"ನಟಿ ಸೌಂದರ್ಯ ಸಾವಿಗೆ ಕಾರಣವಾದ ವಿಮಾನವನ್ನೇ ಕಿಚ್ಚ ಸುದೀಪ್ ಬಳಸಿದ್ರು"
ಬಹುಭಾಷೆಗಳಲ್ಲಿ ಮಿಂಚಿದ್ದ ಕನ್ನಡತಿ ನಟಿ ಸೌಂದರ್ಯ ಅವರು 2004ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಕಾಲಿಕ ಮರಣ ಹೊಂದಿದ್ದರು. ಅಂದು ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು ಈ ಅವಘಡ ಸಂಭವಿಸಿತ್ತು. ಆದರೆ ಸೌಂದರ್ಯ ಅವರು ಪ್ರಯಾಣಿಸಿದ್ದ ಇದೇ ವಿಮಾನಕ್ಕೂ ನಟ ಕಿಚ್ಚ ಸುದೀಪ್ ಅವರಿಗೂ ನಂಟಿತ್ತು ಎಂಬ ಅಚ್ಚರಿ ವಿಚಾರ ಈಗ ರಿವೀಲ್ ಆಗಿದೆ. ಸೌಂದರ್ಯ ಅವರ ಸಾವಿಗೆ ಕೆಲವೇ ದಿನಗಳ ಹಿಂದೆ ಇದೇ ವಿಮಾನದಲ್ಲಿ ಸುದೀಪ್ ಕೂಡ ಪ್ರಯಾಣಿಸಿ ಸಾಹಸ ಪ್ರದರ್ಶಿಸಿದ್ದರು ಎಂದು ಬಿಗ್‌ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸಿನಿಡ್ರಾಪ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಸಂಬರಗಿ, 'ನಾನು ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಆಗ ನಟ ಕಿಚ್ಚ ಸುದೀಪ್ ಅವರನ್ನೇ ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಯಿತು. ಎರಡು ವರ್ಷಗಳ ಕಾಲ ಸುದೀಪ್ ಅದಕ್ಕೆ ರಾಯಭಾರಿ ಆಗಿದ್ರು. ಆಗ ಬ್ರ್ಯಾಂಡ್‌ನ ಪ್ರೀಪೇಯ್ಡ್ ಲಾಂಚ್ ಮಾಡೋಕೆ ಸುದೀಪ್ 15,000 ಅಡಿ ಎತ್ತರದಿಂದ ಪ್ಯಾರಾಚೂಟ್‌ನಲ್ಲಿ ಜಂಪ್ ಮಾಡಬೇಕಿತ್ತು' ಎಂದು ಹೇಳಿದ್ದಾರೆ.

'ಮಾರ್ಕೆಟಿಂಗ್‌ಗಾಗಿ ಸುದೀಪ್ ಅವರನ್ನ ಆಕಾಶದಿಂದ ಹಾರುವಂತೆ ಮಾಡಿದ್ದೇ ಒಂದು ದೊಡ್ಡ ಸಾಧನೆ. ಅದು ತುಂಬಾ ಒಳ್ಳೆಯ ಎಕ್ಸ್‌ಪೀರಿಯೆನ್ಸ್. ಈ ಸಾಹಸಕ್ಕೆ ಸುದೀಪ್ ಅವರ ತಂದೆ-ತಾಯಿ ಒಪ್ಪಿಕೊಳ್ಳಲಿಲ್ಲ. ಸುದೀಪ್ ಅವರೂ ಮೊದಲಿಗೆ ಒಪ್ಪಿರಲಿಲ್ಲ. ಸುದೀಪ್‌ಗೆ ಏನಾದರೂ ಅನಾಹುತ ಆದ್ರೆ ಏನ್ ಮಾಡೋದು ಎಂಬ ಚಿಂತೆಯೂ ಇತ್ತು. ಆ ಮೇಲೆ ಗ್ಲೋಬಲ್ ಲೆವೆಲ್‌ನ ವಿಮೆ ಮಾಡಿಸಿ, ಒಪ್ಪಿಸಿ ಈ ಸಾಹಸ ಮಾಡಿಸಿದ್ದು. ಮೇಲಿಂದ ಒಂದು ಲಕ್ಷ ಪ್ರೀಪೇಯ್ಡ್ ಕಾರ್ಡ್‌ನ ಬಿಸಾಡಿ ಸುದೀಪ್ ಹಾರಿದ್ದರು. ಆಗ ಅದರ ಬಗ್ಗೆ ಪೇಪರ್, ಟಿವಿ, ರೇಡಿಯೋದಲ್ಲಿ ಪ್ರಚಾರ ಕೂಡ ಮಾಡಿದ್ವಿ' ಎಂದು ವಿವರಿಸಿದ್ದಾರೆ.
'ಸೌಂದರ್ಯ ಬಳಸಿದ್ದು ಅದೇ ವಿಮಾನ'
'2004ರಲ್ಲಿ ನಾವು ಒಂದು ಈವೆಂಟ್ ಮಾಡಿದ್ವಿ. ಕಿಚ್ಚ ಸುದೀಪ್ ಅವರು 15,000 ಅಡಿ ಎತ್ತರದಿಂದ ಜಂಪ್ ಮಾಡಿದ್ರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಂದು ಲ್ಯಾಂಡ್ ಆಗಿದ್ರು. ಸೆಸ್ನಾ (Cessna) ಎಂಬ ಪ್ರೈವೇಟ್ ಜೆಟ್‌ನಲ್ಲಿ ಸುದೀಪ್ ಪ್ರಯಾಣಿಸಿ, ಜಂಪ್ ಮಾಡಿದ್ರು. ಇದಾದ ಒಂದೇ ವಾರಕ್ಕೆ ನಟಿ ಸೌಂದರ್ಯ ಅವರು ವಿಮಾನ ದುರಂತದಲ್ಲಿ ಸಾವನ್ನಪ್ಪಿದರು' ಎಂದು ಸಂಬರಗಿ ಆ ಘಟನೆ ನೆನೆದಿದ್ದಾರೆ.

'ಆ ಘಟನೆ ನೆನಪಾದರೆ ನಮಗೆ ಇಂದಿಗೂ ಶಾಕ್ ಆಗುತ್ತೆ. ಸುದೀಪ್ ಅವರು ಯಾವ ವಿಮಾನದಲ್ಲಿ ಹೋಗಿ ಎತ್ತರದಿಂದ ಜಂಪ್ ಮಾಡಿದ್ರೋ, ಅದೇ ಸೆಸ್ನಾ ವಿಮಾನ ದುರಂತಕ್ಕೀಡಾಗಿ ನಟಿ ಸೌಂದರ್ಯ ಪ್ರಾಣ ಕಳೆದುಕೊಂಡರು. ಅದರ ಹಿಂದಿನ ವಾರ ನಮ್ಮ ಈವೆಂಟ್‌ಗೆ ಬಂದಿದ್ದು ಕೂಡ ಅದೇ ವಿಮಾನ, ಅದೇ ಇಂಜಿನ್, ಅದೇ ಪೈಲಟ್' ಎಂಬ ಅಚ್ಚರಿ ವಿಚಾರವನ್ನು ಪ್ರಶಾಂತ್ ಸಂಬರಗಿ ಬಹಿರಂಗಪಡಿಸಿದ್ದಾರೆ.
'ಇದೆಲ್ಲ ನೋಡಿದಾಗ ಲೈಫ್ ಅಂದ್ರೆ ಒಂದು ರೀತಿ ಭಯ ಬರುತ್ತೆ. ಇದನ್ನೆಲ್ಲ ನಾವು ಆವತ್ತು ಯಾಕೆ ಮಾಡಿದ್ವಿ? ನಮಗೆ ಯಾಕೆ ಆ ಹುಚ್ಚುತನ ಇತ್ತು? ಅನಿಸುತ್ತೆ. ಸೌಂದರ್ಯ ಅವರು ಬಳಸಿದ್ದ ವಿಮಾನವನ್ನೇ ನಾವು ಬಳಸಿದ್ದು, ಅವರಿಗೆ ಆದ ಪರಿಸ್ಥಿತಿ ನಮಗೂ ಆಗಬಹುದಿತ್ತು. ನಾವು ಬಳಸಿದ ಒಂದೇ ವಾರಕ್ಕೆ ಅದೇ ವಿಮಾನ ಅಪಘಾತಕ್ಕೀಡಾಗುತ್ತೆ. ಅದನ್ನ ನೆನಸಿಕೊಂಡ್ರೆ ಇವತ್ತಿಗೂ ಒಂತರಾ ಆಗುತ್ತೆ' ಎಂದಿದ್ದಾರೆ ಸಂಬರಗಿ.












Click it and Unblock the Notifications