ಸಚಿವ ಜಮೀರ್ ಪುತ್ರನ ಸಿನಿಮಾಗೆ ಮತ್ತೊಂದು ಕಂಟಕ
ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿರುವ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸದ್ಯ ಜೈದ್ ನಟಿಸುತ್ತಿರುವ ಕಲ್ಟ್ ಸಿನಿಮಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದು, ಇದೀಗ ಕಲ್ಟ್ ಸಿನಿಮಾದ ಶೂಟಿಂಗ್‌ಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ.
ಜೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಶೂಟಿಂಗ್ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಣಾಪುರ, ರಂಗಾಪುರ ಗ್ರಾಮದ ಬಳಿ ನಡೆಯುತ್ತಿತ್ತು. ಆದರೆ, ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳದಲ್ಲಿ ಶೂಟಿಂಗ್ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೆ ಈ ಭಾಗದಲ್ಲಿ ಬೆಂಕಿ ಹಚ್ಚಲಾಗಿದೆ ಎಂಬ ಆರೋಪದ ಹಿನ್ನೆಲೆ ಶೂಟಿಂಗ್ ನಿಲ್ಲಿಸುವಂತೆ ತಡೆ ನೀಡಿದ್ದಾರೆ.

ಸಣಾಪೂರ ಗ್ರಾಮದ ತುಂಗಭದ್ರಾ ನದಿ ದಡದಲ್ಲಿ ಬೆಂಕಿ ಹಚ್ಚಿ ಶೂಟಿಂಗ್ ಮಾಡಲಾಗುತ್ತಿತ್ತು. ಇನ್ನು ಅನುಮತಿ ಪಡೆಯದೆ ಶೂಟಿಂಗ್ ನಡೆಸುತ್ತಿರುವುದನ್ನು ಕಂಡು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಬಳಿಕ ಕೂಡಲೇ ಶೂಟಿಂಗ್ ನಿಲ್ಲಿಸುವಂತೆ ತಡೆದಿದ್ದಾರೆ ಎನ್ನಲಾಗಿದೆ. ಕಲ್ಟ್ ಸಿನಿಮಾದಲ್ಲಿ ಜೈದ್ ಖಾನ್ ಹಾಗೂ ನಟಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಸದ್ಯ ಎರಡನೇ ಬಾರಿ ಈ ಚಿತ್ರತಂಡದ ವಿರುದ್ಧ ಆರೋಪ ಕೇಳಿಬಂದಿದೆ.
ಸಣಾಪುರ ಹಾಗೂ ರಂಗಾಪುರ ನೈಸರ್ಗಿಕ ಪ್ರದೇಶಗಳು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಹಂಪಿ ಹಾಗೂ ಕೊಪ್ಪಳ ತಾಲೂಕಿನ ಐತಿಹಾಸಿಕ ಸ್ಥಳಗಳಲ್ಲಿ ಈ ಸಿನಿಮಾದ ಶೂಟಿಂಗ್ ನಡೆಸಲಾಗುತ್ತಿದೆ. ಸದ್ಯ ಬೆಂಕಿ ಚಿತ್ರತಂಡ ಬೆಂಕಿ ಹಾಕಿರುವ ಸಾಣಾಪುರ ಕೆರೆ ಸೇರಿದಂತೆ ಸುತ್ತಲಿನ ಪ್ರದೇಶವನ್ನು ನೀರು ನಾಯಿ ಸಂರಕ್ಷಿತ ಪ್ರದೇಶ ಎಂದು ಕೊಪ್ಪಳ ಜಿಲ್ಲಾಡಳಿತ ಘೋಷಿಸಿದೆ. ಈ ಹಿನ್ನೆಲೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಕಲ್ಟ್ ಸಿನಿಮಾ ಶೂಟಿಂಗ್ ಅನ್ನು ಅರಣ್ಯಾಧಿಕಾರಿಗಳು ತಡೆದಿದ್ದಾರೆ.
ನಿಯಮಾನುಸಾರ ಅನುಮತಿ ಪಡೆದ ನಂತರ ಶೂಟಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಚಿತ್ರತಂಡಕ್ಕೆ ಸೂಚನೆ ಕೊಟ್ಟಿದ್ದಾರೆ. ಇನ್ನು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಸಿನಿಮಾ ಸೇರಿದಂತೆ ಯಾವುದೇ ರೀತಿಯ ಶೂಟಿಂಗ್‌ಗೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು ಎನ್ನುವ ಕಡ್ಡಾಯ ನಿಯಮವಿದೆ. ಇತ್ತೀಚೆಗೆ ಅರಣ್ಯ ಇಲಾಖೆಯು ಶೂಟಿಂಗ್ ಸ್ಥಳಗಳ ಮೇಲೆ ನಿಗಾ ಇಟ್ಟಿದ್ದು, ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ಸೆಟ್, ರಿಷಬ್ ಶೆಟ್ಟಿ ಅವರ ಶೂಟಿಂಗ್ ಸ್ಥಳಗಳಲ್ಲಿಯೂ ಮುಲಾಜಿಲ್ಲದೆ ಕ್ರಮ ತೆಗೆದುಕೊಂಡಿತ್ತು.

ಇದೇ ಚಿತ್ರತಂಡ ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಶೂಟಿಂಗ್‌ನಲ್ಲಿ ಡ್ರೋನ್ ಟೆಕ್ನಿಷಿಯನ್‌ವೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಡ್ರೋನ್ ಹಾಳಾಗಲು ಚಿತ್ರತಂಡವೇ ಕಾರಣ, ಆದರೆ ಯಾವುದೇ ನಷ್ಟಪರಿಹಾರ ನೀಡಿಲ್ಲ ಎಂದು ಆರೋಪಿಸಿ ಸೂಸೈಡ್‌ಗೆ ಯತ್ನಿಸಿದ್ದರು. ಈ ಪ್ರಕರಣದಲ್ಲಿ ನಟ ಜೈದ್ ಅವರ ಹೆಸರು ಕೂಡ ಕೇಳಿಬಂದಿತ್ತು. ಕೊನೆಗೆ ಜೈದ್ ಅವರೇ ನಷ್ಟ ಪರಿಹಾರ ನೀಡಲು ಒಪ್ಪಿರುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದರು.












Click it and Unblock the Notifications