ಲಕ್ಷ್ಮೀ ನಿವಾಸ ಧಾರಾವಾಹಿ ನೋಡಿ ತಲೆ..ತಲೆ ಚಚ್ಚಿಕೊಂಡ ಪ್ರೇಕ್ಷಕರು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಪ್ರೇಕ್ಷಕರು ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈವರೆಗೂ ಬಹಳ ಕುತೂಹಲದಿಂದ ನೋಡುತ್ತಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಮೇಲೆ ಪ್ರೇಕ್ಷಕರು ಅಸಮಾಧಾನಗೊಂಡಿದ್ದು, ನಿರ್ದೇಶಕರ ಹಳಿ ತಪ್ಪಿದ ಕ್ರಿಯೆಟಿವಿಟಿಗೆ ಬೇಸರಗೊಂಡಿದ್ದಾರೆ. ಅಷ್ಟಕ್ಕೂ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅಂತಹದ್ದೇನಾಯ್ತು? ಕಥೆ ಎಲ್ಲಿಗೆ ಬಂದು ನಿಂತಿದೆ? ಪ್ರೇಕ್ಷಕರು ಧಾರಾವಾಹಿ ತಂಡದ ಮೇಲೆ ಮುನಿಸಿಕೊಳ್ಳಲು ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.
ಆರಂಭದಲ್ಲಿಯೇ ಬಹಳ ನಿರೀಕ್ಷೆ ಹುಟ್ಟುಹಾಕಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಪ್ರಸಾರಗೊಳ್ಳುತ್ತಿದ್ದಂತೆ ಪ್ರೇಕ್ಷಕರ ಮನಸ್ಸು ಗೆದ್ದು ಬಿಟ್ಟಿತ್ತು. ಇದರ ಫಲವಾಗಿ ಟಿಆರ್‌ಪಿ ಪಟ್ಟಿಯಲ್ಲೂ ಎರಡನೇ ಸ್ಥಾನ ಪಡೆದುಕೊಂಡಿತ್ತು. ಒಂದು ಕೂಡು ಕುಟುಂಬದವರ ಕನಸಿನ ಬಗ್ಗೆ ಕಥಾಹಂದರ ಹೊಂದಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಒಂದೊಂದು ಪಾತ್ರವೂ ವೀಕ್ಷಕರಿಗೆ ಹತ್ತಿರವಾಗಿತ್ತು. ಕಥೆ ಇಂಟ್ರಸ್ಟಿಂಗ್ ಆಗಿದ್ದು, ಪ್ರೇಕ್ಷಕರು ಕುತೂಹಲದಿಂದ ಲಕ್ಷ್ಮೀ ನಿವಾಸ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಕಥೆ ತಿರುವು ಪಡೆದುಕೊಳ್ಳಲು ಹೋಗಿ ಹಳಿ ತಪ್ಪಿದೆ.

ಜನರ ಮೆಚ್ಚಿನ ಲಕ್ಷ್ಮೀ-ಶ್ರೀನಿವಾಸ ಜೋಡಿ
ಲಕ್ಷ್ಮೀ ನಿವಾಸ ಧಾರಾವಾಹಿಯ ಪ್ರಮುಖ ಪಾತ್ರಗಳಾದ ಲಕ್ಷ್ಮೀ-ಶ್ರೀನಿವಾಸ ಜೋಡಿ ಜನರಿಗೆ ಬಹಳ ಇಷ್ಟವಾಗಿದೆ. ಒಂದು ಮಧ್ಯಮ ವರ್ಗದ ತಂದೆ-ತಾಯಿ ಪಡುವ ಕಷ್ಟವನ್ನು ಬಹಳ ನೈಜವಾಗಿ ತೋರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಜಗಳದಲ್ಲಿ ತಂದೆ-ತಾಯಿ ಹೇಗೆ ನೋವು ಅನುಭವಿಸುತ್ತಾರೆ ಎನ್ನುವುದನ್ನು ಸಹ ಈ ಪಾತ್ರದ ಮೂಲಕ ತೋರಿಸಲಾಗುತ್ತಿದೆ.
ಲಕ್ಷ್ಮೀ ಹೆಸರಿನಲ್ಲಿ ಮನೆ ಕಟ್ಟಬೇಕು ಎನ್ನುವ ಶ್ರೀನಿವಾಸರ ಕನಸು, ಕನಸಾಗಿಯೇ ಉಳಿದಿದೆ. ಸದ್ಯ ಕೆಲಸ ಕಳೆದುಕೊಂಡಿರುವ ಶ್ರೀನಿವಾಸ ಆಟೋ ಓಡಿಸುವುದು, ವಾಚ್‌ಮೆನ್ ಕೆಲಸ ಸೇರಿದಂತೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿಕೊಂಡು ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದಾರೆ. ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಸಾಕು ಮಗ ವೆಂಕಿ ಎಲ್ಲರೂ ಮದುವೆಯಾಗಿ ಒಂದೊಂದು ದಡ ಸೇರಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳುವ ಬದಲು ಲಕ್ಷ್ಮೀ-ಶ್ರೀನಿವಾಸ ಜೋಡಿ ಒಂದೊಂದು ಮಕ್ಕಳ ಒಂದೊಂದು ಗೋಳು ಕೇಳುವಂತಾಗಿದೆ. ಈಗಂತೂ ಕೊನೆಯ ಹಾಗೂ ಮುದ್ದಿನ ಮಗಳು ಜಾಹ್ನವಿ ಸಮುದ್ರ ಪಾಲಾಗಿದ್ದಾಳೆ ಎನ್ನುವ ಆಘಾತದಲ್ಲಿದ್ದಾರೆ. ಎಷ್ಟೇ ಒಳ್ಳೆಯವರಾದರೂ ಕೂಡ ಲಕ್ಷ್ಮೀ ಹಾಗೂ ಶ್ರೀನಿವಾಸರಿಗೆ ನೆಮ್ಮದಿ ಇಲ್ಲದಂತಾಗಿದೆ.

ಜಾಹ್ನವಿ ಕಥೆ ಏನಾಯ್ತು?
ಸೈಕೋ ಜಯಂತನನ್ನು ಮದುವೆಯಾದ ಜಾಹ್ನವಿ ಬದುಕು ನರಕವಾಗಿದೆ. ಜಯಂತ್ ಪ್ರೀತಿ ಜಾಹ್ನವಿಯನ್ನು ಉಸಿರು ಗಟ್ಟಿಸಿದ್ದು ಕೊನೆಗೆ ಮಗುವನ್ನು ಕೂಡ ಕಳೆದುಕೊಳ್ಳುವಂತಾಗಿದೆ. ಇದೇ ನೋವಿನಲ್ಲಿದ್ದ ಜಾಹ್ನವಿಯನ್ನು ಮತ್ತೆ ಮೊದಲಿನಂತೆ ಮಾಡಲು ಶ್ರೀಲಂಕಾ ಪ್ರವಾಸಕ್ಕೆ ಕರೆದುಕೊಂಡ ಹೋದ ಜಯಂತ್‌ನ ಪರಿಸ್ಥಿತಿ ತನ್ನ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಂತಾಗಿದೆ. ಜಯಂತ್‌ಗೆ ಬುದ್ಧಿ ಕಲಿಸಲು ಜಾಹ್ನವಿ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ಸಮುದ್ರಕ್ಕೆ ಜಿಗಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸಮುದ್ರದ ಪಾಲಾಗಿದ್ದ ಜಾಹ್ನವಿಗೆ ಆಪ್ತ ಗೆಳೆಯ ವಿಶ್ವನ ತಂದೆ ನರಸಿಂಹಗೆ ಸಿಕ್ಕಿದ್ದಾಳೆ. ಸದ್ಯ ನರಸಿಂಹ ತನ್ನ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಇರುವಂತೆ ಜಾಹ್ನವಿಗೆ ಹೇಳಿದ್ದು, ಆಕೆ ಸಹ ಒಪ್ಪಿಕೊಂಡಿದ್ದಾಳೆ. ಸದ್ಯ ಕಥೆ ಇಲ್ಲಿಗೆ ಬಂದು ನಿಂತಿದೆ.
ಲಾಜಿಕ್ ಇಲ್ಲದೇ ಚಿತ್ರಕಥೆ ಹಳಿ ತಪ್ಪಿದ್ದು ಯಾವಾಗ?
ಲಕ್ಷ್ಮೀ ನಿವಾಸ ಧಾರಾವಾಹಿಯ ಕೆಲವು ಪ್ರೋಮೋಗಳು ವೈರಲ್ ಆಗುತ್ತಿದ್ದಂತೆ ಪ್ರೇಕ್ಷರಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತಿದೆ. ಶ್ರೀಲಂಕಾದಲ್ಲಿ ಸಮುದ್ರ ಪಾಲಾದ ಜಾಹ್ನವಿ ಚೆನ್ನೈನಲ್ಲಿ ನರಸಿಂಹನಿಗೆ ಸಿಗುತ್ತಾಳೆ. ಜಾಹ್ನವಿ ಸಮುದ್ರ ತಟದಲ್ಲಿ ಬಿದ್ದಿದ್ದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದು, ಈ ವೇಳೆ ಧಾರಾವಾಹಿ ತಂಡ ಮಾಡಿದ ಯಡವಟ್ಟನ್ನು ಪ್ರೇಕ್ಷಕರು ಕಂಡು ಹಿಡಿದ್ದಾರೆ. ಅಷ್ಟು ಸಮಯಗಳ ಕಾಲ ಸಮುದ್ರದಲ್ಲೇ ಇದ್ದ ಜಾಹ್ನವಿ ಸಮುದ್ರ ತಟಕ್ಕೆ ಬಂದು ಬಿದ್ದರೂ ಆಕೆಯ ಹಣೆ ಬೊಟ್ಟು ಹೋಗಿಲ್ಲ, ಲಿಪ್‌ಸ್ಟಿಕ್ ಮಾಸಿಲ್ಲ.

ಉಟ್ಟ ಸೀರೆ ನೀರಾದಂತೆ ಕಾಣುತ್ತಿಲ್ಲ. ಅದು ಶ್ರೀಲಂಕಾದಿಂದ ಭಾರತದವರೆಗೆ ಸಮುದ್ರದಲ್ಲೇ ತೇಲಿ ಬಂದರೂ ಕೂಡ ಪ್ರಜ್ಞೆ ಬರುತ್ತಿದ್ದಂತೆ ಜಾಹ್ನವಿ ಎದ್ದು ಓಡುತ್ತಾಳೆ. ಈಜು ಕಲಿತಿದ್ದರೂ ಕೂಡ ನಿರಂತರ ಒಂದು ಗಂಟೆ ನೀರಿನಲ್ಲಿ ಕಳೆದರೆ, ಕಾಲು ಸೆಳೆತ ಉಂಟಾಗಿ ಬಲ ಕಳೆದುಕೊಂಡಂತೆ ಆಗುತ್ತದೆ. ಆದರೆ ಈ ಜಾಹ್ನವಿ ದೇಶ ಬಿಟ್ಟು ದೇಶಕ್ಕೆ ಸಮುದ್ರದಲ್ಲೇ ತೇಲಿ ಬಂದರೂ ಪಿಟಿ ಉಷಾ ರೇಂಜಿನಲ್ಲಿ ಓಡುತ್ತಾಳಲ್ಲಾ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಕಾಲೇಜಿನಲ್ಲಿ ವಿಶ್ವನ ಆತ್ಮೀಯ ಸ್ನೇಹಿತೆಯಾಗಿದ್ದ ಜಾಹ್ನವಿ ಆತನ ತಂದೆಯನ್ನೇ ಗುರುತು ಹಿಡಿಯದೇ ಅವನ ಮನೆಯನ್ನೇ ಸೇರಿದ್ದಾಳೆ ಅಂದರೆ ಹೇಗೆ. ಇತ್ತೀಚಿಗೆ ಕೆಲ ನಿರ್ದೇಶಕರು ಯಾವುದೇ ಲಾಜಿಕ್ ಇಲ್ಲದೇ ನೈಜತೆ ಇಲ್ಲದೇ ಧಾರಾವಾಹಿ ಮಾಡಿಕೊಂಡು ಕಥೆ ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದೇ ಗೌಡರ ಬದಲು ಜೈಲು ಸೇರಿದ ವೆಂಕಿ: ಮನೆಯವರಿಗೆ ಗೊತ್ತಾಗುವುದು ಯಾವಾಗ?
ಇನ್ನು ಲಕ್ಷ್ಮೀ-ಶ್ರೀನಿವಾಸರ ಎರಡನೇ ಮಗಳು ಭಾವನ ಕಥೆ ಇನ್ನೂ ವಿಭಿನ್ನ. ಭಾವನ ಹಾಗೂ ಆಕೆಯ ಪತಿ ಸಿದ್ದೇ ಗೌಡರು ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಿದೆ. ಒಂದೆಡೆ ನತದೃಷ್ಟೆ ಎನಿಸಿಕೊಂಡಿದ್ದ ಭಾವನಳಿಗೆ ಜೀವನ ಕೊಟ್ಟು ಸಿದ್ದೇ ಗೌಡರು ಗ್ರೇಟ್ ಎನಿಸಿಕೊಂಡಿದ್ದರೆ, ಇನ್ನೊಂದೆಡೆ ಭಾವನ ಹುಡುಕುತ್ತಿರುವ ಖುಷಿ ತಂದೆಯ ಅಪಘಾತದ ಆರೋಪಿ ಸಿದ್ದೇ ಗೌಡರು ಎನ್ನುವ ಸತ್ಯ ಇನ್ನೂ ಆಕೆಯನ್ನು ತಲುಪಿಲ್ಲ. ಸದ್ಯ ಈ ಅಪಘಾತದ ಪ್ರಕರಣದಲ್ಲಿ ಭಾವನ ಅಣ್ಣ ಲಕ್ಷ್ಮೀ-ಶ್ರೀನಿವಾಸರ ಸಾಕು ಮಗ ವೆಂಕಿ ಜೈಲು ಸೇರಿದ್ದಾನೆ. ಈ ವಿಚಾರ ಇನ್ನೂ ಮನೆಯವರಿಗೆ ತಿಳಿದಿಲ್ಲ. ಒಂದು ವೇಳೆ ತಿಳಿದು ಈ ಕೇಸ್ ವಿಚಾರಣೆಗೆ ಬಂದರೆ ಸಿದ್ದೇ ಗೌಡರಿಗೆ ಸಂಕಷ್ಟವಾಗಲಿದ್ದು, ಈಗಷ್ಟೇ ಅರಳಿರುವ ಭಾವನ, ಸಿದ್ದೇ ಗೌಡರ ಪ್ರೀತಿ ಮೊಗ್ಗಿನಲ್ಲೇ ಚಿವುಟಿ ಹೋಗಲಿದೆ. ಒಟ್ಟಾರೆಯಾಗಿ ಲಕ್ಷ್ಮೀ ನಿವಾಸ ಧಾರಾವಾಹಿ ಎಲ್ಲಾ ಕಥೆಗಳ ಗೊಂದಲದ ಗೂಡಾಗಿದೆ.












Click it and Unblock the Notifications