Get Updates
Get notified of breaking news, exclusive insights, and must-see stories!

Killer Venkatesh: 400 ಸಿನಿಮಾಗಳಲ್ಲಿ ಖಳನಟ, ಕಿಡ್ನಿ ವೈಫಲ್ಯ; ಹೇಗಿದೆ ಕಿಲ್ಲರ್‌ ವೆಂಕಟೇಶ್‌ ಇಂದಿನ ಬದುಕು?

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ತೆರೆ ಮೇಲೆ ಖಡಕ್‌ ವಿಲನ್‌ ಆಗಿ ಪ್ರೇಕ್ಷಕರಲ್ಲಿ ಭಯ ಹುಟ್ಟಿಸಿದ್ದ ಕಿಲ್ಲರ್‌ ವೆಂಕಟೇಶ್‌, ಇದೀಗ ಬದುಕಿನ ಎದುರು ಹೋರಾಡುತ್ತಿರುವ ದೃಶ್ಯ ಮನಕಲುಕುವಂತಿದೆ. 45 ವರ್ಷಗಳ ಕಾಲ ಕನ್ನಡ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದು, 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಈ ಹಿರಿಯ ನಟನ ಇತ್ತೀಚಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗುರುತೇ ಸಿಗದಷ್ಟು ಬದಲಾಗಿರುವ ಅವರ ರೂಪ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ.

ಕಿಲ್ಲರ್‌ ಹೆಸರು ಬಂದಿದ್ದು ಹೇಗೆ?

ಹಿರಿಯ ಪತ್ರಕರ್ತ ಗಣೇಶ್‌ ಕಾಸರಗೋಡು ಅವರ 'ಬಿಯಾಂಡ್ ಲಿಮಿಟ್ಸ್' ಸಂದರ್ಶನದಲ್ಲಿ ಮಾತನಾಡಿರುವ ವೆಂಕಟೇಶ್‌, ತಮ್ಮ ಬದುಕಿನ ಹಾದಿಯನ್ನು ನೆನಪಿಸಿಕೊಂಡರು. "ನಾನು ಶಂಕರ್‌ನಾಗ್‌, ಟೈಗರ್‌ ಪ್ರಭಾಕರ್‌, ಡಾ. ರಾಜ್‌ಕುಮಾರ್‌ ಅವರ ಜೊತೆಯಲ್ಲೂ ನಟಿಸಿದ್ದೇನೆ. ಶಿವರಾಜ್‌ಕುಮಾರ್‌, ಪುನೀತ್ ರಾಜ್‌ಕುಮಾರ್‌, ಅಂಬರೀಶ್‌, ವಿಷ್ಣುವರ್ಧನ್‌ ಅವರ ಸಿನಿಮಾಗಳಲ್ಲೂ ಖಡಕ್‌ ವಿಲನ್‌. ರವಿಚಂದ್ರನ್‌ ಅವರ 'ರಣಧೀರ' ಸಿನಿಮಾ ನನಗೆ ದೊಡ್ಡ ಹೆಸರು ತಂದುಕೊಟ್ಟಿತು. ಆ ಸಿನಿಮಾದಿಂದ 'ರಣಧೀರ ವೆಂಕಟೇಶ್' ಎಂದು ಕರೆಯಲು ಶುರುಮಾಡಿದರು. ಬಳಿಕ ಪ್ರಭಾಕರ್‌ ಅವರ ಸಿನಿಮಾದಲ್ಲಿ ಮಾಡಿದ 'ಕಿಲ್ಲರ್' ಪಾತ್ರ ನನ್ನ ಹೆಸರಿನ ಭಾಗವಾಗಿಬಿಟ್ಟಿತು" ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

Killer Venkatesh

ತೆರೆಯ ಮೇಲೆ ಕ್ರೂರ ವಿಲನ್‌ ಪಾತ್ರಗಳಿಂದ ಗುರುತಿಸಿಕೊಂಡಿದ್ದರೂ, ನಿಜ ಜೀವನದಲ್ಲಿ ಅವರು ತುಂಬಾ ಸರಳ ಸ್ವಭಾವದವರು. "ನಾನು ಯಾರ ಬಳಿಗೂ ಹೋಗಿ ಹಣ ಕೇಳಿಲ್ಲ. ಪ್ರೊಡ್ಯೂಸರ್‌ ಹತ್ತಿರ ಹೋಗಿ ಸುಮ್ಮನೆ ನಿಂತುಕೊಳ್ಳುತ್ತೇನೆ. ಕೆಲವರು ಅರ್ಥಮಾಡಿಕೊಂಡು ಸ್ವಲ್ಪ ಸಹಾಯ ಮಾಡುತ್ತಾರೆ. ಕೆಲವರು ಸ್ವಲ್ಪ ಕೊಟ್ಟು ಮುಂದಕ್ಕೆ ಕಳುಹಿಸುತ್ತಾರೆ. ಹೀಗೆ ಹೇಗೋ ಜೀವನ ಸಾಗುತ್ತಿತ್ತು" ಎಂದು ಚಿತ್ರರಂಗದ ವಾಸ್ತವ ಬಿಚ್ಚಿಟ್ಟಿದ್ದಾರೆ.

2020ರಲ್ಲಿ ಅವರಿಗೆ ಕಿಡ್ನಿ ವೈಫಲ್ಯ ತಗುಲಿ ಆರೋಗ್ಯ ಹದಗೆಟ್ಟಿತು. ಆ ಸಂದರ್ಭದಲ್ಲಿ ನಟ ಜಗ್ಗೇಶ್‌ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೋರಿದ್ದರು. ಅವರ ಮನವಿಗೆ ಸ್ಪಂದಿಸಿ ನಟ ದರ್ಶನ್‌ ಒಂದು ಲಕ್ಷ ರೂಪಾಯಿ ನೆರವು ನೀಡಿದರೆ, ಸೃಜನ್ ಲೋಕೇಶ್‌ 50 ಸಾವಿರ ರೂಪಾಯಿ ಸಹಾಯ ಮಾಡಿದರು. ಇನ್ನೂ ಅನೇಕರು ನೆರವಿಗೆ ಬಂದರು ಎಂದು ಕೃತಜ್ಞತೆಯಿಂದ ನೆನಪಿಸಿಕೊಂಡರು ವೆಂಕಟೇಶ್‌. ಕೊರೋನಾ ಸಮಯದಲ್ಲೂ ದೇವರ ಕೃಪೆಯಿಂದ ನೆಮ್ಮದಿಯೇ ಇತ್ತು. ಜನರು ಮರೆತಿಲ್ಲ. ಕೆಲವರು ಕರೆ ಮಾಡಿ ಧೈರ್ಯ ತುಂಬಿದರು. ಕೆಲವರು ಹಣ ಕಳುಹಿಸಿದರು ಎಂದಿದ್ದಾರೆ.

ಸಿನಿಮಾರಂಗ ಬದಲಾಗಿದೆ

ಚಿತ್ರರಂಗದ ಬದಲಾವಣೆಯ ಕುರಿತು ಮಾತನಾಡಿದ ಕಿಲ್ಲರ್‌ ವೆಂಕಟೇಶ್‌, "2010ರ ನಂತರ ಸಿನಿಮಾ ಕ್ಷೇತ್ರ ಸಂಪೂರ್ಣವಾಗಿ ಬದಲಾಗಿಬಿಟ್ಟಿತು. ತಂತ್ರಜ್ಞಾನ ವೇಗವಾಗಿ ಬೆಳೆಯಿತು. ಮೊಬೈಲ್‌ನಲ್ಲೇ ಸಿನಿಮಾ ಮಾಡುವ ಕಾಲ ಬಂತು. ನಮ್ಮ ಕಾಲದ ಕೆಲಸದ ಶೈಲಿ, ಸೆಟ್‌ಗಳ ಸಂಸ್ಕೃತಿ, ಕಲಾವಿದರ ನಡುವೆ ಇದ್ದ ಆತ್ಮೀಯತೆ ಎಲ್ಲವೂ ಬದಲಾಗಿಬಿಟ್ಟವು" ಎಂದು ಹಳೆಯ ದಿನಗಳನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೆ ನಟನೆ ಮಾಡ್ತೀನಿ

"ನಾನು ಸಿನಿಮಾ ಸಂಪರ್ಕವನ್ನು ಎಂದಿಗೂ ಬಿಡಲಿಲ್ಲ. ಅವಕಾಶ ಸಿಕ್ಕರೆ ಇಂದು ಕೂಡ ನಟನೆ ಮಾಡುತ್ತೇನೆ. ಆರೋಗ್ಯ ಸುಧಾರಿಸಿಕೊಂಡ ಮೇಲೆ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಬೇಕು ಅನ್ನೋದು ನನ್ನ ಆಸೆ" ಎಂದು ಆಶಾಭಾವ ವ್ಯಕ್ತಪಡಿಸಿದರು. ಆದರೆ ತಕ್ಷಣವೇ "ಜನರೇಷನ್‌ ಬದಲಾಗಿಬಿಟ್ಟಿದೆ. ಆಗಿನ ಕೆಲವೇ ಮಂದಿ ಕಲಾವಿದರು ಈಗ ಉಳಿದಿದ್ದಾರೆ. ನಮ್ಮ ಕಾಲದ ಸ್ನೇಹ, ಬಾಂಧವ್ಯ ಈಗ ಕಾಣಿಸುತ್ತಿಲ್ಲ" ಎಂದಿದ್ದಾರೆ.

Killer Venkatesh

ತೆರೆಯ ಮೇಲೆ ಕಠಿಣ ಖಳನಟನಾಗಿ ಗುರುತಿಸಿಕೊಂಡ ಕಿಲ್ಲರ್‌ ವೆಂಕಟೇಶ್‌ ಅವರಲ್ಲಿ ಕಾಲ ಬದಲಾದರೂ, ಅವಕಾಶಗಳು ಕಡಿಮೆಯಾದರೂ, ಆರೋಗ್ಯದ ತೊಂದರೆಗಳಿದ್ದರೂ ಮತ್ತೆ ನಟನೆ ಮಾಡಬೇಕೆಂಬ ಹಂಬಲ ಮಾತ್ರ ಇನ್ನೂ ಜೀವಂತವಾಗಿದೆ. ಒಮ್ಮೆ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ದಿಗ್ಗಜರ ಜೊತೆಗೆ ನಿಂತಿದ್ದ ಕಿಲ್ಲರ್‌ ವೆಂಕಟೇಶ್‌, ಇಂದೀಗ ಅವಕಾಶಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಆರೋಗ್ಯದ ಸಮಸ್ಯೆಗಳು, ಆರ್ಥಿಕ ಅಡಚಣೆಗಳು ಎಲ್ಲವನ್ನೂ ಎದುರಿಸುತ್ತಾ ಅವರು ಬದುಕಿನ ಹೋರಾಟ ಮುಂದುವರಿಸಿದ್ದಾರೆ. ತೆರೆಯ ಮೇಲೆ ಕ್ರೂರನಾಗಿ ಕಾಣಿಸಿಕೊಂಡ ಈ ನಟನ ಜೀವನ, ವಾಸ್ತವದಲ್ಲಿ ಹೋರಾಟದಿಂದ ಕೂಡಿದೆ. ಅವರ ಇಂದಿನ ಸ್ಥಿತಿ ಕಂಡು ಅನೇಕರು ಮರುಗುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅನೇಕ ವರ್ಷಗಳ ಸೇವೆ ಸಲ್ಲಿಸಿದ ಈ ಹಿರಿಯ ಕಲಾವಿದರಿಗೆ ಮತ್ತೆ ಅವಕಾಶಗಳು ದೊರಕಲಿ, ಆರೋಗ್ಯ ಸುಧಾರಿಸಲಿ ಎಂಬುದು ಅಭಿಮಾನಿಗಳ ಹಾರೈಕೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+