Shivaraj Kumar: ಭಾವಜೀವಿ ನಟ ಶಿವಣ್ಣ ಬೇಗ ಗುಣಮುಖರಾಗಲಿ: ಸಚಿವೆ
ಬೆಂಗಳೂರು, ಡಿಸೆಂಬರ್ 25: ಸ್ಯಾಂಡಲ್‌ವುಡ್ ದೊರೆ, ವರನಟ ಡಾ.ರಾಜ್ ಕುಮಾರ್ ಕುಟುಂಬದ ಹಿರಿಯ ಕುಡಿ ನಟ ಡಾ.ಶಿವರಾಜ್ ಕುಮಾರ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇಂದು ಅವರಿಗೆ ಶಸ್ತಿ ಚಿಕಿತ್ಸೆ ಇದ್ದು, ಅಮೆರಿಕಾಗೆ ತೆರಳಿದ್ದಾರೆ. ಅವರು ಬೇಗ ಗುಣಮುಖರಾಗಿ ಬರಬೇಕು. ಬಂದು ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂದು ಅವರ ಅಪಾರ ಅಭಿಮಾನಿ ಬಳಗ ಪ್ರಾರ್ಥಿಸುತ್ತಿದ್ದಾರೆ. ಈ ಸಾಲಿಗೆ ಶಿವಣ್ಣ ಅವರ ಆಪ್ತ ವಲಯ, ನಟ, ನಟಿಯರು ಮಾತ್ರವಲ್ಲದೇ ರಾಜಕಾರಣಿಗಳು ಸೇರಿದ್ದಾರೆ. ಇದೀಗ ಮಹಿಳಾ ಸಚಿವರೊಬ್ಬರು ಶುಭ ಹಾರೈಸಿದ್ದಾರೆ, ಪ್ರಾರ್ಥಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಟ್ವೀಟ್ ಮೂಲಕ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರಿಗೆ ಶುಭ ಕೋರಿದ್ದಾರೆ. ''ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ರವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ''.

''ಶಿವಣ್ಣನವರನ್ನು ತೀರಾ ಹತ್ತಿರದಿಂದ ನೋಡಿದ್ದೇನೆ, ಅವರೊಬ್ಬ ಭಾವನಾತ್ಮಕ ಜೀವಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಜೀವ. ಕೋಟ್ಯಂತರ ಕನ್ನಡಿಗರ ಆಶೀರ್ವಾದ, ಪ್ರಾರ್ಥನೆ ಅವರ ಜೊತೆಗಿದ್ದು, ಆರೋಗ್ಯವಂತರಾಗಿ ಸ್ವದೇಶಕ್ಕೆ ಮರಳಲಿ ಎಂದು ಮತ್ತೊಮ್ಮೆ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಬರೆದುಕೊಂಡು, ಅವರೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ಆಶಿಸಿದ್ದಾರೆ.
'ಭೈರತಿ ರಣಗಲ್' ಪ್ರಚಾರ ವೇಳೆ ಅಧಿಕೃತ ಮಾಹಿತಿ
ಇತ್ತೀಚೆಗೆ ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ತೆರೆ ಕಂಡು ಭರ್ಜರಿ ಸಕ್ಸಸ್ ಕಂಡಿತ್ತು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿದ್ದು, ಸುಮಾರು 20 ಕೋಟಿ ರೂಪಾಯಿ ಬಿಸಿನೆಸ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ಸಿನಿಮಾ ಪ್ರಚಾರ ಕಾರ್ಯದಲ್ಲೂ ನಟ ಶಿವಣ್ಣ ತಮಗೆ ಅನಾರೋಗ್ಯ ಇರುವುದನ್ನು ಖಚಿತಪಡಿಸಿದ್ದರು. ಈ ಕುರಿತು ಬಹಿರಂಗವಾಗಿ ಮಾತನಾಡುತ್ತಿದ್ದಂತೆ ಅಭಿಮಾನಿಗಳಿಗೆ, ಚಿತ್ರರಂಗದ ಗಣ್ಯರಿಗೆ ಆಘಾತ ಉಂಟಾಗಿತ್ತು. ಬಳಿಕ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ರಿಯಾಲಿಟಿ ಶೋ ವೇದಿಕೆಯಲ್ಲಿ ಮುಕ್ತವಾಗಿ ಮಾತನಾಡಿದ್ದರು. ಭಾವುಕರಾಗಿದ್ದು, ಶಿವಣ್ಣ ಕೈ ಹಿಡಿದು ಸಮಾಧಾನ ಮಾಡಿದ್ದರು.
ವೇದಿಕೆ ಮೇಲೆ ಶಿವಣ್ಣ ಪತ್ನಿ ಗೀತಾ ಭಾವುಕ
ಶಿವಣ್ಣಗೆ ಆಪರೇಷನ್ ಆಗಬೇಕಿದೆ. ನಾವು ಅಮೆರಿಕಾಗೆ ತೆರಳಲಿದ್ದೇವೆ. ಅಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಜನವರಿಯಲ್ಲಿ ಟ್ರೀಟ್ ಮೆಂಟ್ ಪಡೆದು ಮರಳುತ್ತೇವೆ ಎಂದು ಹೇಳುತ್ತಿದ್ದಂತೆ ಕಣ್ಣೀರು ತುಂಬಿ ಬಂದಿತ್ತು. ಆ ವಿಡಿಯೋ ನೋಡಿದ ಫ್ಯಾನ್ ಶಿವಣ್ಣ ಆರೋಗ್ಯ ಮೊದಲಿನಂತಾಗಲಿ ಎಂದು ಬೇಡಿಕೊಂಡರು.
ಇದೆಲ್ಲ ನೋಡಿದ ಕರುನಾಡಿನ ಜನರು, ಅಭಿಮಾನಿಗಳು ರಾಜ್ ಕುಡಿಗಳಿಗೆ ಏನಿದು ಶಿಕ್ಷೆ? ರಾಘಣ್ಣ ಅವರಿಗೆ ಪಾರ್ಶ್ವವಾಯು, ಅಪ್ಪುಗೆ ಹೃದಯಾಘಾತ ಮತ್ತು ಶಿವಣ್ಣಗೆ ಹೀಗೆ ಅನಾರೋಗ್ಯ ಯಾಕೆ? ಎಂದು ದೇವರಲ್ಲಿ ಪ್ರಶ್ನಿಸಿದ್ದಾರೆ. ಸದ್ಯ ಅವರಿಗೆ ನಡೆಯಲಿದ್ದು, ಅವರು ಬೇಗ ಗುಣಮುಖರಾಗಿ ಬರಲಿ ಎಂದು ಕರುನಾಡಿನ ಜನರು ಆಶಿಸುತ್ತಿದ್ದಾರೆ.
ಶಿವಣ್ಣಗಾಗಿ ಡಿಸಿಎಂ ಪ್ರಾರ್ಥನೆ
ಮಂಗಳವಾರ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ಶಿವಣ್ಣ ಬೇಗ ಚಿಕಿತ್ಸೆ ಪಡೆದು ಮರಳಬೇಕು. ಅವರು ಗುಣಮುಖರಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ತಿಳಿಸಿದ್ದಾರೆ.












Click it and Unblock the Notifications