Leelavathi: ಮಾತಾಡ್ತಾ ಮಾತಾಡ್ತ ಕೈ ತಣ್ಣಗಾಯ್ತು: ಆ ಕೊನೆಕ್ಷಣದಲ್ಲಿ ಏನಾಯ್ತು..?
ಬೆಂಗಳೂರು, ಡಿಸೆಂಬರ್ 08: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(86) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಇಂದು ಸಂಜೆ ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಸುಮಾರು ಐವತ್ತು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿದ್ದ ಲೀಲಾವತಿ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಲೀಲಾವತಿ ಅವರು ನೆಲಮಂಗಲದ ತಮ್ಮ ತೋಟದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲೇ ಅವರ ಆರೈಕೆ ನಡೆಯುತ್ತಿತ್ತು. ಲೀಲಾವತಿ ಅವರ ಕೊನೆಯ ಕ್ಷಣದ ಬಗ್ಗೆ ಮನೆ ಕೆಲಸದ ಸಿಬ್ಬಂದಿ ಮಾತನಾಡಿದ್ದಾರೆ.

"ಮಧ್ಯಾಹ್ನ ಔಷಧಿ ಕೊಟ್ಟಾಗ ಕುಡಿದಿದ್ದರು. ಗಂಜಿ ಕೊಟ್ಟೆವು, ಮಾತ್ರೆ ಕೊಟ್ಟೆವು ಎಲ್ಲವನ್ನೂ ಕುಡಿದಿದ್ದರು. ಚೆನ್ನಾಗಿ ಮಾತನಾಡುತ್ತಿದ್ದರು. ಮಾತಾಡ್ತಾ ಮಾತಾಡ್ತ ಕೈ ತಣ್ಣಗಾಯ್ತು. ಆ ಸಮಯದಲ್ಲೇ ಬಿಪಿ ಶುಗರ್ ಎಲ್ಲಾ ಚೆಕ್ ಮಾಡಲಾಯಿತು. ಸ್ವಲ್ಪ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ ಉಸಿರಾಟಕ್ಕೆ ಆಕ್ಸಿಜನ್ ಕೊಡಲಾಗುತ್ತಿತ್ತು. ಆವಾಗ ಆವಾಗ ಬಿಪಿ ಚೆಕ್ ಮಾಡಲಾಗುತ್ತಿತ್ತು. ಎಲ್ಲವನ್ನೂ ನರ್ಸ್ ಮಾಡುತ್ತಿದ್ದರು.
ನಾವು ಅಮ್ಮ ಅಮ್ಮ ಅಂತಾ ಕರೆಯುತ್ತಿದ್ದಾಗ ಮಾತನಾಡುತ್ತಲೇ ಇದ್ದರು. ಆಮೇಲೆ ಆಮೇಲೆ ಮಾತನಾಡಿಲ್ಲ. ಮೈ ತಣ್ಣಗಾಯ್ತು. ನಾವು ಕೈ ಕಾಲು ಎಲ್ಲ ಉಜ್ಜಿದೆವು. ಮೊದಲಿನಂದನೂ ನಾವೇ ಎಲ್ಲಾ ನೋಡಿಕೊಳ್ಳುತ್ತಿದ್ದೆವು, ಈಗ ಕೂಡ ಜೊತೆಯಲ್ಲಿದ್ದೇವು. ವಿನೋದ್ ರಾಜ್ ಅವರನ್ನು ಕರೆಯುತ್ತಿದ್ದರು. ನಿನ್ನೆ ರಾತ್ರಿ ನನ್ನ ಕೈಲಿರುವ ಉಂಗುರ ಅಂತಾನೂ ಕೇಳಿದರು. ಇವತ್ತು ಮಧ್ಯಾಹ್ನ ವರೆಗೂ ಚೆನ್ನಾಗಿದ್ದರೂ ಎಂದು" ಕಣ್ಣೀರಿಟ್ಟಿದ್ದಾರೆ.
ಹಿರಿಯ ನಟಿ ಅಗಲಿಕೆಗೆ ಮಾಜಿ ಸಿಎಂ ಬಿಎಸ್‌ವೈ ಸಂತಾಪ
ಹಿರಿಯ ಲೀಲಾವತಿ ಅವರ ಅಗಲಿಕೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. 'ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದಕ್ಷಿಣ ಭಾರತದ ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿ ವರ್ಗದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ' ಎಂದು ಸಂತಾಪ ಸೂಚಿಸಿದ್ದಾರೆ.












Click it and Unblock the Notifications