ಪೈರಸಿಗಿಂತಲೂ ದೊಡ್ಡ 'ಥಿಯೇಟರ್ ಮಾಫಿಯಾ' ಕರ್ನಾಟಕದಲ್ಲಿದೆ: ನಟ ಝೈದ್ ಖಾನ್
ಸ್ಯಾಂಡಲ್‌ವುಡ್ ಈಗಾಗಲೇ ಪೈರಸಿ ಕಾಟದಿಂದ ನರಳುತ್ತಿದೆ. ಇತ್ತೀಚೆಗೆ ನಟ ಕಿಚ್ಚ ಸುದೀಪ್ ಇದರ ವಿರುದ್ಧ ನಾವು ಯುದ್ಧಕ್ಕೆ ರೆಡಿ ಎಂದು ತೊಡೆತಟ್ಟಿದ್ದರು. ಇದರೊಂದಿಗೆ ಮತ್ತೊಂದು ಮಾಫಿಯಾ ಸದ್ದು ಮಾಡುತ್ತಿದೆ. ಕರ್ನಾಟಕದಲ್ಲಿ ಸಿನಿಮಾಗಳಿಗೆ ಥಿಯೇಟರ್ ನೀಡುವ ವಿಚಾರದಲ್ಲೂ ದೊಡ್ಡ ಮಾಫಿಯಾ ನಡೆಯುತ್ತಿದೆ ಎಂದು ನಟ ಝೈದ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಕಲ್ಟ್ ಸಿನಿಮಾ ಪ್ರಚಾರದ ವೇಳೆ ಝೈದ್ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ನಟ ಝೈದ್ ಖಾನ್ ಅವರು ಪ್ರಭಾವಿ ಸಚಿವರಾದ ಜಮೀರ್ ಅಹ್ಮದ್ ಅವರ ಪುತ್ರ. ಶ್ರೀಮಂತಿಕೆ, ರಾಜಕೀಯ ಪ್ರಭಾವ ಎಲ್ಲ ಇದ್ದರೂ ರಾಜ್ಯದಲ್ಲಿರುವ ಚಿತ್ರಮಂದಿರ ಮಾಫಿಯಾಕ್ಕೆ ನಾನು ಬಲಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸಿನಿಮಾ ಪ್ರಚಾರ ಮಾಡಿರುವ ಅವರು, ಜನವರಿ 23ರಂದು 'ಕಲ್ಟ್' ಸಿನಿಮಾ ರಿಲೀಸ್ ಆಗುತ್ತಿದ್ದು, ಎಲ್ಲರೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಎಂದಿದ್ದಾರೆ.

'ಹೊಸಬರಿಗೆ ಥಿಯೇಟರ್ ಸಿಗಲ್ಲ'
ಇನ್ನು ಚಿತ್ರಮಂದಿರಗಳ ಮಾಫಿಯಾ ಎಂದೇ ಉಲ್ಲೇಖಿಸಿರುವ ಝೈದ್, 'ರಾಜ್ಯದಲ್ಲಿ ಒಂದು ಥಿಯೇಟರ್‌ಗಳ ದೊಡ್ಡ ಮಾಫಿಯಾ ಇದೆ. ನಾನೂ ಆ ಮಾಫಿಯಾಗೆ ಸಿಲುಕಿ ಒಡ್ಡಾಡಿದ್ದೇನೆ. ನನಗೆ ಪ್ರಭಾವಿ ಹಿನ್ನೆಲೆ, ಹಣ ಇದ್ದರೂ ಈ ರೀತಿಯ ಅನುಭವವಾಗಿದೆ. ಇನ್ನು ಯಾವ ಹಿನ್ನೆಲೆ ಇಲ್ಲದೆ ಸಿನಿಮಾ ಮಾಡಿದವರು ಈ ಮಾಫಿಯಾದಿಂದ ಕಣ್ಣೀರಿಡುತ್ತಿದ್ದಾರೆ ಎಂದು ವಾಸ್ತವ ಬಿಚ್ಚಿಟ್ಟಿದ್ದಾರೆ. ನನ್ನ ಮೊದಲನೇ ಸಿನಿಮಾ ರಿಲೀಸ್ ಆದಾಗ 100 ಚಿತ್ರಮಂದಿರಗಳು ಸಿಕ್ಕಿದ್ದವು. ಆದರೆ ನಂತರ 50ಕ್ಕೆ ಇಳಿಯಿತು. ಕನ್ನಡದಲ್ಲಿ ಹೊಸಬರ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತಿಲ್ಲ, ಸಿನಿಮಾ ಮಾಡಿದವರು ನಲುಗಿ ಹೋಗುತ್ತಿದ್ದಾರೆ' ಎಂದಿದ್ದಾರೆ.
'ನನಗೆ ಪ್ರಭಾವಿ ಹಿನ್ನೆಲೆ ಇದ್ದಿದ್ದರಿಂದ ಅಷ್ಟಾದರೂ ಚಿತ್ರಮಂದಿರಗಳು ಸಿಕ್ಕವು. ಆದರೆ ಹೊಸಬರಿಗೆ ನಿಜವಾಗಿಯೂ ದೊಡ್ಡ ಅನ್ಯಾಯ ನಡೆಯುತ್ತಿದೆ. ಇನ್ನು ಈ ಜನವರಿ 23ಕ್ಕೆ ನನ್ನ ಕಲ್ಟ್ ಸಿನಿಮಾ ಹಾಗೂ ದುನಿಯಾ ವಿಜಯ್ ಅವರ ಸಿನಿಮಾ ಮಾತ್ರವೇ ರಿಲೀಸ್ ಆಗುತ್ತಿವೆ. ರಾಜ್ಯದಲ್ಲಿರುವ ಒಟ್ಟು ಥಿಯೇಟರ್‌ಗಳಲ್ಲಿ ಶೇ 40ರಷ್ಟು ಮಾತ್ರವೇ ನಮ್ಮ ಸಿನಿಮಾಗೆ ಸಿಗುತ್ತಿದ್ದು, ಬಾಕಿ ಶೇ 60ರಷ್ಟು ಥಿಯೇಟರ್‌ಗಳು ದುನಿಯಾ ವಿಜಯ್ ಅವರ ಸಿನಿಮಾಗೆ ಸಿಗಲಿವೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಫಿಲ್ಮ್ ಚೇಂಬರ್ ಕ್ರಮ ತೆಗೆದುಕೊಳ್ಳಬೇಕು
'ಪೈರಸಿಗಿಂತಲೂ ದೊಡ್ಡ ಮಾಫಿಯಾ ಅಂದ್ರೆ ಥಿಯೇಟರ್‌ಗಳ ಮಾಫಿಯಾ. ಇದರಲ್ಲಿ ನಾನೂ ಸಿಲುಕಿ ಒದ್ದಾಡಿದ್ದೀನಿ. ಇದರ ಪರ ಯಾರೇ ಧ್ವನಿ ಎತ್ತಿದರೂ ಅವರೊಂದಿಗೆ ನಾನು ನಿಲ್ಲುತ್ತೇನೆ. ಇದನ್ನು ಫಿಲ್ಮ್ ಚೇಂಬರ್‌ನವರೇ ಮಾಡಬೇಕು. ಬೇರೆ ಯಾರಿಂದಲೂ ಇದನ್ನು ತಡೆಯಲು ಆಗಲ್ಲ, ಏನಾದರೂ ಕಾನೂನು ಮಾಡಿದರೆ ಥಿಯೇಟರ್ ಮಾಫಿಯಾ ನಿಲ್ಲುತ್ತೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಕಲ್ಟ್" ಶೀರ್ಷಿಕೆಯಡಿಯಲ್ಲಿ ಅನಿಲ್ ಕುಮಾರ್ ನಿರ್ದೇಶನದಲ್ಲಿ ಬನಾರಸ್ ಖ್ಯಾತಿಯ ನಟ ಝೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್ ನಟಿಸಿರುವ ಆಕ್ಷನ್-ರೊಮ್ಯಾಂಟಿಕ್ ಕನ್ನಡ ಚಲನಚಿತ್ರ ಜನವರಿ 23ಕ್ಕೆ ಬಿಡುಗಡೆಯಾಗಲಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್ ಮತ್ತು ಇನ್ನೂ ಅನೇಕರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ, ಜೆ.ಎಸ್.ವಾಲಿ ಛಾಯಾಗ್ರಹಣ ಮಾಡಿದ್ದಾರೆ ಮತ್ತು ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ.












Click it and Unblock the Notifications