ಟಿಆರ್‌ಪಿಗೋಸ್ಕರ ಲವ್ ಮಾಡಲು ಆಗುವುದಿಲ್ಲ- ಗುಡುಗಿದ ಮಹಾನಟಿ ಗಗನ
ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಚಿತ್ರದುರ್ಗ ಮೂಲದ ನಟಿ ಗಗನ ಇದೀಗ ಸಂಪೂರ್ಣ ಕರ್ನಾಟಕಕ್ಕೆ ಚಿರಪರಿಚಿತರು. ತಮಗೆ ಸಿಕ್ಕ ಅವಕಾಶವನ್ನೇ ಸಂಪೂರ್ಣವಾಗಿ ಬಳಸಿಕೊಂಡ ಗಗನ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ರಿಯಾಲಿಟಿ ಶೋನಲ್ಲಿ ಕೂಡ ಮಿಂಚುತ್ತಿದ್ದಾರೆ.
ಇತ್ತೀಚಿಗೆ ಜೀ ಕನ್ನಡ ವಾಹಿನಿಯ ಕೆಲವು ರಿಯಾಲಿಟಿ ಶೋನಲ್ಲಿ ಗಗನ ಹಾಗೂ ಗಿಲ್ಲಿ ನಟ ಕಾಂಬಿನೇಶನ್ ಜನರಿಗೆ ಬಹಳ ಇಷ್ಟವಾಗುತ್ತಿದೆ. ಜೊತೆಗೆ ಇಬ್ಬರು ಟಿಆರ್‌ಪಿಗೋಸ್ಕರ ಪ್ರೀತಿ-ಪ್ರೇಮ ಎಂದು ಮಾತನಾಡುತ್ತಾರೆ ಎನ್ನುವ ನೆಗೆಟಿವ್ ಕಮೆಂಟ್‌ಗಳು ಕೂಡ ಈ ಜೋಡಿಯ ಬಗ್ಗೆ ಬರುತ್ತಿರುತ್ತವೆ. ತೆರೆ ಮೇಲೆ ಬಹಳ ಆತ್ಮೀಯರಂತೆ ಕಾಣುವ ಗಗನ-ಗಿಲ್ಲಿ ತೆರೆಯ ಹಿಂದೆ ಸ್ನೇಹಿತರಷ್ಟೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದರೂ ತಮ್ಮ ಹಾಗೂ ಗಿಲ್ಲಿ ಜೋಡಿಯನ್ನು ಮೆಚ್ಚಿಕೊಂಡು ನೀವು ನಿಜ ಜೀವನದಲ್ಲಿಯೂ ಜೋಡಿಯಾಗಬಹುದು ಎನ್ನುವವರಿಗೆ ನಟಿ ಗಗನ ಉತ್ತರ ಕೊಟ್ಟಿದ್ದಾರೆ.

ಈ ಬಗ್ಗೆ ಮಿಸ್ಟರ್. ಡಿ. ಪಿಕ್ಚರ್ಸ್ ಯೂಟ್ಯೂಬ್ ವಾಹಿನಿ ಜೊತೆ ಮಾತನಾಡಿದ ಗಗನ, 'ಡಾನ್ಸ್ ಕರ್ನಾಟಕ ಡಾನ್ಸ್ ಹಾಗೂ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ನನ್ನ ಜೋಡಿ ಆಗಿರಲಿಲ್ಲ. ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಉಜ್ವಲ್ ನನ್ನ ಜೋಡಿಯಾಗಿದ್ದರು, ಅವರಿಗೆ ಅನಿಶಾ ಅಂತಾ ಜೋಡಿ ಇದ್ದರು. ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ನನ್ನ ಜೋಡಿಯಾಗಿದ್ದರು. ಎರಡರಲ್ಲಿಯೂ ಬೇರೆ ಬೇರೆ ಜೋಡಿ ಇದ್ದರು'.
'ಅದೇನೋ ಒಂದು ಚಿಕ್ಕ ಸಂದರ್ಭದಲ್ಲಿ ನಮ್ಮ ಕಟೆಂಟ್ ಜನರಿಗೆ ಇಷ್ಟವಾಯ್ತು. ಆದರೆ ಅವರು ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಯಶಸ್ವಿನಿ ಎನ್ನುವವರ ಜೊತೆ ಜೋಡಿಯಾಗಿದ್ದರು. ಆದರೆ ಅವರ ಜೋಡಿಯನ್ನು ಜನ ಇಷ್ಟೊಂದು ವೈರಲ್ ಮಾಡಲಿಲ್ಲ. ಬಹುಶಃ ಅದರ ರೀತಿಯೇ ನಮ್ಮ ವಿಷಯವನ್ನು ತೆಗೆದುಕೊಂಡು ಹೋಗಬಹುದಿತ್ತು. ಆದರೆ ಜನರಿಗೆ ನಮ್ಮ ಕಾಂಬಿನೇಶನ್ ತುಂಬಾ ಇಷ್ಟ ಆಯ್ತೋ ಎನೋ ಗೊತ್ತಿಲ್ಲ. ಇದೆಲ್ಲವೂ ಬರೀ ಒಂದು ಕಾರ್ಯಕ್ರಮಕ್ಕಾಗಿ ಅಷ್ಟೇ' ಎಂದರು.

'ನಿಜ ಹೇಳಬೇಕು ಅಂದರೆ ಕ್ಯಾಮರಾ ಹಿಂದೆ ನಾನು ಗಿಲ್ಲಿ ಅವರ ಜೊತೆಯಾಗಲೀ, ಡ್ರೋನ್ ಪ್ರತಾಪ್ ಅವರ ಜೊತೆಗಾಗಲೀ ಅಥವಾ ಬೇರೆ ಇತರ ಸ್ಪರ್ಧಿಗಳ ಜೊತೆಗಾಗಲೀ ನಾನು ಜಾಸ್ತಿ ಮಾತನಾಡುವುದಿಲ್ಲ. ನಾನಾಯ್ತು, ನನ್ನ ಕೆಲಸ ಆಯ್ತು ಅಂತಾ ಇರುತ್ತೇನೆ. ಸ್ವಲ್ಪ ಜೋನ್ ಔಟ್ ಆಗಿರುತ್ತೇನೆ. ಒಬ್ಬಳೇ ಕುಳಿತುಕೊಳ್ಳುತ್ತೇನೆ. ಮಲಗಿರುತ್ತೇನೆ ಆ ರೀತಿ ನನ್ನ ಪಾಡಿಗೆ ನಾನು ಇರುತ್ತೇನೆ. ಆದರೆ ಈ ರೀತಿ ಎಲ್ಲಾ ವೈರಲ್ ಆದ ಬಗ್ಗೆ ನನ್ನ ಸ್ನೇಹಿತರೆಲ್ಲಾ ಕೇಳಿದಾಗ ಏನು ಹೇಳಬೇಕು ಎನ್ನುವುದೇ ಗೊತ್ತಾಗುವುದಿಲ್ಲ' ಎಂದು ಹೇಳಿದರು.
'ಜನರಿಗೋಸ್ಕರ ನಾನು ಇಷ್ಟ ಅಂತೆಲ್ಲಾ ಒಪ್ಪಿಕೊಂಡು ನಾಳೆ ದಿನ ಕೈ ಬಿಟ್ಟರೆ ತಪ್ಪಾಗುತ್ತದೆ. ನನ್ನ ಪ್ರಕಾರ ಪ್ರೀತಿ ಅಂದರೆ ಜೀವನದಲ್ಲಿ ಒಂದು ಸಲ ಮಾಡಬೇಕು. ಒಂದು ಕಟೆಂಟ್‌ಗೋಸ್ಕರ, ಜನರಿಗೆ ಖುಷಿ ಪಡಿಸಲೋ ಅಥವಾ ಬೇರೆ ಯಾರಿಗೋಸ್ಕರ ಮಾಡುವುದು ಪ್ರೀತಿ ಅಲ್ಲ ಅಂತಾ ನಾನು ಅಂದುಕೊಂಡಿದ್ದೇನೆ. ಹೀಗಾಗಿ ಮಾತಾಡೋರು ಏನು ಬೇಕಾದರೂ ಮಾತನಾಡಲಿ, ನನ್ನ ಬಗ್ಗೆ ನನಗೆ, ನಮ್ಮ ಮನೆಯವರಿಗೆ, ನಾನು ಪೂಜೆ ಮಾಡುವ ದೇವರಿಗೆ ಗೊತ್ತಿದ್ದರೆ ಸಾಕು' ಎಂದು ನಟಿ ಗಗನ ಹೇಳಿದ್ದಾರೆ.












Click it and Unblock the Notifications