ಸುದೀಪ್ ಹೇಳಿದ್ದು ಯಾವುದೇ ನಟನಿಗೆ ಅಲ್ಲ, ಪೈರಸಿ ಬಗ್ಗೆ: ಚಕ್ರವರ್ತಿ ಚಂಡ್ರಚೂಡ್
ಹುಬ್ಬಳ್ಳಿಯಲ್ಲಿ ನಡೆದ "ಮಾರ್ಕ್" ಸಿನಿಮಾ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಆಡಿದ ಮಾತುಗಳು ಚಿತ್ರರಂಗದಲ್ಲಿ ಕಿಚ್ಚು ಹೊತ್ತಿಸಿ ವಿವಿಧ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ. ಈ ವೇದಿಕೆಯಿಂದಲೇ ಹೇಳ್ತಿದ್ದೀನಿ ಯುದ್ಧಕ್ಕೆ ನಾವು ಸಿದ್ಧ ಎಂದು ಸುದೀಪ್ ತೊಡೆತಟ್ಟಿದ್ದರು. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ವೇದಿಕೆಯೊಂದರಲ್ಲಿ ಆಡಿದ ಮಾತುಗಳು ಸುದೀಪ್ ಅವರಿಗೆ ಕೌಂಟರ್ ಕೊಟ್ಟಂತೆ ಇದೆ ಎಂಬ ಚರ್ಚೆಯಾಗುತ್ತಿದೆ. ಸದ್ಯ ಸೋಷಿಯಲ್ ಮೀಡಿಯಾಲ್ಲಿ ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಇದೇ ವಿಚಾರವಾಗಿ ಕಿತ್ತಾಟ ಜೋರಾಗಿದೆ ಆದರೆ ಸುದೀಪ್ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದು? ಎಂದು ನಿರ್ದೇಶಕ ಹಾಗೂ ಸುದೀಪ್ ಅವರ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ.
'ಸುದೀಪಣ್ಣನ ಮಾತನ್ನು ತಪ್ಪಾಗಿ ಕಲ್ಪಿಸಿಕೊಳ್ಳಲಾಗುತ್ತಿದೆ. ಇದರ ಅಸಲಿ ಅರ್ಥ ಬೇರೆ ಇದೆ. ಅದನ್ನು ತಪ್ಪಾಗಿ ತಿಳಿದುಕೊಂಡು ಫ್ಯಾನ್ ವಾರ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರುವುದು ಬೇಡ. ಸಿನಿಮಾ ರಿಲೀಸ್ ಆದಾಗ ಶೋ ಮುಗಿಯುವ ಮುನ್ನವೇ ಆ ಸಿನಿಮಾ ಪೈರಸಿ ಆಗಿರುತ್ತೆ. ಈಗ ಚಿತ್ರರಂಗ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದರು ಪೈರಸಿ. ಸುದೀಪ್ ಹೇಳಿದ ಪಡೆ ಇದೇ' ಎಂದು ಸ್ಪಷ್ಟನೆ ನೀಡಿದ್ದಾರೆ.

'ಯುದ್ಧ ಪೈರಸಿ ವಿರುದ್ಧ'
'ಪೈರಸಿಗೆ ಸಂಬಂಧಿಸಿದಂತಹ 22 ಆಪ್ ಇದರ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿವೆ. ಬುಕ್ ಮೈ ಶೋನಲ್ಲಿ ವಿಮರ್ಶೆಗಳ ಕಾಟವೂ ಇದೆ. ಇದು ಮಾರ್ಕ್ ಸಿನಿಮಾಗೆ ಮಾತ್ರ ಆಗುವ ಸಮಸ್ಯೆ ಅಲ್ಲ. ಇದು ಡೆವಿಲ್ ಸಿನಿಮಾಗೂ ಆಗಿದೆ. ರಿವ್ಯೂಗಳ ಹೆಸರಿನಲ್ಲಿ ಇಡೀ ಚಿತ್ರದ ಕಥೆ ಹೇಳುತ್ತಾರೆ. ಸುದೀಪಣ್ಣ ಹೇಳಿದ ಆ ಯುದ್ಧ ಈ ಪೈರಸಿ ವಿರುದ್ಧವೇ ಹೊರತು, ಇನ್ನೊಬ್ಬ ನಟನ ವಿರುದ್ಧ ಅಲ್ಲ' ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
'ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡರೆ ಅದು ನಮ್ಮ ತಪ್ಪಲ್ಲ, ಈ ಯುದ್ಧ ಮಾಡಬೇಕಿರುವುದು ನಾವು ಮಾತ್ರವಲ್ಲ, ಎಲ್ಲರೂ ಪೈರಸಿ ವಿರುದ್ಧ ಯುದ್ಧ ಮಾಡಲೇಬೇಕು. ಕನ್ನಡ ಸಿನಿಮಾಗಳು ರಿಲೀಸ್ ಆದಾಗ ಅದು ಉತ್ತಮ ಪ್ರದರ್ಶನ ಕಾಣಬಾರದು ಎಂದು ಮಾಫಿಯಾ ತರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪಡೆಯ ವಿರುದ್ಧ ಯುದ್ಧ ಮಾಡಬೇಕು. ಹುಬ್ಬಳ್ಳಿ ವೇದಿಕೆಯಲ್ಲಿ ಸುದೀಪ್ ರವಾನಿಸಿದ್ದು ಕೂಡ ಇದೇ ಸಂದೇಶ' ಎಂದಿದ್ದಾರೆ ಚಂದ್ರಚೂಡ್.
ಸುದೀಪ್ ಹೇಳಿದ್ದೇನು?
ಹುಬ್ಬಳ್ಳಿಯಲ್ಲಿ ಮಾತನಾಡಿದ ಸುದೀಪ್, 'ಡಿಸೆಂಬರ್ 25ಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತೆ, ಆದ್ರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ. ಯುದ್ಧಕ್ಕೆ ನಾವೂ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ. ಸೈಲೆಂಟಾಗಿ ಇರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗಾಗಿ, ನೀವೆಲ್ಲ ಚೆನ್ನಾಗಿ ಇರ್ಬೇಕು ಅನ್ನೋ ಕಾರಣಕ್ಕೆ ನಾನು ಬಾಯಿ ಮುಚ್ಚಿಕೊಂಡು ಇದ್ದೀನಿ. ಅಭಿಮಾನಿಗಳು ನೀವು ಎಲ್ಲವನ್ನೂ ತಡೆಯುತ್ತಾ ಬಂದಿದ್ದೀರಿ. ಆದರೆ ಇವಾಗ ಹೇಳ್ತಿದ್ದೀನಿ, ನೀವು ತಡೆಯುವವರೆಗೆ ತಡೆಯಿರಿ, ಮಾತನಾಡುವ ಸಮಯದಲ್ಲಿ ಮಾತಾಡಿ' ಎಂದು ಕರೆ ನೀಡಿದ್ದರು.
ಸುದೀಪ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಕೂಡ ವೇದಿಕೆಯೊಂದರಲ್ಲಿ ಆಡಿದ ಮಾತುಗಳು ಸದ್ದು ಮಾಡಿತು. 'ದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಫ್ಯಾನ್ಸ್ ಬಗ್ಗೆ ಮಾತನಾಡ್ತಾರೆ, ಮಾಧ್ಯಮಗಳಿಗೆ ಹೇಳಿಕೆ ಕೊಡ್ತಾರೆ. ಆದರೆ ದರ್ಶನ್ ಇದ್ದಾಗ ಮಾತ್ರ ಅವರು ಬೆಂಗಳೂರಿನಲ್ಲಿ ಇದ್ದಾರಾ ಎಂದು ಗೊತ್ತೇ ಆಗದಂತೆ ಇರ್ತಾರೆ, ದರ್ಶನ್ ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ಅವರ ಫ್ಯಾನ್ಸ್ ನೀವು ಕೂಡ ತಲೆಕೆಡಿಸಿಕೊಳ್ಳಬೇಡಿ' ಎಂದು ವಿಜಯಲಕ್ಷ್ಮಿ ಹೇಳಿದ್ದರು. ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ.












Click it and Unblock the Notifications