Kiccha Sudeep: ಅಮ್ಮನ ನೆನಪಿಗಾಗಿ ಕಿಚ್ಚ ಸುದೀಪ್ ಮಹತ್ವದ ನಿರ್ಧಾರ
ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದ್ದರು. ತಾಯಿಯ ಅಗಲಿಕೆಯಿಂದ ಸುದೀಪ್ ತೀವ್ರ ನೊಂದಿದ್ದರು. ಇದೇ ಕಾರಣಕ್ಕೆ ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಅಮ್ಮನಿಲ್ಲದೆ ಮನೆಯಲ್ಲಿ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಕಟ ಹೊರಹಾಕಿದ್ದರು. ಇನ್ನು ಅಮ್ಮನ ಹುಟ್ಟುಹಬ್ಬದ ಪ್ರಯುಕ್ತ ಸುದೀಪ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಮ್ಮನ ಹುಟ್ಟು ಹಬ್ಬದ ನೆನಪಿಗೆ "ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ" ಎಂಬ ಸಾಲಿನೊಂದಿಗೆ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ಹಸಿರು ಕ್ರಾಂತಿಗೆ ಚಾಲನೆ ನೀಡಿದ್ದಾರೆ. ಇದೇ ರೀತಿ ಇನ್ನೂ ಹಲವೆಡೆ ಗಿಡ ನೆಡಲು ಸುದೀಪ್ ಮತ್ತವರ ತಂಡ ರೆಡಿಯಾಗಿದೆ. "ಪ್ರತಿ ಮರಕ್ಕೂ ಒಂದು ಕಥೆ ಇದೆ. ಈ ಮರವು ನನ್ನ ಅಮ್ಮನ ಕಥೆ ಹೇಳಲಿ" ಎಂದಿದ್ದಾರೆ ಕಿಚ್ಚ.

ಆಗಸ್ಟ್ 30ರಂದು ಸುದೀಪ್ ಅವರ ತಾಯಿ ಸುಜಾತ ಅವರ ಜನ್ಮದಿನದ ಹಿನ್ನೆಲೆ ಅಮ್ಮನ ನೆನಪಿಗಾಗಿ ಈ ಸಾಮಾಜಿಕ ಕಾರ್ಯಕ್ಕೆ ಕೈಹಾಕಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಸ್ವತಃ ಸುದೀಪ್ ಚಾಲನೆ ನೀಡಿದರು. ಇಡೀ ಕುಟುಂಬದ ಜೊತೆ ಸೇರಿಕೊಂಡು ಅಮ್ಮನ ನೆನಪಾರ್ಥ ತೆಂಗಿನ ಸಸಿ ನೆಟ್ಟು ನೀರೆರೆದಿದ್ದಾರೆ.
ಹುಟ್ಟುಹಬ್ಬಕ್ಕೆ ಮನೆ ಹತ್ರ ಬರಬೇಡಿ
ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಹುಟ್ಟುಹಬ್ಬ ಇರುವ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಆದರೆ ಸುದೀಪ್ ಪೋಸ್ಟ್ ಮೂಲಕ ಎಲ್ಲರಿಗೂ ಶಾಕ್ ಕೊಟ್ಟರು. ಈ ಬಾರಿ ಯಾರೂ ಮನೆಯ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಸಲ ತುಂಬಾ ಕಷ್ಟವಾಗುತ್ತಿದೆ. ಅಮ್ಮನಿಲ್ಲದ ಮೊದಲ ವರ್ಷವಿದು, ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ' ಎಂದು ಭಾವುಕರಾಗಿದ್ದಾರೆ.
ಆದರೆ, ನಿಮ್ಮನ್ನ ನಿರಾಸೆಗೊಳಿಸುವುದು ನನಗೆ ಇಷ್ಟವಿಲ್ಲ. ನಿಮ್ಮ ಮೂಲಕವೇ ನನ್ನ ಹುಟ್ಟುಹಬ್ಬ ಹುಟ್ಟಬೇಕು!. ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದು ಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಎರಡನೇ ತಾರೀಖಿನ ಬದಲು ಸೆಪ್ಟೆಂಬರ್ ಒಂದರ ರಾತ್ರಿಯೇ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ ಎಂದಿದ್ದಾರೆ.
ಆದರೆ ಸೆಪ್ಟೆಂಬರ್ 2ರಂದು ದಯವಿಟ್ಟು ಯಾರೂ ಮನೆಯ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸಿಗೆ ನೋವಾಗುತ್ತೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿಯ ವಾತಾವರಣ ಇರಲಿ ಎಂದು ಬಯಸುತ್ತಿದ್ದೇನೆ ಎಂದಿದ್ದಾರೆ ಕಿಚ್ಚ.












Click it and Unblock the Notifications