Movie Ticket: ಸಿನಿಮಾ ಟಿಕೆಟ್ ಹಾಗೇ ಇಟ್ಟುಕೊಂಡಿದ್ರೆ ನಿಮ್ಮ ಹಣ ವಾಪಸ್
ಕರ್ನಾಟಕ ಸರ್ಕಾರವು ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇತ್ತೀಚೆಗೆ ಕಾಂತಾರ ಚಾಪ್ಟರ್-1 ಸೇರಿದಂತೆ ಹಲವು ಸಿನಿಮಾಗಳು ರಿಲೀಸ್ ಆಗಿದ್ದು, ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಸಾಮಾನ್ಯವಾಗಿ ಸಿನಿಮಾ ಟಿಕೆಟ್ ಅನ್ನು ಶೋ ಮುಗಿದ ನಂತರ ಕಸದ ಬುಟ್ಟಿಗೆ ಅಥವಾ ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ ನೀವು ವೀಕ್ಷಿಸಿದ ಸಿನಿಮಾ ಟಿಕೆಟ್ ಇದ್ದರೆ ನಿಮ್ಮ ಹಣ ವಾಪಸ್ ಸಿಗಲಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.
ಹೌದು, ಕಳೆದ ವಾರದಿಂದ ಸಿನಿಮಾ ನೋಡಿದವರು ತಮ್ಮ ಸಿನಿಮಾ ಟಿಕೆಟ್‌ಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ ಸರ್ಕಾರವೇ ಹೇಳಿದೆ. ಅಲ್ಲದೆ ಇನ್ನು ಮುಂದೆ ನೀವು ಚಿತ್ರ ವೀಕ್ಷಣೆ ಬಳಿಕ ಟಿಕೆಟ್ ಎಸೆಯದೆ ಭದ್ರವಾಗಿರಿಸಿಕೊಳ್ಳಿ ಎಂದೂ ಮಾಹಿತಿ ನೀಡಿದೆ. ಈ ವಿಚಾರ ಕೇಳಿ ಸಿನಿ ಪ್ರೇಕ್ಷಕರಿಗೆ ಶಾಕ್ ಆಗುವುದು ಗ್ಯಾರಂಟಿ. ರಾಜ್ಯ ಸರ್ಕಾರವೇ ಹೀಗೆ ಹೇಳೋಕೆ ಕಾರಣವೂ ಇದೆ. ಅದೇನು ಎಂಬ ವಿವರ ಇಲ್ಲಿದೆ..

ಇತ್ತೀಚೆಗೆ ಕರ್ನಾಟಕದಲ್ಲಿ ಏಕರೂಪದ ಸಿನಿಮಾ ಟಿಕೆಟ್ ದರ ನಿಯಮವನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿತ್ತು. ಅದರಂತೆ ಕರ್ನಾಟಕದಾದ್ಯಂತ ಎಲ್ಲ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಯಾವುದೇ ಭಾಷೆಯ ಸಿನಿಮಾ ಟಿಕೆಟ್ ದರ ಗರಿಷ್ಠ ₹200 ಮೀರಬಾರದು ಎಂದು ಖಡಕ್ ಆದೇಶ ಹೊರಡಿಸಿತ್ತು. ಹೀಗಾಗಿ ಎಲ್ಲ ಸಿನಿಮಾಗಳ ಟಿಕೆಟ್ ದರ ಇನ್ಮುಂದೆ ಒಂದೇ ರೀತಿ ಇರುತ್ತೆ ಎಂದು ಪ್ರೇಕ್ಷಕರು ಖುಷಿಪಟ್ಟಿದ್ದರು.
ಆದರೆ, ಸರ್ಕಾರದ ಈ ಆದೇಶ ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಕೋರ್ಟ್ ತಡೆ ನೀಡಿರುವುದರಿಂದ ಈ ನಿಯಮ ಇನ್ನೂ ರಾಜ್ಯದಲ್ಲಿ ಅನುಷ್ಠಾನಗೊಂಡಿಲ್ಲ. ಆದರೆ ಸರ್ಕಾರದ ಪರವಾಗಿಯೇ ಕೋರ್ಟ್ ತೀರ್ಪು ಬರುವ ನಿರೀಕ್ಷೆ ಇರುವುದರಿಂದ ರಾಜ್ಯ ಸರ್ಕಾರವೇ ಸಿನಿಮಾ ಪ್ರೇಕ್ಷಕರಿಗೆ ಈ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಟಿಕೆಟ್ ದರ ₹200ಕ್ಕಿಂತ ಹೆಚ್ಚು ಪಾವತಿಸಿದ್ರೆ ವಾಪಸ್
ಟಿಕೆಟ್ ಮೇಲಿನ ಗರಿಷ್ಠ ₹200 ದರ ಮಿತಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸರ್ಕಾರದ ನಿರ್ಣಯದ ಪರವಾಗಿ ತೀರ್ಪು ಬಂದರೆ, ನೀವು ಹೆಚ್ಚುವರಿಯಾಗಿ ಪಾವತಿಸಿದ ಹಣ ವಾಪಸ್ ಸಿಗಲಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರಿಗೆ ಟಿಕೆಟ್ ಮಾರಾಟದ ದಾಖಲೆ ನಿರ್ವಹಣೆಗೆ ಸೂಚಿಸಲಾಗಿದೆ ಎಂದು ಹೇಳಿದೆ. ಹಾಗಾಗಿ ಚಿತ್ರ ವೀಕ್ಷಣೆ ಬಳಿಕ ಟಿಕೆಟ್ ಎಸೆಯದೆ ಭದ್ರವಾಗಿ ಇಟ್ಟುಕೊಳ್ಳಿ ಎಂದು ಮಾಹಿತಿ ನೀಡಿದೆ.
ಈಗಾಗಳೇ ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಏಕರೂಪದ ಟಿಕೆಟ್ ದರ ನಿಯಮ ಜಾರಿಯಲ್ಲಿದೆ. ಅದಕ್ಕೆ ಅಲ್ಲಿನ ಚಿತ್ರರಂಗದವರು ಒಪ್ಪಿದ್ದಾರೆ. ಅಲ್ಲದೆ ಸರ್ಕಾರದ ಒಪ್ಪಿಗೆ ಮೇರೆಗೆ ಟಿಕೆಟ್ ದರ ಏರಿಸುವ ಅವಕಾಶವೂ ನೀಡಲಾಗಿದೆ. ಪರಭಾಷಾ ಚಿತ್ರಗಳ ಹಾವಳಿ ನಡುವೆ ನಲುಗುತ್ತಿದ್ದ ಕನ್ನಡ ಚಿತ್ರರಂಗದ ಉಳಿವಿಗಾಗಿ ಈ ನಿಯಮ ತಂದಿದ್ದು ಅನುಕೂಲವಾಗುತ್ತೆ ಎಂದು ಹೇಳಲಾಗಿತ್ತು. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸರ್ಕಾರದ ಪರವಾಗಿಯೇ ತೀರ್ಪು ಬಂದರೆ ಸಿನಿಮಾ ನೋಡಿದ್ದರೂ ಟಿಕೆಟ್ ಉಳಿಸಿಕೊಂಡಿದ್ದರೆ, ಹೆಚ್ಚುವರಿ ಪಾವತಿಸಿದ ಹಣ ವಾಪಸ್ ಆಗಲಿದೆ.












Click it and Unblock the Notifications