ಕಾಂತಾರ ಚಾಪ್ಟರ್-1 ಟಿಕೆಟ್ ದರ ಏರಿಕೆಗೆ ಈ ರಾಜ್ಯದಲ್ಲೂ ಗ್ರೀನ್ ಸಿಗ್ನಲ್
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ ಎರಡರಂದು ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇದೀಗ ಆಂಧ್ರಪ್ರದೇಶದಲ್ಲಿ ಕಾಂತಾರ ಸಿನಿಮಾದ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಪ್ರಿಯ ತೆಲುಗು ನಟ ಪವನ್ ಕಲ್ಯಾಣ್ ಅವರು ರಿಷಬ್ ಸಿನಿಮಾದ ಟಿಕೆಟ್ ಬೆಲೆಯ ಏರಿಕೆಗೆ ಬೆಂಬಲ ನೀಡಿದ್ದಾರೆ. ತಮ್ಮ "OG" ಸಿನಿಮಾ ರಿಲೀಸ್ ವೇಳೆ ಕರ್ನಾಟಕದಲ್ಲಿ ಎದುರಾದ ಸವಾಲುಗಳ ನಡುವೆಯೂ, ಪವನ್ ಕಲ್ಯಾಣ್ ಈ ನಿರ್ಧಾರ ತಿಳಿಸಿದ್ದಾರೆ.
ಯಾವುದೇ ಭಾಷೆಯ ಚಿತ್ರದ ಬಾಯ್‌ಕಾಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರಕಲೆ, ಸಂಗೀತ, ಕ್ರೀಡೆ ಮತ್ತು ಸಂಸ್ಕೃತಿ ಭಾಷಾ, ಪ್ರದೇಶ, ಜಾತಿ ಅಥವಾ ಧರ್ಮದ ಗಡಿ ಮೀರಿ ಜನರನ್ನು ಜೋಡಿಸುತ್ತದೆ. ಹೀಗಾಗಿ ಸಿನಿಮಾಗಳಿಗೆ ವಿರೋಧ ವ್ಯಕ್ತಪಡಿಸುವುದು ತಪ್ಪು ಎಂದು ಹೇಳಿದ್ದಾರೆ. ಕಲೆ ಮತ್ತು ಸಿನಿಮಾ ಸಂತೋಷವನ್ನು ಹರಡುವುದು, ಸಾಂಸ್ಕೃತಿಕ ಸೇತುವೆಯಾಗುವುದು ಮತ್ತು ಜನರನ್ನು ಸೇರಿಸುವುದೇ ಸಕಾರಾತ್ಮಕ ಹಾದಿ ಎಂದಿದ್ದಾರೆ.

ಪವನ್ ಕಲ್ಯಾಣ್ ಅವರ ಒಜಿ ಸಿನಿಮಾ ಕರ್ನಾಟಕದಲ್ಲಿ ಅಡೆತಡೆಗಳನ್ನು ಎದುರಿಸಿತು. ಮನಬಂದಂತೆ ಹುಚ್ಚಾಟ ಮೆರೆದ ಕಾರಣ ಕನ್ನಡಪರ ಹೋರಾಟಗಾರರು ತೆಲುಗು ಪ್ರೇಕ್ಷಕರಿಗೆ ಬಿಸಿ ಮುಟ್ಟಿಸಿದ್ದರು. ಕೆಲ ಚಿತ್ರಮಂದಿರಗಳ ಪ್ರದರ್ಶನಕ್ಕೆ ನಿರ್ಬಂಧಗಳನ್ನು ಸಹ ಎದುರಿಸಿತು. ಹೀಗಾಗಿ ಕನ್ನಡ ಸಿನಿಮಾಗಳನ್ನು ತೆಲುಗು ರಾಜ್ಯಗಳಲ್ಲಿ ಬಹಿಷ್ಕರಿಸುವುದಾಗಿ ಕೆಲವರು ಸೇಡು ಹೊರಹಾಕಿದ್ದರು.
ಆದರೆ ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ 'ಕಾಂತಾರ: ಅಧ್ಯಾಯ 1' ಚಿತ್ರದ ಟಿಕೆಟ್ ಬೆಲೆ ಏರಿಕೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಇತರ ಭಾಷೆಗಳ ಚಲನಚಿತ್ರಗಳ ವಿರುದ್ಧ ಯಾವುದೇ ಪ್ರತೀಕಾರದ ಕ್ರಮಗಳನ್ನು ತಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿನಿಮಾ, ಸಂಗೀತ, ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಭಾಷೆ, ಪ್ರದೇಶ, ಜಾತಿ ಅಥವಾ ಧರ್ಮದ ಮಿತಿಗಳಿಲ್ಲ ಎಂದು ಪವನ್ ಹೇಳಿದ್ದಾರೆ.
ಎಲ್ಲ ವರ್ಗದ ಜನರನ್ನು ರಂಜಿಸುವುದು ಮತ್ತು ಸಂಪರ್ಕಿಸುವುದು ಸಿನಿಮಾದ ಮೂಲ ಉದ್ದೇಶ. ವೈಯಕ್ತಿಕ ಕಾರ್ಯಸೂಚಿಗಳಿಂದ ಪ್ರೇರೇಪಿಸಲ್ಪಟ್ಟ ಕೆಲ ವ್ಯಕ್ತಿಗಳು ಕರ್ನಾಟಕದ ಚಿತ್ರಮಂದಿರಗಳಲ್ಲಿ OG ಪ್ರದರ್ಶನ ತಡೆಯಲು ಪ್ರಯತ್ನಿಸಿರುವುದು ದುರದೃಷ್ಟಕರ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂತಾರದಂತಹ ಕನ್ನಡ ಸಿನಿಮಾಗಳನ್ನ ನಮ್ಮ ತೆಲುಗು ರಾಜ್ಯಗಳಲ್ಲಿ ನಿರ್ಬಂಧಿಸಬೇಕು ಎಂದು ಕೆಲವರು ಧ್ವನಿ ಎತ್ತಿದ್ದಾರೆ. ಇದನ್ನು ನಾನು ಬೆಂಬಲಿಸುವುದಿಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಕಲೆ ಮತ್ತು ಸಿನಿಮಾ ಸಂತೋಷವನ್ನು ಹರಡಬೇಕು. ಸಂಸ್ಕೃತಿಗಳ ನಡುವೆ ಸೇತುವೆಯಾಗಬೇಕು. ಜನರನ್ನು ಬೇರ್ಪಡಿಸಬಾರದು, ಒಟ್ಟಿಗೆ ತರಬೇಕು ಎಂದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತಾವು ಇಷ್ಟಪಡುವ ಸಿನಿಮಾ ನೋಡುವ ಹಕ್ಕಿದೆ. ನಿಮಗೆ ಒಂದು ಸಿನಿಮಾ ಇಷ್ಟವಾಗದಿದ್ದರೆ, ಅದನ್ನು ನೋಡದಿರಲು ನೀವು ಆಯ್ಕೆ ಮಾಡಬಹುದು. ಆದರೆ ವೈಯಕ್ತಿಕ ದ್ವೇಷ ಅಥವಾ ಅಜೆಂಡಾಗಳನ್ನು ಬಳಸಿಕೊಂಡು ಸಿನಿಮಾಗಳನ್ನು ಗುರಿಯಾಗಿಸಿಕೊಳ್ಳುವುದು ಸರಿಯಲ್ಲ. ಇಂದು ಭಾರತೀಯ ಸಿನಿಮಾವನ್ನು ಪ್ರಪಂಚದಾದ್ಯಂತ ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕಲೆಯನ್ನು ಪ್ರಾದೇಶಿಕ ಮಿತಿಯೊಳಗೆ ಸೀಮಿತಗೊಳಿಸುವ ಯಾವುದೇ ಪ್ರಯತ್ನವನ್ನ ಬಲವಾಗಿ ತಿರಸ್ಕರಿಸಬೇಕು. ಒಳ್ಳೆಯ ಸಿನಿಮಾಗಳು ಎಲ್ಲಿಂದ ಬಂದರೂ, ಅವುಗಳನ್ನು ಬೆಂಬಲಿಸೋಣ ಎಂದು ಕರೆ ನೀಡಿದ್ದಾರೆ.












Click it and Unblock the Notifications