Sudeep: ದರ್ಶನ್ ಮತ್ತು ನಿಮ್ಮ ಮಧ್ಯೆ ಇರುವ ಸಮಸ್ಯೆ ಯಾವಾಗ ಸರಿಯಾಗುತ್ತೆ ಎನ್ನುವ ಪ್ರಶ್ನೆಗೆ ಸುದೀಪ್ ಹೇಳಿದ್ದೇನು?
ಬಿಗ್ ಬಾಸ್ ಸೀಸನ್ 10ರ ಫೈನಲ್ ಮುಕ್ತಾಯವಾದ ಬಳಿಕ ನಟ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದಾರೆ. Ask Kichcha ಹೆಸರಿನಲ್ಲಿ ಅಭಿಮಾನಿಗಳು ಪ್ರಶ್ನೆ ಕೇಳಬಹುದು ಎಂದು ಸುದೀಪ್ ಹೇಳಿದ್ದರು. ಸಾವಿರಾರು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಪ್ರಶ್ನೆ ಕೇಳಿದ್ದು ಆಯ್ದ ಕೆಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ಬಗ್ಗೆ ಒಂದು ಮಾತು ಹೇಳಿ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸುದೀಪ್, ಮೆಗಾ ಹಿಟ್ ಎಂದು ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ನಿರೀಕ್ಷೆಗೂ ಮೀರಿ ಜನಪ್ರಿಯತೆ ಗಳಿಸಿಕೊಂಡಿದೆ.

ರಕ್ಷಿತ್ ಶೆಟ್ಟಿ ಬಗ್ಗೆ ಕೇಳಿದ ಪ್ರಶ್ನೆಗೆ ಕೂಡ ಸುದೀಪ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆತ ಒಬ್ಬ ಕನಸುಗಾರ ಎಂದು ಹೇಳಿದ್ದಾರೆ. ಮ್ಯಾಕ್ಸ್ ಸಿನಿಮಾ ಶೂಟಿಂಗ್ ಯಾವಾಗ ಮುಗಿಯುತ್ತೆ ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿದ್ದು ಇನ್ನೂ 25 ದಿನಗಳಲ್ಲಿ ಮುಗಿಯಬಹುದು ಎಂದಿದ್ದಾರೆ.
ಅಪ್ಪು ಪುನೀತ್ ಅವರ ಬಗ್ಗೆ ಕೆಲವು ಪದಗಳನ್ನು ಮಾತನಾಡಿ ಎಂದು ಅಭಿಮಾನಿಯೊಬ್ಬರು ಕೇಳಿದ್ದು, ಒಂದು ಪುಸ್ತಕದ ಬಗ್ಗೆ ಕೆಲವು ಪದಗಳಲ್ಲಿ ಬರೆಯುವುದು ಹೇಗೆ ಎಂದು ಕೇಳಿದ್ದಾರೆ.
ಅತ್ತಿಗೆ ಪ್ರಿಯಾ ಸುದೀಪ್ ಬಗ್ಗೆ ಒಂದು ಮಾತಲ್ಲಿ ಹೇಳಿ ಎನ್ನುವ ಅಭಿಮಾನಿ ಪ್ರಶ್ನೆಗೆ ಉತ್ತರ ನೀಡಿದ್ದು ಪತ್ನಿಯನ್ನು 'ಸುಂದರ ಶಕ್ತಿ' ಎಂದು ಕರೆದಿದ್ದಾರೆ.
ಸುದೀಪ್ ಅವರ ಮುಂದಿನ ಸಿನಿಮಾ 'ಕೆಕೆ' ಈ ಹಿಂದೆ ಘೋಷಿಸಿದ್ದ ಕನ್ವರ್ ಲಾಲ್ ಸಿನಿಮಾನ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದು, ಅದರ ಬಗ್ಗೆ ನನಗೂ ಗೊತ್ತಿಲ್ಲ ಎಂದು ಸುದೀಪ್ ಉತ್ತರ ಕೊಟ್ಟಿದ್ದಾರೆ.
ಸುದೀಪ್-ದರ್ಶನ್ ನಡುವೆ ಸಮಸ್ಯೆ ಏನು?
ಸುದೀಪ್ ಮತ್ತು ದರ್ಶನ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳು, ಇಬ್ಬರೂ ಕೂಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರು ಬಳಿಕ ದೂರವಾಗಿದ್ದರು, ಈಗ ಇಬ್ಬರೂ ಮತ್ತೆ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಇದನ್ನೇ ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಮತ್ತು ದರ್ಶನ್ ನಡುವೆ ಇರುವ ಸಮಸ್ಯೆ ಯಾವಾಗ ಸರಿ ಮಾಡ್ಕೋತಿರಾ, ಇನ್ನು ಎಷ್ಟು ಟೈಮ್ ತಗೋತಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಸುದೀಪ್ ಸಮಸ್ಯೆ ಏನು ಎಂತಾ ಇಬ್ರು ಹುಡುಕ್ತಾ ಇದ್ದೀವಿ ಎಂದು ಹೇಳಿದ್ದಾರೆ.
ದರ್ಶನ್ ಬಗ್ಗೆ ಒಂದು ಮಾತು ಹೇಳಿ ಎಂದು ಅಭಿಮಾನಿಯೊಬ್ಬರು ಮಾಡಿದ ಪ್ರಶ್ನೆಗೆ ಉತ್ತರ ನೀಡಿದ್ದು, ಅವರಿಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ ಎಂದಿದ್ದಾರೆ.












Click it and Unblock the Notifications