಿದೆಯೇ ನೋಡಬೇಕು.
ಇನ್ನು, ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾದ ಸಿನಿಮಾ ಆರಂಭದಲ್ಲಿ ಫ್ಯಾಮಿಲಿ ಅಡಿಯನ್ಸ್‌ಅನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇದೇ ಸಿನಿಮಾದ ಜೊತೆಗೆ ತೇಜಾ ಸಜ್ಜಾ ಅವರ 'ಹನುಮಾನ್' ಮತ್ತು ನಾಗಾರ್ಜುನ ಅಭಿನಯದ 'ನಾ ಸಾಮಿ ರಂಗ'ದಂತಹ ಇತರ ಸಿನಿಮಾಗಳು ಬಿಡುಗಡೆಯಾಗಿದ್ದವು. ವಿಶೇಷವಾಗಿ ವಿದೇಶಗಳಲ್ಲಿ ಸಿನಿಮಾ ಹಿಟ್ ಆಗಿದೆ. ತೀವ್ರ ಸ್ಪರ್ಧೆಯ ನಡುವೆಯೂ ಸಿನಿಮಾ ಸಕಸ್ ಆಗಿದೆ ಎಂದು ಚಿತ್ರತಂಡ ಪಾರ್ಟಿ ಮಾಡಿತ್ತು.

ಮಹೇಶ್ ಬಾಬು ಮುಂದಿನ ಸಿನಿಮಾಗಳು
ನಟ ಮಹೇಶ್ ಬಾಬು ಪ್ರಸ್ತುತ ಜರ್ಮನಿಯಲ್ಲಿದ್ದಾರೆ. ಅಲ್ಲಿ ಎಸ್ಎಸ್ ರಾಜಮೌಳಿ ಅವರ ಮುಂಬರುವ ಶಕ್ತಿ ತರಬೇತಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಮಹೇಶ್ ಅವರು ಜಿಮ್‌ನಿಂದ ಕೆಲವು ಚಿತ್ರಗಳನ್ನು ಮತ್ತು ಅವರ ತರಬೇತುದಾರರೊಂದಿಗೆ ಹೊರಾಂಗಣ ಟ್ರೈನಿಂಗ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಚಿತ್ರವು ಆಫ್ರಿಕನ್ ಕಾಡುಗಳ ಹಿನ್ನೆಲೆಯಲ್ಲಿ ಆಕ್ಷನ್-ಥ್ರಿಲ್ಲರ್ ಸಿನಿಮಾವಾಗಲಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ, ಚಿತ್ರದ ಬರಹಗಾರ ಮತ್ತು ಎಸ್‌ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಚಿತ್ರದ ಸ್ಕ್ರಿಪ್ಟ್ ಪೂರ್ಣಗೊಂಡಿದೆ ಮತ್ತು ಪೋಸ್ಟ್ ಪ್ರೊಡಕ್ಷನ್ ಮತ್ತು ತಾಂತ್ರಿಕ ಕೆಲಸಗಳು ನಡೆಯುತ್ತಿವೆ ಎಂದು ಖಚಿತಪಡಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಚಿತ್ರಕ್ಕೆ ಸಂಗೀತವನ್ನು ಸಂಯೋಜಿಸಲು ಪ್ರಾರಂಭಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಈ ಸಿನಿಮಾಗೆ ಮಹೇಶ್ ಬಾಬು ಮೂರು ವರ್ಷಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications