ನಟಿ ತಮನ್ನಾ ಬದಲು ಇವರನ್ನ ರಾಯಭಾರಿ ಮಾಡಿ: ಕರವೇ ಮಹತ್ವದ ಸಲಹೆ
ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಬರೋಬ್ಬರಿ 6.2 ಕೋಟಿ ರೂಪಾಯಿ ಸಂಭಾವನೆಗೆ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನ ಬ್ರಾಂಡ್ ಅಂಬಾಸೆಡರ್ ಆಗಿ ನೇಮಕ ಮಾಡಿರುವುದಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಇತರ ಉತ್ಪನ್ನಗಳು ಕನ್ನಡದ ನೆಲದಲ್ಲಿ ತಯಾರಾಗಿ ಜಗತ್ತಿನೆಲ್ಲೆಡೆ ಕಂಪು ಸೂಸಿವೆ. ಹೀಗಿರುವಾಗ ಬೇರೆ ಭಾಷೆಯ ನಟಿಯಾದ ತಮನ್ನಾ ಭಾಟಿಯಾ ಅವರನ್ನೇ ಇದರ ರಾಯಭಾರಿಯನ್ನಾಗಿ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿಎ ನಾರಾಯಣಗೌಡ ಕೂಡ ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಮಹತ್ವದ ಸಲಹೆ ನೀಡಿದ್ದಾರೆ.
ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ನೀಡಿ ನೇಮಕ ಮಾಡಿರುವುದು ಅವಿವೇಕ, ಅಸಂಬದ್ಧ, ಅನೈತಿಕ ಹಾಗೂ ಬೇಜವಾಬ್ದಾರಿಯುತ ತೀರ್ಮಾನ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈಸೂರು ಸೋಪ್ಸ್ ಸಂಸ್ಥೆ ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿಯಾಗಿದ್ದು, 1916ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದರು. ಈ ಕಂಪನಿಯು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದ್ದು, ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರು ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತೆ? ಎಂದು ಪ್ರಶ್ನಿಸಿದ್ದಾರೆ.

ಈ ನೇಮಕಕ್ಕಾಗಿ ಕರ್ನಾಟಕ ಸರ್ಕಾರವು ಬರೋಬ್ಬರಿ 6.20 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ವ್ಯಯಿಸಿರುವುದು ಇನ್ನಷ್ಟು ಆಕ್ಷೇಪಾರ್ಹ. ಈ ನಿರ್ಧಾರದ ವಿರುದ್ಧ ನಮ್ಮ ತೀವ್ರ ವಿರೋಧವಿದೆ. ಇದು ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿಯಾಗಿದ್ದು, ಈ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ ಅವರನ್ನು ನೇಮಿಸಲು ಸರ್ಕಾರವು 6.20 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ವ್ಯಯಿಸಿರುವುದು ಸಂಪೂರ್ಣವಾಗಿ ಅನಗತ್ಯ ಮತ್ತು ಜವಾಬ್ದಾರಿಯಿಲ್ಲದ ನಿರ್ಧಾರ. ಈ ಹಣವನ್ನು ಕರ್ನಾಟಕದ ಜನರ ಒಳಿತಿಗಾಗಿ, ಉದಾಹರಣೆಗೆ ಶಿಕ್ಷಣ, ಆರೋಗ್ಯ, ಅಥವಾ ಉದ್ಯೋಗ ಸೃಷ್ಟಿಗೆ ಬಳಸಬಹುದಿತ್ತು. ಸರ್ಕಾರವು ಜನರ ತೆರಿಗೆ ಹಣವನ್ನು ಈ ರೀತಿ ವ್ಯರ್ಥವಾಗಿ ಖರ್ಚು ಮಾಡಿರುವುದು ಖಂಡನೀಯ ಎಂದು ದೂರಿದ್ದಾರೆ.
ಕರ್ನಾಟಕದಲ್ಲೇ ಪ್ರತಿಭಾವಂತ ನಟಿಯರಿದ್ದಾರೆ!
ಅನೇಕ ಪ್ರತಿಭಾವಂತ ಮತ್ತು ಜನಪ್ರಿಯ ಕನ್ನಡ ನಟಿಯರು ಕರ್ನಾಟಕದಲ್ಲೇ ಇದ್ದಾರೆ. ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದರೆ, ಕನ್ನಡಿಗರ ಮನಸ್ಸಿಗೆ ಹತ್ತಿರವಾಗುವ ಜೊತೆಗೆ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹವೂ ನೀಡಬಹುದಿತ್ತು. ಆದರೆ ಕರ್ನಾಟಕ ಸರ್ಕಾರ ಮತ್ತು ಮೈಸೂರು ಸೋಪ್ಸ್ ಕಂಪನಿಯು ಕನ್ನಡ ನಟಿಯರನ್ನು ಕಡೆಗಣಿಸಿ ಬಾಲಿವುಡ್ ನಟಿಯನ್ನು ಆಯ್ಕೆ ಮಾಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತದ್ದು. ಕರ್ನಾಟಕದ ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುವ ಕಂಪನಿಯು ಸ್ಥಳೀಯ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡಬೇಕಿತ್ತು ಎಂದು ಗರಂ ಆಗಿದ್ದಾರೆ.

ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಪ್ರಾಥಮಿಕ ಗ್ರಾಹಕರು ಕರ್ನಾಟಕದ ಕನ್ನಡಿಗರಾಗಿದ್ದಾರೆ. ಕನ್ನಡಿಗರಿಗೆ ತಮ್ಮ ಸಂಸ್ಕೃತಿ ಮತ್ತು ಭಾಷೆಯೊಂದಿಗೆ ಸಾವಯವ ಸಂಬಂಧವಿರುವ ಕನ್ನಡ ನಟಿಯರೊಂದಿಗೆ ಬ್ರಾಂಡ್ ಅನ್ನು ಬೆಳೆಸುವುದು ಸಹಜವಾಗಿ ಪರಿಣಾಮಕಾರಿ. ಆದರೆ ತಮನ್ನಾ ಭಾಟಿಯಾ ಅವರಂತಹ ಬಾಲಿವುಡ್ ನಟಿಯನ್ನು ಆಯ್ಕೆ ಮಾಡುವ ಮೂಲಕ ಕಂಪನಿಯು ಕನ್ನಡಿಗರ ಭಾವನೆಗಳಿಗೆ ಮತ್ತು ಸ್ಥಳೀಯ ಮಾರುಕಟ್ಟೆಯ ಸಂವೇದನೆಗೆ ಗೌರವ ನೀಡದಿರುವುದು ಆಕ್ಷೇಪಾರ್ಹ ಎಂದು ಟೀಕಿಸಿದ್ದಾರೆ.
ತಮನ್ನಾ ಭಾಟಿಯಾ ಅವರು ಕರ್ನಾಟಕದ ಸಂಸ್ಕೃತಿ, ಭಾಷೆ, ಅಥವಾ ಮೈಸೂರು ಸೋಪ್ಸ್‌ನ ಇತಿಹಾಸದೊಂದಿಗೆ ಯಾವುದೇ ನೇರ ಸಂಬಂಧ ಹೊಂದಿಲ್ಲ. ಇಂತಹ ಸ್ಥಿತಿಯಲ್ಲಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡುವುದು ಸಂಪೂರ್ಣವಾಗಿ ಅಪ್ರಸ್ತುತವಾಗಿದೆ. ಹಿಂದಿ ಚಿತ್ರರಂಗದ ನಟಿಯರನ್ನು ಆಯ್ಕೆ ಮಾಡುವ ಮೂಲಕ ಕರ್ನಾಟಕದ ಸ್ಥಳೀಯ ಸಂಸ್ಕೃತಿಯ ಮೇಲೆ ಹಿಂದಿ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುವುದು ಕರ್ನಾಟಕ ರಕ್ಷಣಾ ವೇದಿಕೆಗೆ ಸ್ವೀಕಾರಾರ್ಹವಲ್ಲ. ಮೈಸೂರು ಸೋಪ್ಸ್‌ನಂತಹ ಕರ್ನಾಟಕದ ಐತಿಹಾಸಿಕ ಬ್ರಾಂಡ್ ಕನ್ನಡಿಗರ ಗುರುತನ್ನು ಪ್ರತಿನಿಧಿಸುವ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಮನ್ನಾ ನೇಮಕ ರದ್ದು ಮಾಡಿ!
ಸರ್ಕಾರ ಕೂಡಲೇ ತಮನ್ನಾ ಭಾಟಿಯಾ ಅವರ ಬ್ರಾಂಡ್ ಅಂಬಾಸಿಡರ್ ನೇಮಕವನ್ನು ತಕ್ಷಣವೇ ರದ್ದುಗೊಳಿಸಬೇಕು. ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕನ್ನಡ ನಟಿಯರನ್ನು ಆಯ್ಕೆ ಮಾಡಬೇಕು. ಕರ್ನಾಟಕ ಸರ್ಕಾರವು 6.20 ಕೋಟಿ ರೂಪಾಯಿಗಳ ವೆಚ್ಚದ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಈ ಹಣವನ್ನು ಕರ್ನಾಟಕದ ಜನರ ಒಳಿತಿಗಾಗಿ ಮಾತ್ರವೇ ಬಳಸಬೇಕು. ಭವಿಷ್ಯದಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗೆ ಗೌರವ ನೀಡುವಂತಹ ನಿರ್ಧಾರಗಳನ್ನು ಮಾತ್ರ ತೆಗೆದುಕೊಳ್ಳುವಂತೆ ಖಾತರಿ ನೀಡಬೇಕು ಎಂದು ಹೇಳಿದ್ದಾರೆ.
ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗ. ಈ ಕಂಪನಿಯು ಕನ್ನಡಿಗರ ಗುರುತನ್ನು ಪ್ರತಿನಿಧಿಸುವ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಮನ್ನಾ ಭಾಟಿಯಾ ಅವರ ನೇಮಕವು ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ಈ ನಿರ್ಧಾರವನ್ನ ತಕ್ಷಣವೇ ಹಿಂಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರ ಪ್ರತಿಭಟನೆ ನಡೆಸಲಿದೆ. ಕರ್ನಾಟಕ ಸರ್ಕಾರ ಮತ್ತು ಮೈಸೂರು ಸೋಪ್ಸ್ ಕಂಪನಿಯು ಕನ್ನಡಿಗರ ಭಾವನೆಗಳಿಗೆ ಮನ್ನಣೆ ನೀಡಿ, ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜನರ ಹಣ ಪೋಲು
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ತಮನ್ನಾ ಭಾಟಿಯಾ ಅವರ ನೇಮಕವನ್ನು ಖಂಡಿಸಿದ್ದಾರೆ. ಯಾವ ನಟಿ ಕೂಡ ಇಲ್ಲದೇ ಕಳೆದ ವರ್ಷ 400 ಕೋಟಿ ಲಾಭ ಮಾಡಿರುವ ಮೈಸೂರು ಸ್ಯಾಂಡಲ್ ಸೋಪ್ ಕಂಪನಿ. ಈಗ ಆ ದುಡ್ಡು ಹೇಗೆ ಖರ್ಚು ಮಾಡಬೇಕು ಅಂತ 6 ಕೋಟಿ ಕೊಟ್ಟು ತಮನ್ನಾ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುವುದೇನಿದೆ? ಎಂದು ಸಚಿವ ಎಂಬಿ ಪಾಟೀಲ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ನಿಮಗೆ ಅಗತ್ಯವಿದ್ದರೆ ಯಾಕೆ ಕರ್ನಾಟಕದಲ್ಲಿ ಯಾರೂ ನಟಿಯರು ಇಲ್ಲವೇ? ಜನರ ದುಡ್ಡನ್ನು ಹೀಗೆ ಪೋಲು ಮಾಡೋದು ಸರಿಯೇ? ಕೂಡಲೇ ಈ ನೇಮಕ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications