ಲಂಗೋಟಿ ಮ್ಯಾನ್ ಸಿನಿಮಾ ರಿಲೀಸ್ ಆಗ್ಬಾರ್ದು.!-ಪುರೋಹಿತರ ಪರಿಷತ್ ಕೊಟ್ಟ ಕಾರಣ ಏನು?
ಸಿನಿಮಾಗಳಲ್ಲಿ ಒಂದು ಸಮುದಾಯಕ್ಕೆ ಅವಮಾನ ಆಗುವಂತಹ ಸೀನ್‌ಗಳಿದ್ದರೆ ಅವುಗಳನ್ನು ಕಟ್ ಮಾಡಿಸಿಯೇಬಿಡುತ್ತಾರೆ. ಅಷ್ಟೇ ಅಲ್ಲದೆ, ರಿಲೀಸ್‌ಗೂ ಕೂಡ ಅಡ್ಡಿಪಡಿಸಿದ ಘಟನೆಗಳು ನಡೆದಿವೆ. ಇನ್ನೂ ಈಗಾಗಲೇ ಸಂಜೋತ ಭಂಡಾರಿ ನಿರ್ದೇಶನದ 'ಲಂಗೋಟಿ ಮ್ಯಾನ್' ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರ ಬಿಡುಗಡೆಗೆ ಅಖಿಲ ಕರ್ನಾಟಕ ಅರ್ಚಕರ ಹಾಗೂ ಪುರೋಹಿತರ ಪರಿಷತ್ ಖಂಡನೆ ವ್ಯಕ್ತಪಡಿಸಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
'ಲಂಗೋಟಿ ಮ್ಯಾನ್' ಸಿನಿಮಾಗೆ ಅಖಿಲ ಕರ್ನಾಟಕ ಅರ್ಚಕರ ಹಾಗೂ ಪುರೋಹಿತರ ಪರಿಷತ್ ತೀವ್ರವಾಗಿ ಖಂಡಿಸಿದೆ. ಸಮುದಾಯದ ಬಗ್ಗೆ ಅಪಹಾಸ್ಯ ಮಾಡುವುದು ತಪ್ಪು ಎಂದು ಚಿತ್ರತಂಡದ ವಿರುದ್ಧ ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಭಟ್ ಆಕ್ರೊಶ ಹೊರಹಾಕಿದ್ದಾರೆ.

ಸಿನಿಮಾದ ಟೈಟಲ್ ಕುರಿತು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿದ್ದು, "ಈ ರೀತಿ ಒಂದು ಸಮುದಾಯದ ಕುರಿತು ಅಪಹಾಸ್ಯ ಮಾಡುವುದು ತಪ್ಪು ಎಂದು ಹೇಳಿದ್ದಾರೆ. ಇನ್ನು ಈ ಚಿತ್ರವನ್ನು ಬ್ಯಾನ್ ಮಾಡದಿದ್ರೆ, ಎಲ್ಲ ಚಿತ್ರಮಂದಿರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ," ಅಂತಲೂ ಎಚ್ಚರಿಕೆ ನೀಡಿದ್ದಾರೆ.
"ಲಂಗೋಟಿ, ಜನಿವಾರ ಇವುಗಳು ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ. ಇದು ಅಪಹಾಸ್ಯ ಮಾಡುವ ವಿಚಾರ ಅಲ್ಲ. ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಲ್ಲರ ಶ್ರೇಯೋಭಿವೃದ್ದಿಗೆ ಪೂಜೆ ಮಾಡಿದ್ದು, ಇದೀಗ ನಮ್ಮನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸುವ ಮಾತೇ ಇಲ್ಲ," ಎಂದು ಆಕ್ರೊಶ ಹೊರಹಾಕಿದರು.
"ಇನ್ನು ಈ ಚಿತ್ರ ತಂಡದವರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಒಂದು ವೇಳೆ ಈ ಸಿನಿಮಾನವನ್ನು ಬಿಡುಗಡೆ ಮಾಡಿದ್ರೆ, ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು," ಎಂದು ಅರ್ಚಕರ ಪರಿಷತ್ ನಿರ್ಧರಿಸಿದೆ ಎಂದು ವಾರ್ನ್ ಮಾಡಿದರು.
ನಿರ್ದೇಶಕಿ ಹೇಳಿದ್ದೇನು?: ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ ಹಾಗೂ ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿರುವ ʼಲಂಗೋಟಿ ಮ್ಯಾನ್ʼ ಚಿತ್ರದ ಟೀಸರ್ ಆಗಸ್ಟ್ 19ರಂದು ಬಿಡುಗಡೆ ಆಯಿತು. ನಟ ಶರಣ್, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕಿ ಸಂಜೋತ ಭಂಡಾರಿ ನಾತನಾಡಿ, ನಾನು ಹತ್ತು ವರ್ಷಗಳ ಹಿಂದೆ "ಮಿರ್ಚಿ ಮಂಡಕ್ಕಿ ಖಡಕ್ ಚಾಯ್" ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರಚಾಗಿದೆ. ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಬಂತು. ಆ ಚಿತ್ರದ ಕಥೆ ಮಾಡುತ್ತಿದ್ದಾಗಲೂ ನನಗೆ ಇದೇ ಕಥೆ ತಲೆಗೆ ಬರುತ್ತಿತ್ತು. ಕೊನೆಗೆ 'ಲಂಗೋಟಿ ಮ್ಯಾನ್' ಸಿನಿಮಾ ಸ್ವರೂಪ ಪಡೆದುಕೊಂಡಿತು ಎಂದರು.
ಈ ಚಿತ್ರದಲ್ಲಿ ನಿಜವಾದ ಹೀರೋ ಅಂದ್ರೆ "ಲಂಗೋಟಿ" ನೇ. ಆಕಾಶ್ ರಾಂಬೊ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಸಂಹಿತ ವಿನ್ಯ, ಗಿಲ್ಲಿ ನಟ, ಸ್ನೇಹ ಋಷಿ, ಪವನ್, ಆಟೋ ನಾಗರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಥೆ ಹಾಗೂ ಸಂಭಾಷಣೆಯಲ್ಲೂ ಅನೇಕ ಮಿತ್ರರು ಸಹಾಯ ಮಾಡಿದ್ದಾರೆ. ಚಿತ್ರ ಗೆಲ್ಲುವ ವಿಶ್ವಾಸವಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ ಎಂದು ಹೇಳಿದರು.












Click it and Unblock the Notifications